More

  ಉದಾಸೀನ ಬಿಡಿ ಜಾಗೃತ ಗ್ರಾಹಕರಾಗಿ

  ವಿಶ್ವ ಗ್ರಾಹಕ ಹಕ್ಕುಗಳ ದಿನ (ಮಾರ್ಚ್ 15) ಹಿನ್ನೆಲೆಯಲ್ಲಿ ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್, ಆಡಳಿತಾಧಿಕಾರಿ ವಿಜಯ್ ಕುಮಾರ್ ಹಾಗೂ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್ ಅವರು ಪಾಲ್ಗೊಂಡು ಸಂಸ್ಥೆಯ ಕಾರ್ಯಾಚರಣೆ, ಆಶಯ ಹಾಗೂ ಗ್ರಾಹಕ ಜಾಗೃತಿ ಬಗ್ಗೆ ಮಾತನಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಓದುಗರು ಕೇಳಿದ ಪ್ರಶ್ನೆಗಳಿಗೆ ಪರಿಹಾರ ಸೂಚಿಸಿ, ಮಾರ್ಗದರ್ಶನ ನೀಡಿದರು.

  ಬೆಂಗಳೂರು: ಯಾವುದೇ ವಸ್ತುಗಳ ಖರೀದಿ ವೇಳೆ ಅವುಗಳ ಸಾಚಾತನ, ಗುಣಮಟ್ಟ ಇಲ್ಲದಿದ್ದಾಗ, ತೂಕದಲ್ಲಿ ವ್ಯತ್ಯಾಸ, ಎಂಆರ್​ಪಿಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ, ಹೀಗೆ ತಾನು ಪಡೆಯುವ ಸೇವೆ ತೃಪ್ತಿಕರವಾಗಿಲ್ಲದಿದ್ದಲ್ಲಿ ಮಾರಾಟಗಾರನ ವಿರುದ್ಧ ದೂರು ನೀಡಿ ತನ್ನ ಹಕ್ಕನ್ನು ಸಂರಕ್ಷಿಸಿಕೊಳ್ಳಬಹುದು. ಆದರೆ, ಹೆಚ್ಚಿನ ಜನರಿಗೆ ಇದರ ಅರಿವೇ ಇರುವುದಿಲ್ಲ. ಒಂದು ರೂಪಾಯಿ ಹೆಚ್ಚಿಗೆ ಹಣ ತೆಗೆದುಕೊಂಡರೂ, ಪರವಾಗಿಲ್ಲ ಬಿಡಿ, ಚಲ್ತಾ ಹೈ… ಎಂಬ ಉದಾಸೀನತೆ ತೋರುವವರೇ ಹೆಚ್ಚು. ಅರಿವಿನ ಕೊರತೆಯಿಂದಾಗಿ ಇಂತಹ ನಿಲುವಿಗೆ ಅಂಟಿಕೊಳ್ಳದೆ ಮಾರಾಟಗಾರ-ಗ್ರಾಹಕ ಮಧ್ಯೆ ಪಾರದರ್ಶಕ ವಹಿವಾಟು ನಡೆಯಲು ಗ್ರಾಹಕ ಜಾಗೃತಿ ಅತ್ಯಗತ್ಯ ಎಂದು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್ ವಿಜಯ್ ಕುಮಾರ್ ಹಾಗೂ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್ ಪ್ರತಿಪಾದಿಸಿದರು.

  ಸರ್ಕಾರ ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೂಲಕ ದೇಶದ ಜನರಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ. ಈ ಗ್ರಾಹಕ ಹಕ್ಕು ಎಂಬ ಅಸ್ತ್ರದ ಮೂಲಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಯನ್ನು ಹತ್ತಿಕಲು ಸಾಧ್ಯವಿದೆ. ‘ಗ್ರಾಹಕನೇ ಬಾಸ್, ಗ್ರಾಹಕರೇ ದೇವರು’ ಎಂಬ ಪರಿಕಲ್ಪನೆಯಡಿ ನ್ಯಾಯಯುತವಾಗಿ ವ್ಯಾಪಾರ ಮಾಡುವ ವಾತಾವರಣ ಸೃಷ್ಟಿಸಲು ಗ್ರಾಹಕ ಹಕ್ಕುಗಳು ರಾಮಬಾಣದಂತಿದೆ. ಇದನ್ನು ಬಳಸಿಕೊಂಡು ಗ್ರಾಹಕರು ಹೆಚ್ಚು ಹೆಚ್ಚು ಜಾಗೃತರಾಗಬೇಕಿದೆ ಎಂದು ಈ ಇಬ್ಬರೂ ಅಧಿಕಾರಿಗಳು ತಿಳಿಸಿದರು.

