ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಗರ ಹಾಗೂ ಪಟ್ಟಣ ಪ್ರದೇಶಗಳಿಗಷ್ಟೇ ಸೀಮಿತವಾಗಿರುವ ಬೀದಿನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ ಗ್ರಾಮೀಣ ಪ್ರದೇಶಗಳಲ್ಲಿ ದೂರದ ಮಾತಾಗಿದೆ. ಇದರಿಂದ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ಸಾರ್ವಜನಿಕರು ತತ್ತರಿಸುವಂತಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ಮಧುರೆಕ್ರಾಸ್‌ನಿಂದ ಕಾಡನೂರಕೈಮರದವರೆಗಿನ ವ್ಯಾಪ್ತಿಯಲ್ಲಿ ನೂರಾರು ಬೀದಿ ನಾಯಿಗಳು ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸಿವೆ. ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲೇ ಭಯಪಡುವಂತಾಗಿದೆ. ಹತ್ತಿಪ್ಪತ್ತು ನಾಯಿಗಳ ದಂಡು ಸಾರ್ವಜನಿಕರ ಮೇಲೆ ಮುಗಿಬೀಳುವುದು, ಓಡಾಡಿಸಿಕೊಂಡು ಬರುವುದು ದಿನನಿತ್ಯದ ದೃಶ್ಯಗಳಾಗಿವೆ. ನಾಯಿಕಚ್ಚಿದ ಪ್ರಕರಣಗಳು ಸಾಮಾನ್ಯವಾಗಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಶಾಲಾ ಮಕ್ಕಳಿಗೆ ಭೀತಿ: ಈ ಭಾಗದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆ ಮಕ್ಕಳು ಬೀದಿನಾಯಿಗಳ ಭೀತಿಗೆ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ, ಬೀದಿನಾಯಿಗಳಿಗೆ ಹೆದರಿ ಪಾಲಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುವ ಕೆಲಸ ಮಾಡುತ್ತಿದ್ದಾರೆ. ಶಾಲಾ ಮಕ್ಕಳು ಬ್ಯಾಗ್‌ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದರೆ ಹಿಂದೆಯೇ ಬರುವ ನಾಯಿಗಳು ಮೇಲೆರಗಿ ಬ್ಯಾಗ್‌ಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತವೆ, ಇದರಿಂದ ಗಾಬರಿಗೊಳ್ಳುವ ಮಕ್ಕಳು ಬ್ಯಾಗ್‌ಗಳನ್ನು ಎಸೆದು ರಸ್ತೆಯಲ್ಲಿಯೇ ಅಡ್ಡಾದಿಡ್ಡಿ ಓಡುತ್ತಾರೆ. ಈ ವೇಳೆ ರಸ್ತೆಯಲ್ಲಿ ಬರುವ ವಾಹನಗಳಿಗೆ ಸಿಲುಕಿ ಅಪಘಾತಗಳಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ನಾಯಿ ಕಡಿತಕ್ಕೆ ಔಷಧಿ ಇಲ್ಲ:
ಮಧುರೆ ಹೋಬಳಿಯಲ್ಲಿ ಸಾಕಷ್ಟು ಬೀದಿನಾಯಿ ಕಡಿತ ಪ್ರಕರಣಗಳು ನಡೆದಿವೆ, ನಾಯಿಯಿಂದ ಕಚ್ಚಿಸಿಕೊಂಡ ಜನರು ಔಷಧಿ ಪಡೆಯಲು ಪರದಾಡುವಂತಾಗಿದೆ. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ದಾಸ್ತಾನು ಇಲ್ಲ ಎನ್ನುತ್ತಾರೆ, ಇನ್ನೂ ದೊಡ್ಡಬಳ್ಳಾಪುರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ಹೋದರೂ ಇದೆ ಉತ್ತರ ಬರುತ್ತದೆ, ಇದರಿಂದ ಬೆಂಗಳೂರು ಸೇರಿ ಇನ್ನಿತರ ಕಡೆಗೆ ಅಲೆದಾಡುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರೇಬಿಸ್ ಭೀತಿ: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬೀದಿನಾಯಿಗಳಿಗೆ ರೇಬಿಸ್ ಲಸಿಕಾ ಶಿಬಿರಗಳನ್ನು ನಡೆಸಲಾಗುತ್ತಿದೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದುವರಗೆ ಇಂಥ ಶಿಬಿರಗಳ ಆಯೋಜನೆಯಾಗಿಲ್ಲ. ಕೆಲವೊಂದು ನಾಯಿಗಳು ಜೊಲ್ಲು ಸುರಿಸಿಕೊಂಡು ಓಡಾಡುತ್ತಿರುತ್ತವೆ, ರಾತ್ರಿ ವೇಳೆ ಭಯಾನಕವಾಗಿ ಊಳಿಡುತ್ತವೆ, ಇದರಿಂದ ಸ್ಥಳೀಯರು ತೀವ್ರ ಆತಂಕಗೊಂಡಿದ್ದಾರೆ, ಇಂಥ ನಾಯಿಗಳು ಕಚ್ಚಿದರೆ ಗತಿ ಏನು ಎಂಬ ಚಿಂತೆ ಕಾಡುತ್ತಿದೆ, ಈ ಬಗ್ಗೆ ಪಂಚಾಯಿತಿ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರು ಬೇಸರಕ್ಕೆ ಕಾರಣವಾಗಿದೆ.
