ಒಲಿಂಪಿಕ್ಸ್​​ ಆಯೋಜಿಸಲು ಭಾರತಕ್ಕೇನು ಶಕ್ತಿ ಇಲ್ಲವೇ? ಬೇಕಿದ್ದರೆ ಅಮರಾವತಿಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸುತ್ತೇನೆ…

ಹೈದರಾಬಾದ್​: ಒಲಿಂಪಿಕ್ಸ್​ ಕ್ರೀಡಾ ಕೂಟದ ಆಯೋಜನೆಯ ಅವಕಾಶ ದಕ್ಕಿಸಿಕೊಳ್ಳುವುದು ಭಾರತದ ಮಟ್ಟಿಗೆ ಸದ್ಯಕ್ಕೆ ದೂರದ ಮಾತೇ ಸರಿ. ಈ ಐತಿಹಾಸಿಕ ಕೂಟದ ಆತಿಥ್ಯ ಪಡೆಯುವುದು, ಆಯೋಜಿಸುವುದು ಎಂದರೆ ಸುಮ್ಮನೆ ಮಾತಲ್ಲ ಬಿಡಿ. ಆದರೆ, ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಒಲಿಂಪಿಕ್ಸ್​ ಆತಿಥ್ಯದ ಕನಸನ್ನು ಜನರಲ್ಲಿ ಬಿತ್ತಲು ಆರಂಭಿಸಿದ್ಧಾರೆ.

ಭಾರತವೂ ಒಲಿಂಪಿಕ್ಸ್​ ಕ್ರೀಡಾ ಕೂಟದ ಆತಿಥ್ಯ ಪಡೆಯಬೇಕು. ಅದನ್ನು ಆಂಧ್ರದ ಉದ್ದೇಶಿತ ರಾಜಧಾನಿ ಅಮರಾವತಿಯಲ್ಲೇ ಆಯೋಜಿಸಬೇಕು ಎಂದು ಅವರು ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ” ಒಲಿಂಪಿಕ್ಸ್ ಕ್ರೀಡಾ ಕೂಟ ಆಯೋಜಿಸುವ ಸಾಮರ್ಥ್ಯ ಭಾರತಕ್ಕಿಲ್ಲವೇ? ಕೂಟದ ಆತಿಥ್ಯ ಪಡೆಯಲು ಭಾರತ ಸರ್ಕಾರ ಬಿಡ್​ ಸಲ್ಲಿಸಬೇಕು ಎಂದು ನಾನು ಆಗ್ರಹಿಸುತ್ತೇನೆ. ಬೇಕಿದ್ದರೆ ಆಂಧ್ರದ ರಾಜಧಾನಿ ಅಮರಾವತಿಯಲ್ಲಿ ಕ್ರೀಡಾ ಕೂಟಕ್ಕೆ ನಾನು ವ್ಯವಸ್ಥೆ ಕಲ್ಪಿಸುತ್ತೇನೆ. ಅಮರಾವತಿಯನ್ನು ಕ್ರೀಡಾ ಹಬ್​ ಆಗಿ ಅಭಿವೃದ್ಧಿಪಡಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಒಲಿಂಪಿಕ್​ನ ಆತಿಥ್ಯ ಪಡೆಯುವ ಮಾತುಗಳನ್ನು ಚಂದ್ರಬಾಬು ನಾಯ್ಡು ಇದೇ ಮೊದಲಬಾರಿಗೆ ಆಡಿದ್ದಲ್ಲ. ಈ ಹಿಂದೆ 2016ರಲ್ಲೂ ಅವರು ಇದೇ ವಿಶ್ವಾಸದ ಮಾತುಗಳನ್ನಾಡಿದ್ದರು. ಆಂಧ್ರದ ಅಮರಾವತಿಯಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ಆಯೋಜನೆ ಆಗುವಂತೆ ಮಾಡುವುದೇ ನನ್ನ ಗುರಿ ಎಂದು ಅವರು ಕಬ್ಬಡಿ ಟೂರ್ನಿಯೊಂದರ ಉದ್ಘಾಟನೆ ವೇಳೆ ಹೇಳಿಕೊಂಡಿದ್ದರು.