ಸರ್ಕೀಟ್ ಹೌಸ್‌ನಲ್ಲಿ ಶ್ವಾನ ವಾಸ್ತವ್ಯ?

« ಅವಕಾಶ ನೀಡಿಲ್ಲ ಎಂದು ಅಧಿಕಾರಿಗಳಿಂದ ಸ್ಪಷ್ಟನೆ»

ವಿಜಯವಾಣಿ ಸುದ್ದಿಜಾಲ ಮಂಗಳೂರು
ಗಣ್ಯರ ವಾಸ್ತವ್ಯಕ್ಕೆ ಮೀಸಲಾಗಿರುವ ಕದ್ರಿಯ ಹೊಸ ಸರ್ಕೀಟ್ ಹೌಸ್‌ನ್ನು ಶ್ವಾನಗಳ ವಾಸ್ತವ್ಯಕ್ಕೆ ನೀಡಲಾಗಿದೆ ಎನ್ನುವುದು ವಿವಾದ ಸೃಷ್ಟಿಸಿದೆ.

ಮಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ನಡೆಯುತ್ತಿರುವ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಕಡೆಗಳಿಂದ ಶ್ವಾನಗಳೊಂದಿಗೆ ಮಾಲೀಕರು ಆಗಮಿಸಿದ್ದಾರೆ. ಈ ಪೈಕಿ ಬೆಂಗಳೂರಿನ ವ್ಯಕ್ತಿಯೊಬ್ಬರ ಜರ್ಮನ್ ಶೆಫರ್ಡ್ ತಳಿಯ ನಾಲ್ಕು ಶ್ವಾನಗಳೂ ಇದ್ದು, ಅವು ಹವಾನಿಯಂತ್ರಿತ ವ್ಯವಸ್ಥೆಗೆ ಹೊಂದಿಕೊಂಡದ್ದಾಗಿದ್ದವು. ಮಂಗಳೂರಿನ ವಸತಿಗೃಹಗಳು ಶ್ವಾನಗಳಿಗೆ ಎಸಿ ರೂಂ ನೀಡಲು ನಿರಾಕರಿಸಿದ್ದರಿಂದ ಈ ಶ್ವಾನಗಳ ಮಾಲೀಕರು ಸರ್ಕಾರಿ ಸ್ವಾಮ್ಯದ ಸರ್ಕೀಟ್ ಹೌಸ್‌ಗೆ ಬಂದು ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಸಂಜೆ ಸರ್ಕೀಟ್ ಹೌಸ್‌ಗೆ ಆಗಮಿಸಿದ ಶ್ವಾನ ಮಾಲೀಕರು ಶನಿವಾರ ಶ್ವಾನ ಪ್ರದರ್ಶನ ಮುಗಿಸಿ ಹಿಂತಿರುಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪ ನಿರಾಕರಣೆ: ಸರ್ಕೀಟ್ ಹೌಸ್‌ನ ಮೇಲ್ವಿಚಾರಕರು ಶ್ವಾನಗಳು ತಂಗಿರುವುದನ್ನು ನಿರಾಕರಿಸಿದ್ದಾರೆ. ಶ್ವಾನ ಮಾಲೀಕರು ರೂಂ ಕೇಳಿಕೊಂಡು ಬಂದಿದ್ದು ನಿಜ. ಆದರೆ ರೂಂ ನೀಡಲು ಸಾಧ್ಯವಿಲ್ಲ ಎಂದು ಹಿಂದಕ್ಕೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಶ್ವಾನಗಳಿಗೆ ಸರ್ಕೀಟ್ ಹೌಸ್ ಒಳಗಡೆ ಅವಕಾಶ ನೀಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ತಂಗಿದ್ದ ಸರ್ಕೀಟ್ ಹೌಸ್: ಹೊಸ ಸರ್ಕೀಟ್ ಹೌಸ್‌ನ ಮೊದಲ ಮಹಡಿಯಲ್ಲಿ ವಿವಿಐಪಿಗಳಿಗೆ ನೀಡುವ ಸೂಟ್ ರೂಂ ಇದೆ. ಇದರಲ್ಲಿ ಒಂದು ಹಾಲ್, ಬೆಡ್‌ರೂಂ ಹಾಗೂ ವಾರ್ಡ್ ರೂಂ ಇದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳ ಸಹಿತ ಗಣ್ಯಾತಿಗಣ್ಯರು ಇದೇ ಸೂಟ್ ರೂಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಎರಡನೇ ಮಹಡಿಯಲ್ಲಿ ಒಟ್ಟು 8 ರೂಂಗಳಿದ್ದು, 6 ರೂಂಗಳು ಹವಾನಿಯಂತ್ರಿತ ಹೊಂದಿವೆ. ಲಭ್ಯ ಮಾಹಿತಿ ಪ್ರಕಾರ, ಈ ಹವಾನಿಯಂತ್ರಿತ ರೂಂಗಳನ್ನು ಶ್ವಾನಗಳ ಮಾಲೀಕರ ವಾಸ್ತವ್ಯಕ್ಕೆ ನೀಡಲಾಗಿದೆ. ಇದೇ ವೇಳೆ ಮಾಲೀಕರ ಜತೆಗೆ ಶ್ವಾನಗಳೂ ಎಸಿ ರೂಂನಲ್ಲಿ ಮಲಗಿವೆ ಎಂಬ ಆರೋಪ ವ್ಯಕ್ತವಾಗಿದೆ.