ನಕ್ಸಲರ ಬೇಟೆಗೆ ಶ್ವಾನ ದಳ

ಅವಿನ್ ಶೆಟ್ಟಿ ಉಡುಪಿ
ಉಗ್ರ ಒಸಾಮ ಬಿನ್ ಲಾಡೆನ್ ಅಡಗುದಾಣ ಪತ್ತೆಯಲ್ಲಿ ಸಹಕರಿಸಿದ್ದ, ದೇಶ-ವಿದೇಶಗಳ ಸೇನಾ ಪಡೆಗಳ ಮೆಚ್ಚಿನ ಶ್ವಾನ ‘ಬೆಲ್ಜಿಯಂ ಶೆಫರ್ಡ್ ಮಿಲೆನಿಯೋಸ್’ ತಳಿಯ ಶ್ವಾನಗಳನ್ನು ರಾಜ್ಯದಲ್ಲಿ ಮೊದಲ ಬಾರಿ ನಕ್ಸಲರ ಬೇಟೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಕಾಡಿನಲ್ಲಿ ನಕ್ಸಲರ ಕುರುಹು, ಶಾಸ್ತ್ರಾಸ್ತ್ರ, ನೆಲ ಬಾಂಬ್, ಅಪಾಯಕಾರಿ ವಸ್ತುಗಳ ಪತ್ತೆ ಮೂಲಕ ನಕ್ಸಲ್ ನಿಗ್ರಹ ದಳ(ಎಎನ್‌ಎಫ್) ಪಡೆಗೆ ನೆರವಾಗಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಿಂದ (ಸಿಆರ್‌ಪಿಎಫ್)ವಿಶೇಷ ತರಬೇತಿ ಪಡೆದುಕೊಂಡ ನಾಲ್ಕು ಶ್ವಾನಗಳು ಶೀಘ್ರ ಬರಲಿವೆ. ಈಗ ಶ್ವಾನಗಳು ಬೆಂಗಳೂರಿನಲ್ಲಿ ವಿಶೇಷ ತರಬೇತಿ ಪಡೆಯುತ್ತಿವೆ. ದಟ್ಟ ಅರಣ್ಯ, ಗುಡ್ಡಗಾಡಿನಲ್ಲಿ ಕೂಂಬಿಂಗ್ ಅಥವಾ ನಕ್ಸಲ್ ವಿರುದ್ಧ ಕಾರ್ಯಾಚರಣೆ ವೇಳೆ ಎಎನ್‌ಎಫ್‌ಗೆ ನೆರವಾಗಲಿವೆ.

ಸಿಆರ್‌ಪಿಎಫ್‌ನಲ್ಲಿ ತರಬೇತಿ: ಬೆಂಗಳೂರಿನ ಸಿಆರ್‌ಪಿಎಫ್ ಘಟಕದಲ್ಲಿ ಒಂದು ತಿಂಗಳಿನಿಂದ ಈ ನಾಲ್ಕು ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. 3ರಿಂದ 4 ತಿಂಗಳು ತರಬೇತಿ ಇರಲಿದೆ. ತರಬೇತಿ ಬಳಿಕ ಈ ಶ್ವಾನಗಳು ಎಎನ್‌ಎಫ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸಲಿವೆ. ಹ್ಯಾಂಡ್ಲರ್‌ಗಳಾಗಿ ನೇಮಕಗೊಂಡಿರುವ 8 ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ. ಅರಣ್ಯದಲ್ಲಿ ಕಾರ್ಯನಿರ್ವಹಣೆ, ಶಂಕಿತರ ಕುರುಹು ಪತ್ತೆ, ಸಾಹಸ ಪ್ರವೃತ್ತಿಗಳನ್ನು ಶ್ವಾನಗಳಿಗೆ ಕಲಿಸಿಕೊಡಲಾಗುತ್ತದೆ.