  ಗ್ರಾಹಕ ಆಯೋಗಕ್ಕೆ ಯಾರೇ ವ್ಯಕ್ತಿ ತನಗಾದ ಮೋಸ, ಸೇವಾನೂನ್ಯತೆ ಬಗ್ಗೆ ದೂರು ಸಲ್ಲಿಸಬಹುದು. 45 ದಿನಗಳೊಳಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ತ್ವರಿತವಾಗಿ ಪರಿಹಾರ ಸಿಗುವುದರಿಂದ ಗ್ರಾಹಕ ಆಯೋಗಕ್ಕೆ ದೂರು ದಾಖಲಿಸಲು ಹಿಂದೇಟು ಹಾಕುವುದು ಬೇಡ ಎಂದು ರವಿಶಂಕರ್ ಕಿವಿಮಾತು ಹೇಳಿದರು.

  ಹಾಲಿಗೆ ಅಧಿಕ ದರ ವಸೂಲಿ ಸಲ್ಲ: ಯಾವುದೇ ಪದಾರ್ಥಗಳನ್ನು ಅವುಗಳ ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್​ಪಿ) ಹೆಚ್ಚು ಹಣವನ್ನು ವಸೂಲು ಮಾಡುವಂತಿಲ್ಲ. ದಿನನಿತ್ಯ ಹಾಲನ್ನು ಮಾರಾಟ ಮಾಡುವ ಮಳಿಗೆದಾರರು ಕ್ಷೀರವನ್ನು ಫ್ರಿಜ್​ನಲ್ಲಿಟ್ಟಿರುವ ಕಾರಣ ನೀಡಿ ಪ್ರತೀ ಪ್ಯಾಕೆಟ್ ಮೇಲೆ 50 ಪೈಸೆ ಅಥವಾ 1 ರೂ. ಹೆಚ್ಚುವರಿಯಾಗಿ ಹಣವನ್ನು ಗ್ರಾಹಕರಿಂದ ಪಡೆಯುತ್ತಿದ್ದಾರೆ. ಆದರೆ, ಮಾರಾಟಗಾರರಿಗೆ ಎಂಆರ್​ಪಿ ದರದಲ್ಲೇ ಲಾಭಾಂಶ ಸಹಿತ ಇತರೆಲ್ಲ ಬಾಬ್ತಿಗೆ ಕಮಿಷನ್ ನೀಡಲಾಗುತ್ತದೆ. ಹಾಗಾಗಿ ಹಾಲನ್ನು ಫ್ರಿಜ್​ನಲ್ಲಿಟ್ಟಿರುವುದು ಅಥವಾ ವಿದ್ಯುತ್ ಬಳಕೆ ನೆಪ ಮಾಡಿ ಗ್ರಾಹಕರಿಂದ ಹೆಚ್ಚಿನ ಹಣ ಪಡೆದರೆ ಅದು ಅಪರಾಧ. ಈ ಬಗ್ಗೆ ಗ್ರಾಹಕರು ನೇರವಾಗಿ ಆಯೋಗಕ್ಕೆ ಸಾಕ್ಷಿ ಸಮೇತ ದೂರು ನೀಡಿದರೆ ವಿಚಾರಣೆ ನಡೆಸಿ ತಪು್ಪ ಎಸಗಿದ್ದು ದೃಢಪಟ್ಟಲ್ಲಿ ಆಯೋಗಕ್ಕೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ.

  ಆರ್​ಆರ್​ಆರ್ ಪರಿಹಾರ: ಗ್ರಾಹಕ ಆಯೋಗದ ಕಾಯ್ದೆ 39ರ ಮಾನದಂಡವನ್ನು ಆಧರಿಸಿ 13 ವಿಧದಲ್ಲಿ ಪರಿಹಾರ ನೀಡಬಹುದಾಗಿದೆ. ಈ ಪೈಕಿ ಪ್ರಮುಖವಾಗಿ ಮೂರು ಪರಿಹಾರಗಳು ಆರ್​ಆರ್​ಆರ್ ಎಂದೇ ಪ್ರಸಿದ್ಧಿಯಾಗಿವೆ. ರೀಫಂಡ್ (ಹಣ ಹಿಂದಿರುಗಿಸುವಿಕೆ), ರೀಪ್ಲೇಸ್ (ಉತ್ಪನ್ನ ಬದಲಾಯಿಸುವಿಕೆ), ರೀಪೇ (ಮರುಪಾವತಿ) ಪ್ರಮುಖವಾದವು. ಬಹುತೇಕ ಪ್ರಕರಣಗಳಲ್ಲಿ ಮಾರಾಟಗಾರರು ಈ ‘ತ್ರಿಬಲ್ ಆರ್’ ನಿಯಮಕ್ಕೆ ಹೆದರುವುದರಿಂದ ಪ್ರಕರಣದ ವಿಚಾರಣೆ ಹಂತದಲ್ಲಿ ಗ್ರಾಹಕರಿಗೆ ಪರಿಹಾರ ಸಿಗುತ್ತಿದೆ ಎಂದು ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್ ತಿಳಿಸಿದರು.

  ದೂರು ಸಲ್ಲಿಸಲು 2 ವರ್ಷದ ಕಾಲಾವಕಾಶ: ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಲು 2 ವರ್ಷದ ಕಾಲಾವಕಾಶ ನಿಗದಿ ಮಾಡಲಾಗಿದೆ. ಈ ಅವಧಿಯೊಳಗೆ ದೂರು ದಾಖಲಿಸಲು ಸಾಧ್ಯವಾಗದಿದ್ದಲ್ಲಿ ಸ್ಪಷ್ಟ ಕಾರಣ ನೀಡಿದರೆ ದೂರನ್ನು ಮಾನ್ಯ ಮಾಡಲಾಗುತ್ತದೆ. ಈ ವಿನಾಯಿತಿಯನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಆಯೋಗ ನೀಡಬಹುದಾಗಿದ್ದು, ಯಾವ ಕಾರಣಕ್ಕೆ ವಿನಾಯಿತಿ ನೀಡಲಾಯಿತು ಎಂಬುದನ್ನು ದಾಖಲಿಸಬೇಕಾಗುತ್ತದೆ.

  ದೂರು ನೀಡಲು ಬೇಕಾದ ದಾಖಲೆ: ವಸ್ತುವಿನ ಖರೀದಿಯ ರಶೀದಿ, ಪೂರಕ ದಾಖಲಾತಿ ಹಾಗೂ ಉತ್ಪನ್ನದ ಚಿತ್ರವನ್ನು ಆಯೋಗಕ್ಕೆ ನೀಡುವ ದೂರಿನಲ್ಲಿ ಅಡಕಗೊಳಿಸಬೇಕು. ಇವುಗಳಲ್ಲಿ ರಶೀದಿ ಮಾತ್ರ ಇದ್ದರೂ ಗ್ರಾಹಕ ಕೋರ್ಟ್ ಮೊರೆ ಹೋಗಲು ಅವಕಾಶ ಇದೆ.

  ಮೂರು ವಿಷಯದಲ್ಲಿ ಕ್ಲೇಮ್ ಮಾಡುವಂತಿಲ್ಲ: ಉತ್ಪನ್ನಗಳ ಉಚಿತ ಕೊಡುಗೆ, ವಾಣಿಜ್ಯ ಉದ್ದೇಶ ಹಾಗೂ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಇವು ನೇರವಾಗಿ ನಾಗರಿಕರಿಗೆ ಸಂಬಂಧಿಸಿದ್ದರಿಂದ ಗ್ರಾಹಕ ಕೋರ್ಟ್ ಮೊರೆ ಹೋದಲ್ಲಿ ಮಾನ್ಯ ಮಾಡಲಾಗದು.

  ಪೊಲೀಸ್ ಸಿಬ್ಬಂದಿ ಬೇಕು: ಗ್ರಾಹಕ ಆಯೋಗ ನೀಡುವ ತೀರ್ಪು ಜಾರಿಯನ್ನು ತ್ವರಿತವಾಗಿ ಕೈಗೊಳ್ಳಲು ಸದ್ಯ ಪೊಲೀಸ್ ಬಲ ಇಲ್ಲ. ಪೊಲೀಸರನ್ನು ನಿಯೋಜಿಸಿದರೆ ಅವರಿಂದ ನೋಟಿಸ್ ಜಾರಿ ಹಾಗೂ ತೀರ್ಪು ಅನುಷ್ಠಾನದ ವೇಳೆ ಭದ್ರತೆ ಒದಗಿಸಬಹುದಾಗಿದೆ. ಈ ಒಂದು ಸೌಕರ್ಯವನ್ನು ಸರ್ಕಾರ ಒದಗಿಸಿದ್ದಲ್ಲಿ ಆಯೋಗವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಆಯೋಗದ ನ್ಯಾಯಾಂಗ ಸದಸ್ಯ ರವಿಶಂಕರ್.

