ಜಮಖಂಡಿ: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ನಗರದ ದೇಸಾಯಿ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಬಸವರಾಜ ಸಿಂಧೂರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ವಿಶ್ವವಿದ್ಯಾಲಯಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವುದನ್ನು ಬಿಟ್ಟು, ಮಚ್ಚಲು ನಿರ್ಧರಿಸಿರುವುದು ಸರಿಯಲ್ಲ. ಡಿಸಿಎಂ ಡಿ.ಕೆ ಶಿವಕುಮಾರ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಆರ್ಥಿಕ ಹಾಗೂ ಮೂಲ ಸೌಲಭ್ಯಗಳ ನೆಪ ಹೇಳಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ.
ಸರ್ಕಾರದ ಈ ನಡೆಯಿಂದ ಶಿಕ್ಷಣ ಕ್ಷೇತ್ರದ ಮೇಲೆ ಇರುವ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಎಂದು ಕಾರ್ಯಕರ್ತರು ದೂರಿದರು.
ಗುಣಮಟ್ಟದ ಶಿಕ್ಷಣ ಒದಗಿಸಲು 10 ಸಾವಿರ ವಿದ್ಯಾರ್ಥಿಗಳಿಗೆ ಒಂದು ವಿಶ್ವವಿದ್ಯಾಲಯ ಇರಬೇಕು. ಆದರೆ, ನಮ್ಮಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ ಈಗಿರುವ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 200 ಕಿಮೀ ದೂರ ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕು. ಇಂತಹ ಸಮಸ್ಯೆ ಪರಿಹಾರಕ್ಕೆ ಹೊಸ ವಿವಿ ಸಹಕಾರಿಯಾಗುತ್ತವೆ. ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸಬೇಕು ಹೊರತು ಅತಂತ್ರಗೊಳಿಸಬಾರದು ಎಂದರು.
ರಾಜ್ಯ ಸರ್ಕಾರ ಕೂಡಲೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದು ವಿಶ್ವವಿದ್ಯಾಲಯಗಳ ಮೂಲ ಸೌಲಭ್ಯಕ್ಕೆ ಅನುದಾನ ನೀಡಿ ಅವುಗಳ ಉನ್ನತೀಕರಣಕ್ಕಾಗಿ ಅನುದಾನ ನೀಡಬೇಕು ಎಂದು ನಗರ ಕಾರ್ಯದರ್ಶಿ ಪರಶುರಾಮ ಜಿಟ್ಟಿ, ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ ಒತ್ತಾಯಿಸಿದರು.
ಸೌಂದರ್ಯ ಜಕಾತಿ, ಶೀತಲ ಆಲಗೂರ, ಧರೆಪ್ಪ ಬಾಳೋಜಿ, ಶಿಲ್ಪಾ ಭಜಂತ್ರಿ, ಹನುಮಂತ ಹುದ್ದಾರ ಮತ್ತಿತರರಿದ್ದರು.