ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಪಾಗಲ್​ ಪ್ರೇಮಿ

ಬೆಂಗಳೂರು: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಅಪ್ರಾಪ್ತೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಬುಧವಾರ ನಡೆದಿದೆ.

ದೊಡ್ಡಬಳ್ಳಾಪುರದ ಬಸವೇಶ್ವರನಗರದ​​ ನಿವಾಸಿಯಾಗಿರುವ ಕೀರ್ತನಾ(16) ಮೃತ ದುರ್ದೈವಿ. ಆರೋಪಿ ನವೀನ್ ಮೃತ ಹುಡುಗಿಯ ಸೋದರ ಮಾವನಾಗಿದ್ದು, ಈತನಿಂದಲೇ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಗಂಗಾಧರಪುರ ಬಳಿ ಮಚ್ಚಿನಿಂದ ಹತ್ಯೆಗೈದು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ತನ್ನನ್ನು ಪ್ರೀತಿಸುವಂತೆ ಆರೋಪಿ ನವೀನ್​ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಹಿಂದೆ ಎರಡು ಬಾರಿ ಹುಡುಗಿಯ ಪೋಷಕರು ಆತನಿಗೆ ಬುದ್ಧಿವಾದ ಹೇಳಿದ್ದರಂತೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)