ಲಾಡೆನ್ ಅಡಗುದಾಣ ಪತ್ತೆ ಮಾಡಿದ್ದ ಬೆಲ್ಜಿಯಂ ಶೆಫರ್ಡ್: ಬೆಲ್ಜಿಯಂ ಶೆಫರ್ಡ್ ಮಿಲೆನಿಯೋಸ್ ತಳಿಯ ಶ್ವಾನ ಅತ್ಯಂತ ಸೂಕ್ಷ್ಮಗ್ರಾಹಿ. ತಾಳ್ಮೆ, ವೇಗ, ಬುದ್ಧಿಮತ್ತೆಯಲ್ಲಿಯೂ ಸೈ ಎನಿಸಿಕೊಂಡಿವೆ. ಬೆಲ್ಜಿಯಂ ಶೆಫರ್ಡ್ ಶ್ವಾನಗಳನ್ನು ಹೊಂದಿದ್ದ ಅಮೆರಿಕದ ವಿಶೇಷ ಕಮಾಂಡೊ ಪಡೆ ಮೊದಲ ಬಾರಿಗೆ ಉಗ್ರ ಲಾಡೆನ್ ಅಡಗುದಾಣವನ್ನು ಪತ್ತೆ ಹಚ್ಚಿತ್ತು. ಸೈನ್ಯ, ಅರೆಸೇನಾ ಪಡೆಗಳಲ್ಲಿ ಈ ತಳಿಯ ಶ್ವಾನವನ್ನು ಬಳಕೆ ಮಾಡಲಾಗುತ್ತಿದೆ. ಭಾರತೀಯ ಸೈನ್ಯ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್, ಸಿಆರ್‌ಪಿಎಫ್‌ಗಳಲ್ಲಿ ಶ್ವಾನಗಳು ಕರ್ತವ್ಯ ನಿರ್ವಹಿಸುತ್ತಿವೆ. ಯಶಸ್ವಿಯಾಗಿ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿರುವ ಈ ಶ್ವಾನಗಳು ಎಂತಹ ಪರಿಸ್ಥಿತಿ, ಪ್ರತಿಕೂಲ ಹವಮಾನದಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು.

ಕಾರ್ಕಳದಲ್ಲಿ ಶ್ವಾನಗೃಹ: ಕಾರ್ಕಳ ರಾಮಸಮುದ್ರ ಎಎನ್‌ಎಫ್ ಕೇಂದ್ರ ಘಟಕದಲ್ಲಿ ಈ ಶ್ವಾನಗಳನ್ನು ಇರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 22 ಲಕ್ಷ ರೂ. ವೆಚ್ಚದಲ್ಲಿ ಶ್ವಾನಗೃಹ ನಿರ್ಮಾಣವಾಗುತ್ತಿದೆ. 1200 ಚದರ ಅಡಿ ವಿಸೀರ್ಣದ ಈ ಕಟ್ಟಡ, 2-3 ತಿಂಗಳಲ್ಲಿ ಪೂರ್ಣಗೊಂಡು ಸುಸಜ್ಜಿತ ಶ್ವಾನಗೃಹ ನಿರ್ಮಾಣವಾಗಲಿದೆ. ಅಷ್ಟರಲ್ಲಿ ಶ್ವಾನಗಳಿಗೂ ತರಬೇತಿ ಮುಗಿದಿರುತ್ತದೆ ಎಂದು ಎಎನ್‌ಎಫ್ ಅಧಿಕಾರಿ ಹೇಳಿದರು. ಎಎನ್‌ಎಫ್ ಪಡೆಯಲ್ಲಿ 460 ಯೋಧರಿದ್ದು, ವಿವಿಧೆಡೆ 16 ಕ್ಯಾಂಪ್‌ಗಳಿವೆ.

ಬೆಲ್ಜಿಯಂ ಶೆಫರ್ಡ್ ಮಿಲೆನಿಯೋಸ್ ತಳಿಯ 4 ಶ್ವಾನಗಳು ಎಎನ್‌ಎಫ್ ಸೇರಲಿವೆ. ಬೆಂಗಳೂರಿನ ಸಿಆರ್‌ಪಿಎಫ್ ಘಟಕದಲ್ಲಿ ತರಬೇತಿ ನೀಡಲಾಗುತ್ತಿದೆ. ಸ್ಫೋಟಕ ಮತ್ತು ಕುರುಹು ಪತ್ತೆ, ಎಎನ್‌ಎಫ್ ಪಡೆಯ ಸುರಕ್ಷತೆಗೆ ಶ್ವಾನ ದಳ ಸಹಕಾರಿ. ಒಂದು ಶ್ವಾನ ನೋಡಿಕೊಳ್ಳಲು ತಲಾ ಇಬ್ಬರಂತೆ 8 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಅವರಿಗೂ ತರಬೇತಿ ನೀಡಲಾಗುತ್ತಿದೆ. ಕಾರ್ಕಳ ಕೇಂದ್ರ ಘಟಕದಲ್ಲಿ ಶ್ವಾನಗೃಹ ನಿರ್ಮಾಣವಾಗುತ್ತಿದೆ.
– ಬೆಳ್ಳಿಯಪ್ಪ, ಡಿವೈಎಸ್ಪಿ, ನಕ್ಸಲ್ ನಿಗ್ರಹ ದಳ, ಕಾರ್ಕಳ

Leave a Reply

Your email address will not be published. Required fields are marked *