ಸುರತ್ಕಲ್ ಆಸುಪಾಸು ಮತ್ತೆ ಎರಡು ಡಾಲ್ಫಿನ್‌ಗಳು ಸಾವು

ಸುರತ್ಕಲ್: ಸುರತ್ಕಲ್ ಆಸುಪಾಸು ಡಾಲ್ಫಿನ್, ಕಡಲಾಮೆ ಮೊದಲಾದ ಸಮುದ್ರ ಜೀವಿಗಳು ಸಾವಿಗೀಡಾಗಿ ದಡ ಸೇರುವುದು ಮುಂದುವರಿದಿದೆ. 15 ದಿನಗಳಿಂದೀಚೆಗೆ ನಾಲ್ಕು ಡಾಲ್ಫಿನ್ ಮತ್ತು ಮೂರು ಕಡಲಾಮೆಗಳು ಸತ್ತು ದಡದಲ್ಲಿ ಬಿದ್ದಿದ್ದು, ಇದಕ್ಕೆ ಡಾಂಬರು ತ್ಯಾಜ್ಯವೇ ಕಾರಣ ಎಂದು ಶಂಕೆಯಿಂದ ಆತಂಕ ಹೆಚ್ಚಿದೆ.
ಶನಿವಾರ ಸಸಿಹಿತ್ಲು ಅಗ್ಗಿದಕಳಿಯ ಎಂಬಲ್ಲಿ ಸಮುದ್ರಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಪತ್ತೆಯಾಗಿದೆ. ಮುಕ್ಕ ಬಳಿ ಇನ್ನೊಂದು ಡಾಲ್ಫಿನ್ ಮೀನಿನ ಮೃತದೇಹ ಎರಡು ದಿನ ಹಿಂದೆ ದಡ ಸೇರಿದೆ. ಇದೇ ವೇಳೆ ಕಡಲಾಮೆಯ ಮೃತದೇಹ ಸಮುದ್ರ ತೀರದಲ್ಲಿ ಕಂಡು ಬಂದಿದ್ದರೂ ಬಳಿಕ ಸಮುದ್ರ ಸೇರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೂರು ವಾರದ ಹಿಂದೆ ಸುರತ್ಕಲ್ ಬಳಿಯ ಗುಡ್ಡೆಕೊಪ್ಲ, ತಣ್ಣೀರುಬಾವಿ ಬಳಿ ಎರಡು ಡಾಲ್ಫಿನ್ ಹಾಗೂ ಗುಡ್ಡೆಕೊಪ್ಲ, ಹೊಸಬೆಟ್ಟು ಬಳಿ ಎರಡು ಕಡಲಾಮೆ ಮೃತದೇಹಗಳು ಸಿಕ್ಕಿದ್ದವು. ಇದಕ್ಕೆ ಸಮುದ್ರ ಮಾಲಿನ್ಯ ಕಾರಣ ಆಗಿರಬಹುದು ಎಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ ಬೆನ್ನಿಗೆ ಶನಿವಾರ ಮತ್ತೆ ಎರಡು ಡಾಲ್ಫಿನ್‌ಗಳ ಮೃತದೇಹ ಲಭಿಸಿರುವ ಮಾಹಿತಿ ಸಿಕ್ಕಿದೆ.
ಡಾಲ್ಫಿನ್, ಕಡಲಾಮೆಗಳ ಸಾವಿಗೆ ಸಮುದ್ರ ಮಾಲಿನ್ಯ ಕಾರಣ ಇರಬೇಕು ಎಂದು ದೊಡ್ಡಕೊಪ್ಲದ ಮೀನುಗಾರ ಸುರೇಶ್ ಶಂಕೆ ವ್ಯಕ್ತಪಡಿಸಿದ್ದಾರೆ.

ಡಾಂಬರು ತ್ಯಾಜ್ಯ ತೈಲ ಸೋರಿಕೆ ಕಾರಣವಲ್ಲ?: ಸಮುದ್ರತೀರದಲ್ಲಿ ಡಾಂಬರು ತ್ಯಾಜ್ಯ ವ್ಯಾಪಕ ಸಂಗ್ರಹ ಬಗ್ಗೆ ಜಿಲ್ಲಾಧಿಕಾರಿಗಳಿಂದ ತನಿಖೆ ನಡೆಸಲಾಗುವುದು ಎಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದರೂ, ತನಿಖೆ ಪ್ರಗತಿ ವಿವರ ಇನ್ನೂ ಸಚಿವರ ಕೈಸೇರಿದಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ವಿವರ ಕೇಳಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.

ಡಿಸಿಗೆ ವರದಿ: ಸಮುದ್ರ ಮಾಲಿನ್ಯ ಸಮಸ್ಯೆ ಬಗ್ಗೆ ಎನ್‌ಎಂಪಿಟಿ ಅಧಿಕಾರಿಗಳು ತನಿಖೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್‌ಎಂಪಿಟಿಗೆ ಬಂದಿರುವ ತೈಲ ಟ್ಯಾಂಕರ್, ಹಡಗು ಇತ್ಯಾದಿಗಳಿಂದ ಯಾವುದೇ ತೈಲ ಸೋರಿಕೆಯಾಗಿಲ್ಲ. ತೈಲ ಟ್ಯಾಂಕರ್, ಹಡಗು ಶುಚಿಗೊಳಿಸುವ ವ್ಯವಸ್ಥೆ ಎನ್‌ಎಂಪಿಟಿಯಲ್ಲಿದೆ ಎಂದು ಎನ್‌ಎಂಪಿಟಿ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು. ಚಿತ್ರಾಪುರ ಸಮುದ್ರ ಕಿನಾರೆಗೆ ಭೇಟಿ ನೀಡಿದ್ದ ಶಾಸಕ ಡಾ.ವೈ. ಭರತ್ ಶೆಟ್ಟಿ ಡಾಂಬರು ತ್ಯಾಜ್ಯ ಸಮಸ್ಯೆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಮೀನುಗಾರರ ಸಭೆ: ಡಾಂಬರು ತ್ಯಾಜ್ಯ ವಿಸರ್ಜನೆ ಸಮಸ್ಯೆ ಬಗ್ಗೆ ಶಾಸಕರ ಸಮ್ಮುಖ ಮೀನುಗಾರರ ಸಭೆಯನ್ನು ಸಂಸದ ನಳಿನ್‌ಕುಮಾರ್ ಕಟೀಲ್ ನಡೆಸಲಿದ್ದಾರೆ ಎಂದು ದ.ಕ. ಕರಾವಳಿ ಮೂಲ ಮೀನುಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಶ್ರೀಯಾನ್ ಗುಡ್ಡೆಕೊಪ್ಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *