ಸಿಂಧನೂರು; ಖಾಸಗಿ ಶಾಲೆ, ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ತಡೆಗೆ ಕ್ರಮವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕು ಘಟಕ ಶುಕ್ರವಾರ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿತು.

ಇದನ್ನೂ ಓದಿ: ದುಬಾರಿ ಡೊನೇಷನ್‌ಗೆ ಬ್ರೇಕ್ ಹಾಕಿ
ನಗರ ಸೇರಿ ತಾಲೂಕಿನಲ್ಲಿ ಇರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸೋ ಇಚ್ಛೆ ಶುಲ್ಕ ಪಡೆಯುತ್ತಿವೆ. ಬಹುತೇಕ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಡೊನೇಷನ್ ಮನಬಂದಂತೆ ವಸೂಲಿ ಮಾಡಲು ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿ ಮಾಡುತ್ತಿದ್ದರೂ,
ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. 2025-26ನೇ ಸಾಲಿನಲ್ಲಿ ಪ್ರವೇಶ ಶುಲ್ಕ, ಸಮವಸ್ತ್ರ, ಶೂ-ಸಾಕ್ಸ್, ಟೈ, ಬೆಲ್ಟ್, ಸ್ಮಾರ್ಟ್‌ಕ್ಲಾಸ್, ಭೋದನಾ ಶುಲ್ಕ, ಬುಕ್, ನೋಟ್ಸ್ ಹೀಗೆ ವಿವಿಧ ಶುಲ್ಕ ಹೆಚ್ಚಳ ಮಾಡಿ ಡೊನೇಷನ್ ಸಹಿತ ಹಣ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿದರು.
ಸರ್ಕಾರದ 1983ರ ಶಿಕ್ಷಣ ಕಾಯ್ದೆ ಉಲ್ಲಂಘನೆ ಮಾಡಿ ಶಾಲೆಗಳಲ್ಲಿ ಬಟ್ಟೆ, ಶೂ-ಸಾಕ್ಸ್, ನೋಟ್‌ಬುಕ್‌ಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ. ಆದರೆ, ಕಾಯ್ದೆ ಸಂಪೂರ್ಣ ಉಲ್ಲಂಘನೆ ಮಾಡಿರುವ ಶಾಲಾ-ಕಾಲೇಜುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವೇದಿಕೆಯ ಕಕ ಉಸ್ತುವಾರಿ ಕೆ.ಶಂಕರ್ ನಂದಿಹಾಳ, ತಾಲೂಕು ಅಧ್ಯಕ್ಷ ವಿರೂಪಾಕ್ಷಿ ಸಾಸಲಮರಿ, ಪ್ರಮುಖರಾದ ಮಲ್ಲಿಕಾರ್ಜುನ ಕುನ್ನಟಗಿ, ಸಿದ್ದರಾಮೇಶ ಸುಲ್ತಾನಪುರ, ಮುದುಕಪ್ಪ ಹೊಸಳ್ಳಿಕ್ಯಾಂಪ್, ನಾಗಲಿಂಗ ಜವಳಗೇರಾ ಇದ್ದರು.