ಕೋಳಿ ತ್ಯಾಜ್ಯ ಕಾರಣ: ದೊಡ್ಡಬಳ್ಳಾಪುರ ನಗರ ಸೇರಿ ಇನ್ನಿತರ ಕಡೆಗಳಿಂದ ಕೋಳಿ ಮಾಂಸದ ತ್ಯಾಜ್ಯದ ರಾಶಿಯನ್ನು ತಂದು ಸುರಿಯಲಾಗುತ್ತಿದೆ, ಇದರೊಂದಿಗೆ ಹೋಟೆಲುಗಳ ಪ್ರಾಣಿಜನ್ಯ ತ್ಯಾಜ್ಯವೂ ಈ ಭಾಗದಲ್ಲಿ ಸೇರ್ಪಡೆಯಾಗುತ್ತಿದೆ, ಇದರಿಂದ ಇಂಥ ತ್ಯಾಜ್ಯದ ಭಕ್ಷಣೆಗೆ ರಸ್ತೆಗಳಲ್ಲೆ ಠಳಾಯಿಸುವ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾಯಿಗಳ ಮೇಲೂ ಮುಗಿಬೀಳುತ್ತಿವೆ, ಈ ಭಾಗದಲ್ಲಿ ತ್ಯಾಜ್ಯ ಸುರಿಯಲು ಕಡಿವಾಣ ಹಾಕಿದರೆ ನಾಯಿಗಳ ಹಾವಳಿಯೂ ನಿಯಂತ್ರಣಕ್ಕೆ ಬರಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೋಟೆಲ್‌ಗಳು ಹಾಗೂ ಕೋಳಿ ಅಂಗಡಿಗಳಿಂದ ಉತ್ಪತ್ತಿಯಾಗುವ ಪ್ರಾಣಿಜನ್ಯ ತ್ಯಾಜ್ಯದ ರಾಶಿಯನ್ನು ತಂದು ಈ ಭಾಗದ ರಸ್ತೆ ಬದಿಗಳಲ್ಲಿ, ಕೆರೆ ಬದಿಯಲ್ಲಿ ಸುರಿಯುತ್ತಿರುವುದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ, ರಸ್ತೆಯಲ್ಲಿ ಜನ ಓಡಾಡಲೇ ಭಯಪಡುವಂತಾಗಿದೆ, ವಾಹನ ಸವಾರರನ್ನು ಅಟ್ಟಾಡಿಸಿಕೊಂಡು ಬರುತ್ತವೆ ಇದರಿಂದ ಗಾಬರಿಗೊಂಡು ಅನೇಕರು ಬಿದ್ದು ಗಾಯಗೊಂಡಿರುವ ಪ್ರಕರಣಗಳು ನಡೆದಿವೆ, ಪಂಚಾಯತಿಯವರು ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮಕೈಗೊಳ್ಳಬೇಕು.
ಉಮಾಶಂಕರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಧುರೆ ಹೋಬಳಿ