ಬರ ನಿರ್ವಹಣೆಗೆ ದಾನದ ಸಹಕಾರ

|ಅನಂತ ನಾಯಕ್ ಮುದ್ದೂರು
ಈ ಬಾರಿ ಹಿಂದೆಂದೂ ಕಾಣದ ಬರದ ಬವಣೆಗೆ ಜಿಲ್ಲೆ ನಲುಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ಬಂದೊದಗಿದೆ. ತುರ್ತು ಅಗತ್ಯವಿರುವ ಕಡೆ ನೀರು ಪೂರೈಕೆಗೆ ಟ್ಯಾಂಕರ್ ಮೂಲಕ ಸ್ಥಳೀಯಾಡಳಿತಗಳು ಕಾರ್ಯನಿರ್ವಹಿಸುವಂತಾಗಿದೆ. ಉಡುಪಿ ತಾಲೂಕಿನ 30ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಈ ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಪರಿಸ್ಥಿತಿ ಬಂದೊದಗಿದ್ದು ಮಳೆಗಾಗಿ ಪರಿತಪಿಸುವಂತಾಗಿದೆ.

ಹಲವು ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ನೀರು ಪೂರೈಕೆಗೂ ನೀರಿನ ಲಭ್ಯತೆ ಕಷ್ಟವಾಗಿದ್ದು ದಾನಿಗಳ ನೆರವು ಪಡೆಯಲಾಗುತ್ತಿದೆ. ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕಾಡೂರು ಪ್ರದೇಶದ ಕೃಷ್ಣ ಪೂಜಾರಿ ಅವರ ಬಾವಿಯ ಮೂಲಕ ಟ್ಯಾಂಕರ್ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಕೋಟ ಹೋಬಳಿ ವ್ಯಾಪ್ತಿಯ ಹೆಗ್ಗುಂಜೆ, ಬಿಲ್ಲಾಡಿ, ಕಾಡೂರು ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳು ಹಾಗೂ ವೈಯಕ್ತಿಕ ಬಾವಿಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕೊರತೆಯಾಗಿರುವ ಕಾರಣ ದಾನಿಗಳ ನೆರವು ಅನಿವಾರ‌್ಯವಾಗಿದೆ. ಒಟ್ಟಿನಲ್ಲಿ ಈ ಬೇಸಿಗೆ ಅವಧಿ ನೀರಿನ ಕೊರತೆ ಬಗ್ಗೆ ಮತ್ತು ಅಂತರ್ಜಲ ರಕ್ಷಣೆ ಬಗ್ಗೆ ಜಾಗೃತಿಯ ಅನಿವಾರ‌್ಯತೆಯನ್ನೂ ಹೆಚ್ಚಿಸಿದೆ.

ನೀರಿನಾಶ್ರಯದ ಸೀತಾನದಿ ಬರಡು: ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕಾಡೂರು, ತಂತ್ರಾಡಿ, ಖಂಡಿಕೆ, ನೆಕ್ಕರಕ, ಮುಂಡಾಡಿ, ಕಂಪದಕೆರೆ, ಕೊಳಂಬೆ, ಪಡುಸಾಲು, ಕಾಡೂರು, ಹಂಜನಬೈಲು, ಬೆಳ್ತಾಡಿ, ಹೂಳಬೆಟ್ಟು, ಬರದಕಲ್ಲು, ನಡೂರು ಮುಂತಾದ ಕಡೆ ನೀರಿನ ಸಮಸ್ಯೆ ತೀವ್ರವಾಗಿದೆ. ಸುಮಾರು 5000ಕ್ಕೂ ಅಧಿಕ ಜನಸಂಖ್ಯೆ ಇಲ್ಲಿದ್ದು ನೀರಿನಾಶ್ರಯವಾಗಿದ್ದ ಸೀತಾನದಿ ಬತ್ತಿದೆ. ಹೆಚ್ಚಿನ ಕಡೆ ಬಾವಿ, ಕೆರೆ, ಮದಗಗಳೂ ಬತ್ತಿದ್ದು ಬೇಸಾಯ, ತೋಟಗಾರಿಕೆ, ಹೈನುಗಾರಿಕೆ ಮೇಲೆ ತೀವ್ರ ಪರಿಣಾಮ ಬೀರಿದೆ.

ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೀತಾನದಿ ಹರಿಯುತ್ತಿದ್ದು ನೀರು ಸಂಪೂರ್ಣ ಆವಿಯಾಗಿದೆ. ಈ ಭಾಗಕ್ಕೆ ಕೊಳವೆಬಾವಿ ತೋಡಿದ್ದರೂ ಅದು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಆದರ್ಶ ಗ್ರಾಮವಾಗಿ ಹೊರಹೊಮ್ಮಿದ ಕಾಡೂರು ಗ್ರಾಮ ಪಂಚಾಯಿತಿಗೆ ಸಂಸದರ ನಿಧಿಯಿಂದ ಈ ಬಾರಿ ಸಂಸದೆ ಶೋಭಾ ಕರಂದ್ಲಾಜೆ ತೆರೆದ ಬಾವಿಗೆ ಹೆಚ್ಚಿನ ಅನುದಾನ ನೀಡಬೇಕು. ಈ ಭಾಗದ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ, ಕಾರ್ಯಗತಗೊಳಿಸಬೇಕು.
| ಆನಂದ ನಾಯ್ಕ ಅಧ್ಯಕ್ಷ ಕಾಡೂರು ಗ್ರಾಮ ಪಂಚಾಯಿತಿ

ಬತ್ತಿದ ಸೀತಾ ನದಿಗೆ ವಾರಾಹಿ ನದಿಯ ನೀರನ್ನು ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಹಾಯಿಸಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು. ಆ ಭಾಗದ ನೀರಿನ ಸಮಸ್ಯೆಗೆ ಇದು ಶಾಶ್ವತ ಪರಿಹಾರವೂ ಆಗಬಹುದು.
|ಭುಜಂಗ ಶೆಟ್ಟಿ ತಾಲೂಕು ಪಂಚಾಯಿತಿ ಸದಸ್ಯ