  Commercial tax

  ಸರ್ಕಾರಿ ಸಿಬ್ಬಂದಿ ವಿರುದ್ಧ ದೂರು ನೀಡಲಾಗದು: ಸರ್ಕಾರಿ ಕಚೇರಿಗಳು ಸೇರಿದಂತೆ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವಿರುದ್ಧ ದೂರು ನೀಡಲಾಗದು. ಏಕೆಂದರೆ ಸರ್ಕಾರದ ಸೌಲಭ್ಯಗಳು ಉಚಿತವಾಗಿ ನೀಡುವ ಕಾರಣ ಅಲ್ಲಿ ಗ್ರಾಹಕ ವಿಷಯ ಉದ್ಭವವಾಗದು.

  ಅನ್​ಲೈನ್ ಮೂಲಕ ದೂರು ದಾಖಲಿಸಿ: ಆಯೋಗಕ್ಕೆ ದೂರು ನೀಡಲು ಖುದ್ದು ಕಚೇರಿಗೆ ಹೋಗಬೇಕೆಂದಿಲ್ಲ. ಈಗ ಅನ್​ಲೈನ್ ಮೂಲಕವೇ ಕಂಪ್ಲೇಂಟ್ ದಾಖಲಿಸಿ ಪರಿಹಾರ ಪಡೆಯಬಹುದು. ಆಯೋಗದ ವೆಬ್​ಸೈಟ್​ನಲ್ಲಿ ದೂರು ಸಲ್ಲಿಕೆ ವಿಭಾಗದಲ್ಲಿನ ಮಾಹಿತಿ ಓದಿ ದೂರು ಸಲ್ಲಿಸಬಹುದು. ದೂರಿನ ಜತೆ ಪೂರಕ ದಾಖಲೆ ಹಾಗೂ ಇತರ ಮಾಹಿತಿಯನ್ನು ಆನ್​ಲೈನ್ ಮೂಲಕವೇ ರವಾನಿಸಬಹುದು. ಅಗತ್ಯ ಬಿದ್ದಲ್ಲಿ ವಿಡಿಯೋ ಸಂವಾದ (ವಿಸಿ) ಮೂಲಕ ವಿಚಾರಣೆಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ವಿಸಿ ಸೌಲಭ್ಯವನ್ನು ಸದ್ಯದಲ್ಲೇ ಎಲ್ಲೆಡೆ ವಿಸ್ತರಿಸಲಾಗುತ್ತದೆ ಎಂದು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್ ವಿಜಯ್ ಕುಮಾರ್ ತಿಳಿಸಿದರು.

  ಸಂರ್ಪಸಿ: ನಿಮ್ಮ ಪ್ರದೇಶದಲ್ಲಿ ಗ್ರಾಹಕರ ಆಯೋಗವನ್ನು ಸಂರ್ಪಸಲು- www.ncdrc.nic.in ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರವಾಣಿ ಸಂಖ್ಯೆ 080-22355065, 080-22262865, 080-22260590

  ಜಾಲತಾಣ: www.kscdrc.kar.nic.in  ಗ್ರಾಹಕರು ಆನ್​ಲೈನ್ ಮೂಲಕ ನಲ್ಲಿ ದೂರು ದಾಖಲಿಸಬಹುದು. www.xonfonet.nic.in ಗ್ರಾಹಕರು ಆನ್​ಲೈನ್ ಮೂಲಕ https://edaakhil.nic.in./index.html

