ಪತಿ, ಪತ್ನಿ ಮತ್ತು ನಾಯಿ! ತ್ರಿಕೋನ ಪ್ರೇಮ​ ಕಹಾನಿ ಅಂತ್ಯ ಹೇಗಾಯ್ತು?

ಪಟನಾ: ಇವರಿಬ್ಬರೂ ತಮ್ಮ ಪಾಲಕರು ನೋಡಿ ಒಪ್ಪಿದವರನ್ನೇ ಮದುವೆಯಾಗಿದ್ದರು. ಆದರೆ, ಪತಿ ಮಾತ್ರ ತನ್ನ ಪತ್ನಿಗಿಂತಲೂ ತನ್ನ ಸಾಕು ನಾಯಿಯನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದ. ಸ್ವಲ್ಪಕಾಲ ತಡೆದುಕೊಂಡ ಪತ್ನಿ, ನಾಯಿಯನ್ನು ಓಡಿಸುವಂತೆ ಪತಿಯನ್ನು ಪೀಡಿಸಲಾರಂಭಿಸಿದಳು. ಇದು ಪತಿ-ಪತ್ನಿ ನಡುವೆ ವಿರಸಕ್ಕೆ ಕಾರಣವಾಯಿತು. ನಾಯಿಯನ್ನು ಓಡಿಸುವಂತೆ ಹೇಳಿದಾಗಲೆಲ್ಲ ಪತಿ ತನ್ನ ಪತ್ನಿಯನ್ನು ಹೊಡೆಯುತ್ತಿದ್ದ.

ಒಮ್ಮೆ ಆ ನಾಯಿ ಪತ್ನಿಯನ್ನು ಕಚ್ಚಿತು. ಆಗಲೂ ಕೂಡ ಪತ್ನಿ ನಾಯಿಯನ್ನು ಓಡಿಸುವಂತೆ ಪತಿ ಮೇಲೆ ಒತ್ತಡ ಹೆಚ್ಚಿಸಿದಳು. ಆಗಲೂ ಕೂಡ ಆಕೆಗೆ ಪತಿಯಿಂದ ಸಿಕ್ಕಿದ್ದು ಒಡೆತದ ಉಡುಗೊರೆ. ಇದಾದ ಬಳಿಕ, ಆ ನಾಯಿ ಮತ್ತೆರಡು ಬಾರಿ ಆಕೆಯನ್ನು ಕಚ್ಚಿತು. ಆಗಲೂ ನಾಯಿಯನ್ನು ಓಡಿಸಲು ನಿರಾಕರಿಸಿ ಪತಿ ಹೊಡೆದಿದ್ದರಿಂದ ಬೇಸತ್ತ ಪತ್ನಿ ವಿಚ್ಛೇದನ ಕೋರಿ ಪಟನಾದ ಗಾಂಧಿ ಮೈದಾನ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದಳು.

ಈಕೆಯ ದುಃಖದ ಕತೆ ಕೇಳಿದ ಮಹಿಳಾ ಪೊಲೀಸರು ಕರಗಿಹೋದರು. ಕೊನೆಗೆ ಪತಿ ಮತ್ತು ಪತ್ನಿಯ ನಡುವೆ ರಾಜೀ ಸಂಧಾನಕ್ಕೆ ಮುಂದಾದರು. ಸಂಧಾನಕ್ಕೆ ಬಂದ ಪತಿ, ನನಗೆ ಪತ್ನಿಗಿಂತಲೂ ನನ್ನ ಸಾಕುನಾಯಿಯ ಮೇಲೆ ಪ್ರೀತಿ ಹೆಚ್ಚು. ಇದನ್ನು ಒಪ್ಪಿಕೊಂಡು ನನ್ನೊಂದಿಗೆ ಬದುಕುವುದಾದರೆ ಬದುಕಲಿ. ಇಲ್ಲವೇ ವಿಚ್ಛೇದನ ಪಡೆದು ನನ್ನಿಂದ ದೂರಾಗಲಿ ಎಂದು ಖಡಕ್​ ಆಗಿ ಹೇಳಿದ.

ಇದರಿಂದ ಸಂಧಾನಕಾರರು ಸ್ವಲ್ಪ ಗಲಿಬಿಲಿಗೊಂಡರು. ಆದರೂ ಸಾವರಿಸಿಕೊಂಡು ಪತಿ ಮತ್ತು ಪತ್ನಿಯ ನಡುವೆ ಸಂಧಾನ ಏರ್ಪಡಿಸುವಲ್ಲಿ ಯಶಸ್ವಿಯಾದರು. ಆದರೆ, ಪತಿ ನಾಯಿಯನ್ನು ಓಡಿಸಲು ಒಪ್ಪಿಕೊಂಡನೇ? ಅಥವಾ ಪತ್ನಿಯೇ ಆ ನಾಯಿಯೊಂದಿಗೆ ಹೊಂದಿಕೊಂಡು ಹೋಗಲು ಸಮ್ಮತಿಸಿದಳೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅವರಿಬ್ಬರೂ ಒಟ್ಟಾಗಿ ಖುಷಿಯಿಂದ ಹೋಗಿದ್ದಾಗಿ ಗಾಂಧಿ ಮೈದಾನ ಮಹಿಳಾ ಪೊಲೀಸ್​ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)