ತಿರುಪತಿ ತಿಮ್ಮಪ್ಪನ ಭಕ್ತರಿಗೊಂದು ಸಿಹಿ ಸುದ್ದಿ; ದೀಪಾವಳಿಗೆ ಡೊನೇಷನ್​ ಲಿಂಕ್ಡ್​ ದರ್ಶನ ಕೌಂಟರ್​ ಚಾಲನೆ

ತಿರುಮಲ: ತಿರುಮಲ ತಿರುಪತಿಯಲ್ಲಿ ಇದೇ ಮೊದಲ ಬಾರಿಗೆ ಡೊನೇಷನ್ ಲಿಂಕ್ಡ್​ ದರ್ಶನ ಕೌಂಟರ್​ಗೆ ಚಾಲನೆ ನೀಡಲಾಗುತ್ತಿದ್ದು, ದೀಪಾವಳಿ ವೇಳೆಗೆ ಕಾರ್ಯಾರಂಭ ಮಾಡಲಿದೆ.

ಆನ್​ಲೈನ್ ಅಪ್ಲಿಕೇಷನ್​ ಅಭಿವೃದ್ಧಿ ಪಡಿಸುವ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ ಒಂದು ತಿಂಗಳ ಅವಧಿಯಲ್ಲಿ ಪೂರ್ಣ ಸೇವೆ ಲಭ್ಯವಾಗಲಿದೆ. ತಾತ್ಕಾಲಿಕವಾಗಿ ದೇವಸ್ಥಾನದಲ್ಲಿ ಕೌಂಟರ್ ತೆರೆದು ಅನುಕೂಲ ಕಲ್ಪಿಸಲು ಮಂಡಳಿ ತೀರ್ಮಾನಿಸಿದೆ. ಇದರಂತೆ, ಈ ಕೌಂಟರ್​ ವೈಕುಂಠಂ ಕಾಂಪ್ಲೆಕ್ಸ್​ನಲ್ಲಿ ಇರಲಿದೆ. ಸದ್ಯದ ಮಟ್ಟಿಗೆ ಸರ್ವದರ್ಶನ ಕೌಂಟರ್​ಗಳನ್ನು ಇದಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಡೊನೇಷನ್​ ಲಿಂಕ್ಡ್​ ದರ್ಶನ ಪಡೆಯುವವರಿಗೆ ವಿಐಪಿ ದರ್ಶನಕ್ಕಿಂತ ಭಿನ್ನವಾದ ಸವಲತ್ತುಗಳು ಇರಲಿವೆ. ಇಲ್ಲೂ ಆಯಾದಿನ ಭಕ್ತರ ಸಂಖ್ಯೆಯ ಒತ್ತಡ ನೋಡಿಕೊಂಡು ಎಷ್ಟು ಪ್ರಮಾಣದ ಟಿಕೆಟ್​ಗಳನ್ನು ಈ ವಿಭಾಗಕ್ಕೆ ಮೀಸಲಿಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಟಿಟಿಡಿಯ ಅಧಿಕಾರಿ ತಿಳಿಸಿದ್ದಾರೆ.

ಟಿಟಿಡಿ ಮಂಡಳಿ ವಿಶ್ವಸ್ಥರು ಸೆ.23ರಂದು ನಡೆಸಿದ್ದ ಸಭೆಯಲ್ಲಿ, ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣ (ಶ್ರೀವಾನಿ) ಟ್ರಸ್ಟ್​ಗೆ ದೇಣಿಗೆ ನೀಡುವವರಿಗೆ ಡೊನೇಷನ್ ಲಿಂಕ್ಡ್​ ದರ್ಶನ ಒದಗಿಸುವ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. 10,000 ರೂಪಾಯಿ ಮತ್ತು ಅದರ ಅನುವರ್ತನೆಯಲ್ಲಿ ಗರಿಷ್ಠ 1 ಲಕ್ಷ ರೂಪಾಯಿ ತನಕ ದೇಣಿಗೆ ಸಲ್ಲಿಸುವವರಿಗೆ ಈ ಸೌಲಭ್ಯ ಸಿಗಲಿದೆ. ಈ ಮೊದಲು ಕನಿಷ್ಠ ದೇಣಿಗೆ ಮೊತ್ತ 20,000 ರೂಪಾಯಿ ಎನ್ನಲಾಗಿತ್ತಾದರೂ, ಬಹುತೇಕ ವಿಶ್ವಸ್ಥರು 10,000 ರೂಪಾಯಿ ಪ್ರಸ್ತಾವನೆಗೆ ಒಲವು ತೋರಿದ ಕಾರಣ ಬದಲಾವಣೆ ಆಗಿದೆ ಎಂದು ಹೇಳಲಾಗುತ್ತಿದೆ.

ಏನೇನು ಸವಲತ್ತು: ನಿಗದಿತ ದೇಣಿಗೆ ನೀಡಿದ ಭಕ್ತರು ತಮ್ಮ ಕುಟುಂಬದ ಐವರು ಸದಸ್ಯರೊಂದಿಗೆ ದೇವರ ದರ್ಶನ ಪಡೆಯಬಹುದು. ಕೌಂಟರ್​ ಬಳಿಗೆ ನೇರವಾಗಿ ತೆರಳಿ ತಮಗೆ ಅನುಕೂಲ ಇರುವ ದಿನವನ್ನು ದೇವರ ದರ್ಶನಕ್ಕೆ ಕಾಯ್ದಿರಿಸಿಕೊಳ್ಳಬಹುದು. ಅದೇ ರೀತಿ, ತಮ್ಮ ಆಯ್ಕೆಯ ವಸತಿಯನ್ನೂ ಆಯ್ದುಕೊಳ್ಳಲು ಅವಕಾಶವಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *