More

    ಪ್ರಾಣಿಪ್ರಿಯೆ ಸಂಯುಕ್ತಾ: ಆ್ಯಕ್ಷನ್​ನಲ್ಲಿ ನಾಯಿ ದ್ವೇಷ, ಕಟ್​ನಲ್ಲಿ ಶ್ವಾನಪ್ರೀತಿ

    ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಸಂಯುಕ್ತಾ ಹೊರನಾಡು ಸದ್ಯ ಸಾಲುಸಾಲು ಚಿತ್ರಗಳಲ್ಲಿ ಬಿಜಿ. ಈ ವರ್ಷ ನಾಲ್ಕೈದು ಸಿನಿಮಾಗಳ ಮೂಲಕ ಸಂಯುಕ್ತಾ ದರ್ಶನ ಕೊಡಲಿದ್ದಾರೆ. ಅವರ ಅಭಿನಯದ ‘ನಾನು ಮತ್ತು ಗುಂಡ’ ಚಿತ್ರ ಇಂದು ಬಿಡುಗಡೆ ಆಗಲಿದ್ದು, ಸಿನಿಮಾ ಮತ್ತು ತಮ್ಮ ಸಿನಿ ಬದುಕಿನ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

    ‘ಪ್ರಾಣಿಪ್ರಿಯೆ, ನೇರ ನಡೆ-ನುಡಿ, ಪ್ರಾಮಾಣಿಕತೆ, ಸರಳತೆ, ಸಭ್ಯತೆಯ ಹುಡುಗಿ’- ಹೀಗಂತ ಜನರು ನನ್ನನ್ನು ಗುರುತಿಸುತ್ತಾರೆ ಎಂದು ಮಾತಿಗಿಳಿಯುವ ನಟಿ ಸಂಯುಕ್ತಾ ಹೊರನಾಡು, ಪ್ರಾಣಿಗಳ ಜತೆಗೊಂದು ಸಿನಿಮಾ ಮಾಡಬೇಕೆಂಬ ಆಸೆಯನ್ನು ‘ನಾನು ಮತ್ತು ಗುಂಡ’ ಸಿನಿಮಾ ಮೂಲಕ ಪೂರೈಸಿಕೊಂಡ ತೃಪ್ತಭಾವದಲ್ಲಿದ್ದಾರೆ. ಪ್ರಾಣಿಗಳೆಂದರೆ ಸಂಯುಕ್ತಾಗೆ ಇಷ್ಟ. ಅದರಲ್ಲೂ ನಾಯಿಗಳ ಮೇಲಂತೂ ಬಲುಪ್ರೀತಿ. ‘ನಾನು ಮತ್ತು ಗುಂಡ’ ಚಿತ್ರದಲ್ಲಿ ನಾಯಿಯನ್ನು ವಿರೋಧಿಸುವ ಪಾತ್ರ ನನ್ನದು. ನಾಯಿಯನ್ನು ಮನೆಯಿಂದ ಆಚೆ ಹಾಕಲು ಪತಿ ಜತೆ ಸದಾ ಜಗಳ ಮಾಡುವ ಜಗಳಗಂಟಿ ಆಗಿ ಕಾಣಿಸಿಕೊಂಡಿದ್ದೇನೆ’ ಎನ್ನುವ ಸಂಯುಕ್ತಾ, ನಿಜಜೀವನದಲ್ಲಿ ಇರುವುದಕ್ಕೂ ಚಿತ್ರದಲ್ಲಿನ ನನ್ನ ಪಾತ್ರಕ್ಕೂ ತದ್ವಿರುದ್ಧ ಎಂದು ಹೇಳುತ್ತಾರೆ.

    ಮನುಷ್ಯ-ನಾಯಿ ಸಂಬಂಧದ ಅನಾವರಣ: ‘ನಾಯಿ ಜತೆ ಅಭಿನಯಿಸಿದ್ದು ಒಂದು ವಿಶೇಷ ಅನುಭವ. ಚಿತ್ರೀಕರಣದ ವೇಳೆ ನಾಯಿಯನ್ನು ವಿರೋಧಿಸುತ್ತಿದ್ದೆ, ಬಳಿಕ ಸೀನ್ ಮುಗಿಯುತ್ತಿದ್ದಂತೆ ಪ್ರೀತಿ ತೋರಿಸುತ್ತಿದ್ದೆ. ನಾನು ಈ ರೀತಿ ನಡೆದುಕೊಳ್ಳುತ್ತಿದ್ದರಿಂದ ನಾಯಿಗೂ ಗೊಂದಲ ಉಂಟಾಗುತ್ತಿತ್ತು. ಇಂದಿನ ದಿನಗಳಲ್ಲಿ ಮನುಷ್ಯ ಮನುಷ್ಯನ ನಡುವಿನ ಪ್ರೀತಿ-ಸಂಬಂಧಗಳು ಕ್ಷೀಣಿಸುತ್ತಿವೆ.