  ಪ್ರಮುಖ ಪ್ರಕರಣಗಳಲ್ಲಿ ಆಯೋಗದ ತೀರ್ಪಿನ ಸಾರಾಂಶ

  • ಹೋಟೆಲ್​ನಲ್ಲಿ ಇಡ್ಲಿ ಬುಕ್ ಮಾಡಿ ಅದನ್ನು ಮನೆಯಲ್ಲಿ ಸ್ವೀಕರಿಸುವಾಗ ಚಟ್ನಿ ಇಲ್ಲದ್ದನ್ನು ಕಂಡು ಗ್ರಾಹಕರೊಬ್ಬರು ದೂರು ದಾಖಲಿಸಿದಾಗ ಸೇವಾ ನಿರ್ಲಕ್ಷ್ಯದಡಿ ಹೋಟೆಲ್ ಮಾಲೀಕನಿಗೆ 3 ಸಾವಿರ ರೂ. ದಂಡ ಹಾಕಲಾಗಿದೆ.
  • ಬಿಎಂಟಿಸಿಯಲ್ಲಿ ಪ್ರಯಾಣಿಕರೊಬ್ಬರಿಗೆ ಟಿಕೆಟ್ ಹಿಂದೆ 1 ರೂ. ಚಿಲ್ಲರೆ ಹಣ ಬರೆದು ಅದನ್ನು ಪಾವತಿಸದಿದ್ದಕ್ಕಾಗಿ ಸಂಸ್ಥೆಗೆ 4 ಸಾವಿರ ರೂ. ದಂಡ ವಿಧಿಸಲಾಗಿದೆ.
  • ಹೊಸ ಕಾರು ಖರೀದಿ ವೇಳೆ ಹೇಳಿದಷ್ಟು ಮೈಲೇಜ್ ಕೊಡದ ಪ್ರಕರಣದಲ್ಲಿ ಕಂಪನಿಗೆ ದಂಡ ಹಾಕಲಾಗಿದೆ.
  • ಟೋಲ್​ನಲ್ಲಿ ವಾಹನ ಪ್ರಯಾಣಿಸದೆ ಹಣ ಕಟಾವು ಮಾಡಿದ್ದ ಟೋಲ್ ಪ್ಲಾಜಾಗೆ ದಂಡ ವಿಧಿಸಲಾಗಿದೆ.
  • ಜಿಮ್ಲ್ಲಿ ತರಬೇತಿ ಬದಲು ಸ್ಪರ್ಧೆ ಏರ್ಪಡಿಸಿ ಅದರಲ್ಲಿ ಗಾಯಗೊಂಡ ವ್ಯಕ್ತಿಗೆ ಪರಿಹಾರ ಒದಗಿಸಲಾಗಿದೆ.
  • ಹೊಸ ಟ್ರಿಮ್ಮರ್ ಖರೀದಿಸಿ, ಚಾರ್ಜಿಂಗ್ ವೇಳೆ ಸ್ಪೋಟಗೊಂಡಿದ್ದಕ್ಕೆ ವ್ಯಕ್ತಿಗೆ ಪರಿಹಾರ ಕೊಡಿಸಲಾಗಿದೆ.
  • ದಾರಿ ತಪ್ಪಿಸುವ ಹಾಗೂ ಮೋಸದ ಜಾಹೀರಾತು ತಡೆಗಟ್ಟಲು ಆಯಾ ಸಂಸ್ಥೆಗೆ ನಿರ್ದೇಶನ ನೀಡುವ ಅಧಿಕಾರ ಆಯೋಗಕ್ಕೆ ಇದೆ.

  ಪ್ರಶ್ನೋತ್ತರ

  ನಾನು ಕಳೆದ ವರ್ಷ ಸೆ.11ರಂದು ಒಂದು ಮೊಬೈಲ್ ಖರೀದಿ ಮಾಡಿದ್ದೇನೆ. 2-3 ತಿಂಗಳೊಳಗಾಗಿ ಫೋನ್ ಹ್ಯಾಂಗ್ ಆಗುವುದರ ಜತೆಗೆ ಬ್ಯಾಟರಿ ಕಳಪೆ ಗುಣಮಟ್ಟದ್ದಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತಾಗಿ ಮೊಬೈಲ್ ಅಂಗಡಿಗೆ ಸಂರ್ಪಸಿದರೂ, ಪ್ರಯೋಜನವಾಗಿಲ್ಲ.

  | ಬಸವರಾಜ್ ಬೆಳಗಾವಿ

  ನಿಮ್ಮ ಬಳಿ ಮೊಬೈಲ್ ಖರೀದಿ ಮಾಡಿರುವ ರಸೀದಿ ಇದ್ದಲ್ಲಿ ಅಲ್ಲಿ ಟೋಲ್ ಫ್ರೀ ನಂಬರ್ ಇರುತ್ತದೆ. ಅಲ್ಲಿ ಕರೆಮಾಡಿ ದೂರು ನೀಡಬಹುದು. ಗೊತ್ತಾಗದೇ ಹೋದಲ್ಲಿ ಗ್ರಾಹಕ ಆಯೋಗಕ್ಕೆ ಆನ್​ಲೈನ್ ಅಥವಾ ಆಫ್​ಲೈನ್ ಮೂಲಕ ದೂರು ದಾಖಲಿಸಬಹದು. ನಿಮ್ಮಲ್ಲಿ ಸರಿಯಾದ ಸಾಕ್ಷ್ಯಾಧಾರಗಳಿದಲ್ಲಿ ನ್ಯಾಯ ಸಿಗುವುದರಲ್ಲಿ ಅನುಮಾನವಿಲ್ಲ.

  ನಾವು ಎಚ್​ಪಿ ಸಿಲಿಂಡರ್ ಅನ್ನು ಖರೀದಿ ಮಾಡುವ ಸಂದರ್ಭದಲ್ಲಿ ಎಂಆರ್​ಪಿ ದರದಂತೆ 900 ರೂ. ಪಾವತಿಸುತ್ತೇವೆ. ಆದರೆ ಅವರು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಮತ್ತು 980 ರೂ. ಕೊಡುವಂತೆ ಬೇಡಿಕೆ ಇಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ?

  | ಸತೀಶ್ ಮೈಸೂರು

  ಹೆಚ್ಚಿಗೆ ಹಣ ಪಾವತಿಸುವಂತೆ ಆಗ್ರಹಿಸುವುದು ತಪು್ಪ. ಈ ರೀತಿ ಹಣ ಪಡೆದುಕೊಳ್ಳುವುದು ಕಾನೂನುಬಾಹಿರ. ಈ ಕುರಿತು ನೀವು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ನಿಸ್ಸಂದೇಹವಾಗಿ ದೂರು ದಾಖಲಿಸಬಹುದು.

  ಎರಡು ವರ್ಷಗಳ ಹಿಂದೆ ನಗರದ ಒಂದು ಅಂಗಡಿಯಲ್ಲಿ ಅಕ್ವಾಗಾರ್ಡ್ ಖರೀದಿ ಮಾಡಲಾಯಿತು. ಖರೀದಿ ಮಾಡಿದ ದಿನದಿಂದ ಒಂದಿಲ್ಲ ಒಂದು ಸಮಸ್ಯೆ. ಈ ಕುರಿತಾಗಿ ಗ್ರಾಹಕ ನ್ಯಾಯಾಲಯದಿಂದ ಏನಾದರೂ ಪರಿಹಾರ ಪಡೆದುಕೊಳ್ಳಬಹುದೇ?

  | ಸಂತೋಷ ಬೆಂಗಳೂರು

  ಖಂಡಿತವಾಗಿಯೂ ಪರಿಹಾರ ಕಂಡುಕೊಳ್ಳಬಹುದು. ಮೊದಲು ಎಲ್ಲಿಂದ ಖರೀದಿ ಮಾಡಿದ್ದಿರೋ ಅಲ್ಲಿ ಈ ಬಗ್ಗೆ ತಿಳಿಸಿ. ಪ್ರತಿಕ್ರಿಯೆ ಬರದೇ ಹೋದಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಸಿ. ಅದನ್ನು ಕಡೆಗಣಿಸಿದಲ್ಲಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿ.

  ಬಾರ್​ಗಳಲ್ಲಿ ವಾಟರ್ ಬಾಟಲ್ ಹಾಗೂ ಇನ್ನಿತರ ತಂಪುಪಾನೀಯಗಳಿಗೆ ಎಂಆರ್​ಪಿ ದರಕ್ಕಿಂತ ಹೆಚ್ಚು ಹಣವನ್ನು ಪಡೆಯಲಾಗುತ್ತಿದೆ, ಇದು ತಪ್ಪಲ್ವ?

  | ಚಂದ್ರಶೇಖರ್​ಗೌಡ ವಿಜಯಪುರ
  | ಮುರುಳೀಧರ್ ಚಿಕ್ಕಬಳ್ಳಾಪುರ

  ಇದು ಅನ್ಯಾಯದ ನಡೆ. ಈ ವೇಳೆ ಬಿಲ್ ಕೊಡಲು ತಗಾದೆ ತೆಗೆದರೂ ಒತ್ತಾಯಪೂರ್ವಕವಾಗಿ ನೀವು ಪಡೆದುಕೊಳ್ಳಿ. ಈ ಕುರಿತಾಗಿ ಗ್ರಾಹಕ ವ್ಯಾಜ್ಯಗಳ ಆಯೋಗಕ್ಕೆ ದೂರು ದಾಖಲಿಸಿ ಸಮರ್ಪಕ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts