ರಬಕವಿ-ಬನಹಟ್ಟಿ: ಭೂಮಿ ಮೇಲೆ ನಾವು ಮಾಡಿದ ದಾನ ಬಹುದಿನಗಳವರೆಗೆ ಉಳಿಯಬೇಕು. ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ದಾನ ಶಿವನ ಸನ್ನಿಧಿಗೆ ಸಲ್ಲಿಸಿದಷ್ಟೇ ಸಮಾನವಾಗುತ್ತದೆ ಎಂದು ಕುರುಹಿನಶೆಟ್ಟಿ ಸಮಾಜದ ಹಳೇ ಹುಬ್ಬಳ್ಳಿ ವೀರಬಿಕ್ಷಾವರ್ತಿ ಮಠದ ಶಿವಶಂಕರ ಶಿವಾಚಾರ್ಯರು ಹೇಳಿದರು.
ರಬಕವಿ ಚನ್ನವೀರೇಶ್ವರ ಶಿಕ್ಷಣ ಸಂಸ್ಥೆಗೆ ಎರಡು ಕೊಠಡಿಗಳನ್ನು ನಿರ್ಮಿಸಿ ದಾನವಾಗಿ ನೀಡಿದ ಬಸವರಾಜ ಕಪಲಿ ದಂಪತಿಗೆ ಸನ್ಮಾನಿಸಿ, ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಪಲಿ ದಂಪತಿ ಸಮಾಜಕ್ಕೆ ಮಾಡುತ್ತಿರುವ ದಾನ ನಿಜಕ್ಕೂ ಶ್ಲಾಘನೀಯ. ಸೇವಾ ನಿವೃತ್ತಿಯಿಂದ ಬಂದ ಹಣದಲ್ಲಿ ಇಲ್ಲಿನ ಮಕ್ಕಳ ಶಿಕ್ಷಣದ ಅನುಕೂಲಕ್ಕೆ ಮಾಡಿದ ದಾನ ಶ್ರೇಷ್ಠವಾದುದು. ಮಕ್ಕಳು ಕುಳಿತು ಶಿಕ್ಷಣ ಕಲಿಯಲು ನಿರ್ಮಿಸಿದ ಎರಡು ಕೊಠಡಿಗಳು ಶಾಶ್ವತ ದಾನವಾಗಿವೆ ಎಂದರು.
ಬಸವರಾಜ ಕಪಲಿ ಮಾತನಾಡಿ, ಸಿದ್ಧೇಶ್ವರ ಸ್ವಾಮಿಗಳ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಆಶಿಸಿದವನು. ಸಮಾಜ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ ಸಮಾಜಕ್ಕೆ ನಾನೇನು ಕೊಡಬಲ್ಲೆ ಎನ್ನುವ ನಿಟ್ಟಿನಲ್ಲಿ ವಿಚಾರ ಮಾಡಿ ನಿವೃತ್ತಿ ಹಣದಲ್ಲಿ ಒಂದಿಷ್ಟು ಶಿಕ್ಷಣ ಸಂಸ್ಥೆಗಳಿಗೆ ನೀಡಿದರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಧ್ಯವಾಗುತ್ತದೆ ಎಂದು ಭಾವಿಸಿ ಸಣ್ಣ ಸೇವೆ ಮಾಡಿದ್ದೇನೆ. ಸೇವೆ ಮಾಡಲು ಅವಕಾಶ ಕಲ್ಪಿಸಿದ ಶಿಕ್ಷಣ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಶಂಕರ ಬೆಟಗೇರಿ, ಶಂಕ್ರೆಪ್ಪಣ್ಣ ಅಮ್ಮಲಜರಿ, ಡಾ. ಎಸ್. ಎಸ್. ಕುಚನೂರ, ನಗರಸಭೆ ಸದಸ್ಯ ಬಸವರಾಜ ಗುಡೋಡಗಿ, ಮುಖ್ಯಶಿಕ್ಷಕರು, ಶಾಲಾ ಆಡಳಿತ ಮಂಡಳಿಯವರು ಇದ್ದರು.