    ಜನರು ಆ ಪ್ರೀತಿಯನ್ನು ಪ್ರಾಣಿಗಳ ಮೂಲಕ ಪಡೆಯುತ್ತಿದ್ದಾರೆ. ಇದನ್ನು ತಿಳಿಸುವುದೇ ‘ನಾನು ಮತ್ತು ಗುಂಡ’. ಮನುಷ್ಯ-ನಾಯಿಯ ಸಂಬಂಧವನ್ನು ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ ಮತ್ತು ನನ್ನದು ಪತಿ-ಪತ್ನಿಯ ಪಾತ್ರ. ಒಟ್ಟಾರೆ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ ಸಂಯುಕ್ತಾ.

    ಶ್ವಾನದ ಫೋಟೋಗೆ ಪೂಜೆ: ‘ನಾಯಿಗಳಿಗೆ ಊಟ ಹಾಕಿದರೆ, ಪ್ರೀತಿ ತೋರಿಸಿದರೆ ಅವುಗಳು ಕೂಡ ನಮ್ಮ ಮೇಲೆ ಅಷ್ಟೇ ಪ್ರೀತಿ ತೋರಿಸುತ್ತವೆ, ನಂಬುತ್ತವೆ’ ಎನ್ನುವ ಸಂಯುಕ್ತಾ, ಮನೆಯಲ್ಲಿ ಸಾಕಷ್ಟು ನಾಯಿಗಳನ್ನು ಸಾಕಿದ್ದು, ಅವುಗಳ ಫೋಟೊಗಳಿಗೆ ಪೂಜೆ ಕೂಡ ಮಾಡುತ್ತಾರಂತೆ. ‘ಈ ಚಿತ್ರಕ್ಕೆ ಆಯ್ಕೆ ಆಗಿದ್ದು ಅನಿರೀಕ್ಷಿತ. ಚಿತ್ರವೊಂದನ್ನು ನೋಡಲು ಹೋದಾಗ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ, ನಿರ್ವಪಕ ರಘು ಹಾಸನ್ ಅವರು ಭೇಟಿ ಆಗಿ ನಾಯಿ ಕುರಿತು ಮಾಡಿರುವ ಕಥೆ ಹೇಳಿದರು. ತುಂಬ ಇಷ್ಟವಾಯಿತು. ಹಾಗಾಗಿ ಹೆಚ್ಚೇನೂ ಪ್ರಶ್ನಿಸದೆ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡೆ’ ಎನ್ನುವ ಸಂಯುಕ್ತಾ, ‘ಮನೆಯಲ್ಲಿ ಸಾಕಿದ್ದ ‘ಗುಂಡ’ ಎಂಬ ನಾಯಿ ಮೃತಪಟ್ಟಿದ್ದು, ಚಿತ್ರಕ್ಕೆ ಅದೇ ಹೆಸರು ಇಡುವಂತೆ ಸಲಹೆ ಕೂಡ ನಾನೇ ನೀಡಿದೆ’ ಎಂದು ಹೇಳಿಕೊಳ್ಳುತ್ತಾರೆ.

    ಪ್ರಯೋಗಾತ್ಮಕ ಚಿತ್ರ: ‘ಸಾಮಾನ್ಯವಾಗಿ ಪ್ರಾಣಿಗಳ ಕುರಿತ ಚಿತ್ರಕ್ಕೆ ಬಂಡವಾಳ ಹಾಕಲು ಹಿಂದೇಟು ಹಾಕುತ್ತಾರೆ. ಆದರೆ ಇಲ್ಲಿ ನಿರ್ದೇಶಕ ಮತ್ತು ನಿರ್ವಪಕರ ಸಾಹಸ ಮೆಚ್ಚುವಂಥದ್ದು. ‘ನಾನು ಮತ್ತು ಗುಂಡ’ ಉತ್ತಮ ಕಥೆ ಒಳಗೊಂಡ ಚಿತ್ರ. ಇಂತಹ ಸಿನಿಮಾಗಳನ್ನು ಎಲ್ಲರೂ ನೋಡಬೇಕು, ಚಿತ್ರದ ಬಗ್ಗೆ ಮಾತನಾಡಬೇಕು. ಪ್ರಯೋಗಶೀಲ ಚಿತ್ರಗಳನ್ನು ಅಪ್ಪಿಕೊಂಡಾಗ ಮಾತ್ರ ಮತ್ತಷ್ಟು ಪ್ರಯೋಗಾತ್ಮಕ ಚಿತ್ರಗಳು ಬರಲು ಸಾಧ್ಯ. ಬೇರೆ ಇಂಡಸ್ಟ್ರಿ ಜನರಂತೆ ಕನ್ನಡಿಗರು ಕೂಡ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲೇ ನೋಡಬೇಕು,

    ಒಳ್ಳೆಯ ಚಿತ್ರಗಳನ್ನು ಗೆಲ್ಲಿಸಬೇಕು’ ಎಂಬುದು ಸಂಯುಕ್ತಾ ಆಶಯ. ‘ಪೀಪಲ್ಸ್ ಆನಿಮಲ್ಸ್’ ಬ್ರ್ಯಾಂಡ್​ ಅಂಬಾಸಡರ್: ಬರೀ ಸಿನಿಮಾ ಅಷ್ಟೇ ಅಲ್ಲದೆ, ‘ಆರ್ಟರಿ’ ಸಂಸ್ಥೆ ಮೂಲಕ ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಸಂಯುಕ್ತಾ. ಮಂಡ್ಯ ಮತ್ತು ಅಮೃತಹಳ್ಳಿಯಲ್ಲಿ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು, ಅವುಗಳನ್ನು ಅಭಿವೃದ್ಧಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲದೆ, ನಾಯಿ, ಕರಡಿ, ಕೋತಿ ಸೇರಿ ಸಾಕಷ್ಟು ಪ್ರಾಣಿಗಳನ್ನು ಕೂಡ ಸಾಕುತ್ತಿದ್ದಾರಂತೆ. ಸದ್ಯ ‘ಪೀಪಲ್ಸ್ ಆನಿಮಲ್ಸ್’ ಬ್ರ್ಯಾಂಡ್​ ಅಂಬಾಸಡರ್ ಆಗಿ ಪ್ರಾಣಿಗಳನ್ನು ರಕ್ಷಿಸುವ, ಅವುಗಳ ಮಹತ್ವ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ ಸಂಯುಕ್ತಾ ಹೊರನಾಡು.

    ಸಾಲುಸಾಲು ಸಿನಿಮಾಗಳಲ್ಲಿ ಬಿಜಿ

    ‘ಆ ದಿನಗಳು’ ಚಿತ್ರದ ಮೂಲಕ ಸಿನಿಜರ್ನಿ ಶುರು ಮಾಡಿದರೂ ‘ಲೈಫು ಇಷ್ಟೇನೆ’ ನನ್ನ ಮೊದಲ ಸಿನಿಮಾ ಎನ್ನುವ ಸಂಯುಕ್ತಾ, ಇಲ್ಲಿಯವರೆಗೆ ಮಾಡಿದ್ದು 15ಕ್ಕೂ ಹೆಚ್ಚು ಸಿನಿಮಾ.

    ಸ್ಯಾಂಡಲ್​ವುಡ್​ನಿಂದ ಸಿನಿಜರ್ನಿ ಶುರು ಮಾಡಿ, ಟಾಲಿವುಡ್, ಕಾಲಿವುಡ್ ಸುತ್ತಿ ಬಂದಿದ್ದಾರೆ. ಸದ್ಯ ಕನ್ನಡದ ‘ಮೈಸೂರು ಮಸಾಲಾ’, ‘ಗ್ಯಾಂಗ್​ಸ್ಟಾರ್’, ‘ಅರಿಷಡ್ವರ್ಗ’, ‘ಆಮ್ಲೆಟ್’, ‘ಹೊಂದಿಸಿ ಬರೆಯಿರಿ’ ಚಿತ್ರಗಳಲ್ಲಿ ಅವರು ಬಿಜಿ. ‘ಕನ್ನಡದ ಜತೆಗೆ ತೆಲುಗು-ತಮಿಳು ಇಂಡಸ್ಟ್ರಿಯಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆ’ ಎನ್ನುವ ಇವರು, ತೆಲುಗಿನಲ್ಲಿ ‘ಲಾಕ್ಡ್’, ‘ಕೃಷ್ಣಲೀಲಾ’, ತಮಿಳಿನ ‘ರೆಡ್ ರಮ್ ಸಿನಿಮಾಗಳಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ಒಂದೊಳ್ಳೆಯ ಸ್ಕ್ರಿಪ್ಟ್ ಇರಬೇಕು. ಯಾವುದೇ ಭಾಷೆ, ನಟ ಯಾರೇ ಇದ್ದರೂ ಅಭಿನಯಿಸುತ್ತೇನೆ. ಅವಕಾಶ ಸಿಕ್ಕರೆ ಯಾವುದೇ ಚಿತ್ರರಂಗದಲ್ಲೂ ಅಭಿನಯಿಸಲು ಸೈ’ ಎನ್ನುತ್ತಾರೆ ಸಂಯುಕ್ತಾ.

    | ಶಿವರಾಯ ಪೂಜಾರಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts