ನನ್ನ ಮತಕ್ಷೇತ್ರ ಕಲಬುರಗಿ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ: ಮಲ್ಲಿಕಾರ್ಜುನ್‌ ಖರ್ಗೆ

ಕಲಬುರಗಿ: ನನ್ನ ಮತಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಸೋಲಿಸೋದು, ಗೆಲ್ಲಿಸೋದು ಇಲ್ಲಿಯ ಜನರು. ಕಲಬುರಗಿಯ ಜನರ ನನ್ನ ಪಾಲಿನ ದೇವರು ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ತಿಳಿಸಿದ್ದಾರೆ.

ಕಲಬುರಗಿ ನನ್ನ ನಾಡು, ಕಲಬುರಗಿಯ ಜನ ನನ್ನ ಬೆಳೆಸಿದ್ದಾರೆ. ಒಂದಲ್ಲ ಎರಡಲ್ಲ ಮೂರಲ್ಲ 11 ಎಲೆಕ್ಷನ್ ನಲ್ಲಿ ಜನ ಗೆಲ್ಲಿಸಿದ್ದಾರೆ. 12 ರಿಂದ 13 ಚುನಾವಣೆಗಳಲ್ಲಿ ಗೆಲ್ಲಿಸಲು ಸಹಾಯ ಮಾಡಿದ್ದಾರೆ. ನನ್ನ ಮತಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನ ಸೋಲಿಸೋದು, ಗೆಲ್ಲಿಸೋದು ಇಲ್ಲಿಯ ಜನರು. ಕಲಬುರಗಿಯ ಜನರ ನನ್ನ ಪಾಲಿನ ದೇವರು. ಜ‌ನ ಎಲ್ಲಿಯವರೆಗೂ ಇಲ್ಲಿಯೇ ಇರು ಎನ್ನುತ್ತಾರೆಯೋ ಅಲ್ಲಿವರೆಗೂ ಇಲ್ಲೇ ಇರುತ್ತೇನೆ. ನನ್ನ ಬೇಡ ಅಂದ ಬಳಿಕವೂ ಕೂಡ ಇಲ್ಲೇ ಇರುತ್ತೇನೆ ಎಂದರು.

ಕಲಬುರಗಿಯನ್ನು ಯಾಕೆ ಟಾರ್ಗೆಟ್‌ ಮಾಡುತ್ತಾರೋ ಅದು ಅವರಿಗೆ ಗೊತ್ತು. ಪ್ರಧಾನಮಂತ್ರಿ ಕಲಬುರಗಿಗೆ ಬಂದರೆ ಬೇಡ ಎನ್ನಲಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರವಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಆಯಾ ಪಕ್ಷದಲ್ಲಿ, ಅವರವರ ಸಿದ್ಧಾಂತವನ್ನು ಹೇಳಬಹುದು. ಅವರ ತತ್ತ್ವಗಳ ಮೇಲಿಟ್ಟಿರುವ ವಿಶ್ವಾಸದಂತೆ ಅವರ ಪ್ರಕಾರ ಅವರು, ನಮ್ಮ ಪ್ರಕಾರ ನಾವು ಹೇಳುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)