PHOTOS|ಸ್ವದೇಶಿ ಸಾರಸ್ ಮೊದಲ ಪ್ರದರ್ಶನ

ಬೆಂಗಳೂರು: ದೇಶದ ಪ್ರಮುಖ ಏರೋಸ್ಪೇಸ್ ರಿಸರ್ಚ್ ಲ್ಯಾಬೋರೇಟರಿಗಳಲ್ಲಿ ಒಂದಾದ ನ್ಯಾಷನಲ್ ಏರೋನಾಟಿಕ್ಸ್ ಲ್ಯಾಬೋರೇಟರಿ (ಎನ್​ಎಎಲ್) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಸಾರಸ್ ಪಿಟಿ1ಎನ್ ಲಘು ನಾಗರಿಕ ವಿಮಾನ ಪ್ರಥಮ ಬಾರಿಗೆ ಏರೋ ಇಂಡಿಯಾದಲ್ಲಿ ಹಾರಾಡಲಿದೆ.

ದೇಶದ ಪ್ರತಿ ನಗರಕ್ಕೂ ವಿಮಾನ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಉಡಾನ್ ಖ್ಯಾತಿ ಪಡೆಯುತ್ತಿದೆ. ಈ ಸಂದರ್ಭದಲ್ಲೇ 14-19 ಸೀಟು ಸಾಮರ್ಥ್ಯದ ಸಾರಸ್ ವಿಮಾನ ಉಡಾನ್ ಯೋಜನೆಗೆ ಪೂರಕವಾಗಿ ಅಭಿವೃದ್ಧಿಯಾಗುತ್ತಿದೆ. ಏರೋ ಇಂಡಿಯಾದಲ್ಲಿ ಸಾರಸ್ ಪಿಟಿ1ಎನ್ ಪ್ರದರ್ಶನ ನೀಡಲಿದೆ.

2009ರ ಅಪಘಾತದ ಕಹಿ: 1999ರಲ್ಲಿ ಸಾರಸ್ ಯೋಜನೆಗೆ ಕೇಂದ್ರ ಸರ್ಕಾರ ಹಸಿರುನಿಶಾನೆ ನೀಡಿತ್ತು. 2009ರಲ್ಲಿ ಪರೀಕ್ಷಾರ್ಥ ಹಾರಾಟದ ವೇಳೆ ಸಾರಸ್ ಪ್ರೋಟೋಟೈಪ್ ವಿಮಾನ ಬೆಂಗಳೂರಿನಿಂದ 30 ಕಿ.ಮೀ. ದೂರದಲ್ಲಿರುವ ಬಿಡದಿ ಬಳಿ ಪತನವಾಗಿತ್ತು. ಘಟನೆಯಲ್ಲಿ ಭಾರತೀಯ ವಾಯುಸೇನೆಯ 2 ಟೆಸ್ಟ್ ಪೈಲಟ್​ಗಳು ಮೃತಪಟ್ಟಿದ್ದರು. 2016ರಲ್ಲಿ ಈ ಯೋಜನೆಯನ್ನು ಪುನಃ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಘಟನೆ ನಡೆದ 9 ವರ್ಷದ ಬಳಿಕ ಎನ್​ಎಎಲ್ ಸಾಕಷ್ಟು ತಾಂತ್ರಿಕ ಬದಲಾವಣೆ ತಂದು, ವಿಮಾನದ ಯಶಸ್ವಿ ಹಾರಾಟ ನಡೆಸಿದೆ.

ಪ್ರಸ್ತುತ ಎನ್​ಎಎಲ್ 14 ಸೀಟು ಸಾಮರ್ಥ್ಯದ ಸಾರಸ್ ವಿಮಾನ ನಿರ್ಮಾಣ ಮಾಡಿದೆ. 19 ಜನ ಪ್ರಯಾಣಿಸಬಹುದಾದ ಸಾರಸ್ ಮಾರ್ಕ್2 ವಿಮಾನದ ಉತ್ಪಾದನಾ ವಿನ್ಯಾಸವನ್ನು ಎನ್​ಎಎಲ್ ಸಿದ್ಧಪಡಿಸಲಿದೆ. ಸೇನೆ ಮತ್ತು ನಾಗರಿಕ ಸೇವೆಗೆ ಬಳಸಿಕೊಳ್ಳುವಂತೆ ಸಾರಸ್ ಮಾರ್ಕ್2 ವಿಮಾನ ಉತ್ಪಾದನೆಯಾಗಲಿದೆ. ಸಾರಸ್ ಯೋಜನೆಗೆ ಪ್ರಾರಂಭದಿಂದ ಇಲ್ಲಿಯವರೆಗೂ ಅಂದಾಜು 350 ಕೋಟಿ ರೂ. ವೆಚ್ಚವಾಗಿದೆ. ಸಾರಸ್ ಮಾರ್ಕ್2 ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಮಾಣೀಕರಣಕ್ಕೆ ಅಂದಾಜು 600 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದೆ.

ಕಡಿಮೆ ಬೆಲೆ

ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ವಿಮಾನಕ್ಕೆ ಹೋಲಿಸಿದರೆ ಶೇ.20-25 ಕಡಿಮೆ ದರದಲ್ಲಿ ಸಾರಸ್ ಲಭ್ಯವಾಗಲಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಿಮಾನದ ಬೆಲೆ 60-70 ಕೋಟಿ ರೂ. ಇದ್ದರೆ ಸಾರಸ್ ಕೇವಲ 40-45 ಕೋಟಿ ರೂ.ಗೆ ಲಭ್ಯವಾಗಲಿದೆ. ನಾಗರಿಕ ಸೇವೆಗಾಗಿ ಇರುವ ಸಾರಸ್ ವಿಮಾನದ ಉತ್ಪಾದನೆಯನ್ನು ಖಾಸಗಿ ಕಂಪನಿಗಳಿಗೆ ನೀಡಲು ಎನ್​ಎಎಲ್ ಚಿಂತನೆ ನಡೆಸಿದೆ. ಈ ಕುರಿತು ಈಗಾಗಲೇ ಟಾಟಾ, ಮಹೀಂದ್ರ ಮತ್ತು ರಿಲಯನ್ಸ್ ಜತೆ ಸಂಸ್ಥೆ ಚರ್ಚೆ ನಡೆಸಿದೆ.

ಸಾರಸ್ ವಿಶೇಷತೆ

# ಮೊಟ್ಟ ಮೊದಲ ಸ್ವದೇಶಿ ನಿರ್ವಿುತ ನಾಗರಿಕ ವಿಮಾನ

# ಏರ್​ಟ್ಯಾಕ್ಸಿ, ಆಂಬುಲೆನ್ಸ್, ವಿಐಪಿ ಸಾರಿಗೆ ಸೇವೆಗೆ ಬಳಕೆ

# ಸೇನೆಯಲ್ಲೂ ಬಳಸಬಹು ದಾದಂತೆ ವಿಮಾನ ಲಭ್ಯ

# ವಿದೇಶದಿಂದ ಆಮದು ಮಾಡಿ ಕೊಳ್ಳುವುದಕ್ಕಿಂತ ಕಡಿಮೆ ದರ

# ಮಾರುಕಟ್ಟೆಯಲ್ಲಿನ ಲಘು ನಾಗರಿಕ ವಿಮಾನಕ್ಕಿಂತ ನೂತನ ತಂತ್ರಜ್ಞಾನ

45 ನಿಮಿಷ ಉಚಿತ ವೈಫೈ

ಏರೋ ಇಂಡಿಯಾದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಉಚಿತ ವೈಫೈ ಸೌಲಭ್ಯ ದೊರೆಯಲಿದೆ. ವಾಯುನೆಲೆಯೊಳಗೆ ವೈಫೈ ಆನ್ ಮಾಡಿ, ಏರ್​ಶೋ ಪಬ್ಲಿಕ್ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಬ್ರೌಸರ್​ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿ ಸಬ್​ವಿುಟ್ ಮಾಡಬೇಕು. ಈ ಸಂದರ್ಭದಲ್ಲಿ ಸಂದೇಶದಲ್ಲಿ ಬರುವ ಒನ್ ಟೈಂ ಪಾಸ್​ವರ್ಡ್(ಒಟಿಪಿ) ಬಳಸಿ ಸಾರ್ವಜನಿಕರು 45 ನಿಮಿಷ ಉಚಿತವಾಗಿ ವೈಫೈ ಸೌಲಭ್ಯ ಬಳಸಿಕೊಳ್ಳಬಹುದು.

ಏರೋ ಇಂಡಿಯಾದಲ್ಲಿ ಜಾನಪದ ವೈಭವ

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ 12ನೇ ವೈಮಾನಿಕ ಪ್ರದರ್ಶನದಲ್ಲಿ (ಫೆ.20-24) ನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದ್ದು, ಪ್ರತಿನಿತ್ಯ ನಾಡಿನ ಪ್ರಸಿದ್ಧ ಕಲಾವಿದರು ನಡೆಸಿಕೊಡುವ ಜಾನಪದ ನೃತ್ಯಗಳನ್ನು ಕಣ್ತುಂಬಿಕೊಳ್ಳುತ್ತ ಊಟ ಸವಿಯಬಹುದಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 8 ತಂಡಗಳನ್ನು ಏರ್ ಶೋಗೆ ಕಳುಹಿಸಲು ನಿರ್ಧರಿಸಿದ್ದು, ಕಲಾವಿದರು ಪ್ರತಿನಿತ್ಯ 2 ಗಂಟೆ ಪ್ರದರ್ಶನ ನೀಡಲಿವೆ. ದೇಶ-ವಿದೇಶದ ಪ್ರತಿನಿಧಿಗಳು ಈ ಪ್ರದರ್ಶನಕ್ಕೆ ಆಗಮಿಸಲಿರುವುದರಿಂದ ಮಧ್ಯಾಹ್ನ 12ರಿಂದ 2ರವರೆಗೆ ಊಟದ ಸಮಯದಲ್ಲಿ ನೃತ್ಯ ತಂಡಗಳಿಗೆ ಅವಕಾಶ ನೀಡಲಾಗಿದೆ.

ಕಲಾವಿದರ ಸಂಖ್ಯೆಯಲ್ಲಿ ಇಳಿಕೆ ಸಾಧ್ಯತೆ

ಈ ಮೊದಲು ಏರ್ ಶೋನಲ್ಲಿ 40 ತಂಡಗಳಿಗೆ ಅವಕಾಶ ನೀಡುವ ಚಿಂತನೆಯಿತ್ತು. ಆದರೆ, ನೂರು ಮಂದಿಗೆ ಮಾತ್ರ ಆಯೋಜಕರು ಪ್ರದರ್ಶನದಲ್ಲಿ ಭಾಗವಹಿಸಲು ಪಾಸ್ ನೀಡಿದ್ದಾರೆ. ಹೀಗಾಗಿ ಕಲಾವಿದರ ಸಂಖ್ಯೆಯನ್ನು ಕಡಿತ ಮಾಡುವ ಸವಾಲು ಎದುರಾಗಿದೆ. ಈ ನಿಟ್ಟಿನಲ್ಲಿ 8 ತಂಡಗಳಿಂದಲೇ ಪ್ರತಿನಿತ್ಯ ನೃತ್ಯವನ್ನು ಪುನರಾವರ್ತನೆ ಮಾಡಿಸಲು ಇಲಾಖೆ ನಿರ್ಧರಿಸಿದೆ. ಈ ವಿಚಾರವಾಗಿ ಇನ್ನೊಮ್ಮೆ ಸಭೆ ನಡೆಸಿ, ಪಟ್ಟಿ ಅಂತಿಮಗೊಳಿಸುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ ಹೇಳಿದ್ದಾರೆ.

ಸ್ವಾಗತಕ್ಕೆ ಲಂಬಾಣಿ ನೃತ್ಯ

ವೈಮಾನಿಕ ಪ್ರದರ್ಶನದಲ್ಲಿ 279 ವಿದೇಶಿ ಮತ್ತು 270 ದೇಸಿ ಸಂಸ್ಥೆಗಳು ಭಾಗವಹಿಸಲಿದ್ದು, ನೂರಾರು ಪ್ರತಿನಿಧಿಗಳನ್ನು ಸ್ವಾಗತಿಸಲು ಹೋಟೆಲ್ ಆವರಣದಲ್ಲಿಯೇ ಲಂಬಾಣಿ ನೃತ್ಯ ಪ್ರದರ್ಶನಕ್ಕೆ ಇಲಾಖೆ ನಿರ್ಧರಿಸಿದೆ. ಗಾಯಕಿ ಸಂಗೀತಾ ಕಟ್ಟಿ ಕಾರ್ಯಕ್ರಮ ಪ್ರಸ್ತುತಪಡಿಸಲಿರುವುದು ವಿಶೇಷ.

ವಾಯುಸೇನೆಗೆ 15 ವಿಮಾನ

ಸೇನೆಗೆ ಅಗತ್ಯವಿರುವ ಸಾರಸ್ ವಿಮಾನಗಳನ್ನು ನಿರ್ವಣಗೊಳಿಸುವ ಹೊಣೆಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ಗೆ (ಎಚ್​ಎಎಲ್) ನೀಡಲಾಗಿದೆ. ಎನ್​ಎಎಲ್ ಉತ್ಪಾದನೆ ಪ್ರಾರಂಭಿಸುವ ಮೊದಲೇ ಮೊದಲ ಖರೀದಿದಾರರಾಗಿ ಭಾರತೀಯ ವಾಯುಸೇನೆ ಮುಂದೆ ಬಂದಿದೆ. ಸೇನೆಗಾಗಿ 15 ಸಾರಸ್ ಯುದ್ಧ ವಿಮಾನ ಖರೀದಿಸಲು ತಾತ್ವಿಕ ಒಪ್ಪಿಗೆ ನೀಡಿದೆ.