ಹರಿಹರ: ನಗರಸಭೆ ಸಭಾಂಗಣದಲ್ಲಿ ಸೋಮವಾರ ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಬಜೆಟ್ ಪೂರ್ವಭಾವಿ ಸಭೆಯು ಕುಂದು ಕೊರತೆ ಸಭೆಯಾಗಿ ಮಾರ್ಪಟ್ಟು ಸಭೆಯ ಮೂಲ ಉದ್ದೇಶವೇ ಮಾಯವಾಯಿತು.
ಪ್ರತಿವರ್ಷ ಆಯವ್ಯಯ ಮಾಡುವ ಸಂದರ್ಭದಲ್ಲಿ ನಗರದ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಹಾಗೂ ಇತರರಿಂದ ಸಲಹೆ ಪಡೆಯಬೇಕು ಎನ್ನುವ ದೃಷ್ಟಿಯಿಂದ ದಾಖಲೆಗಾಗಿ ಮಾತ್ರ ಸಭೆ ಎನ್ನುವಂತಿತ್ತು. ಬರುವ ಆರ್ಥಿಕ ವರ್ಷದ ಆದಾಯ, ಖರ್ಚುಗಳ ಬಗ್ಗೆ ರ್ಚಚಿಸಬೇಕಿದ್ದ ಸಭೆ ಕುಂದುಕೊರತೆ ಸಭೆಯಾಗಿ ಮಾರ್ಪಟ್ಟಿತು.
ನೇಕಾರ ಬಡಾವಣೆಯಾಗಿ 15 ವರ್ಷಗಳು ಕಳೆದರೂ ಇನ್ನೂ ರಸ್ತೆ, ಚರಂಡಿ, ನೀರು, ವಿದ್ಯುತ್ ಸರಬರಾಜಾಗುತ್ತಿಲ್ಲ ಎಂದು ನೇಕಾರ ಸಂಘದ ಕೊಟ್ರಪ್ಪ ಕೊಟಿಗಿ, ಅಗಡಿ ಮಂಜುನಾಥ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಬಡಾವಣೆಗೆ ವಿದ್ಯುತ್ ಸಂಪರ್ಕ ಪಡೆಯಲು 40-50 ಲಕ್ಷ ರೂ. ಹಣವನ್ನು ಬೆಸ್ಕಾಂಗೆ ಪಾವಸಬೇಕು. ಆದರೆ ನಗರಸಭೆ ಬಳಿ ಅಷ್ಟು ಹಣವಿಲ್ಲ ಎನ್ನುತ್ತಾರೆ. ತಾತ್ಕಾಲಿಕವಾಗಿ 10 ಲಕ್ಷ ರೂ. ಪಾವತಿಸಿದರೆ ವಿದ್ಯುತ್ ನೀಡುವುದಾಗಿ ಬೆಸ್ಕಾಂ ಅಧಿಕಾರಿ ತಿಳಿಸಿದ್ದು ಅಷ್ಟನ್ನಾದರೂ ಪಾವತಿಸಬೇಕು ಎಂದು ಶಂಕ್ರಪ್ಪ ದೂಳಾ, ನಾಗರಾಜ್ ಇಂಡಿ, ಪತ್ರಿನಾಥ, ತಿಪ್ಪೇಶ್ ಆಗ್ರಹಿಸಿದರು.
ನಗರದಲ್ಲಿ ಮಾರುಕಟ್ಟೆಗೆ ಜಾಗ ನಿಗದಿಪಡಿಸದ ಕಾರಣ ರಸ್ತೆ ಬದಿಯಲ್ಲೇ ಕುಳಿತು ತರಕಾರಿ ಮಾರಲಾಗುತ್ತಿದೆ. ಹಳೇ ಕೋರ್ಟ್ ಜಾಗದಲ್ಲಿ ಮಾರುಕಟ್ಟೆ ನಿರ್ವಿುಸುವುದಾಗಿ ಭರವಸೆ ನೀಡಿ ವರ್ಷಗಳೆ ಕಳೆದಿದೆ ಎಂದರು.
ಶೇಖರ್ಗೌಡ ಮಾತನಾಡಿ, ನಗರದಲ್ಲಿ ಗ್ರಾಮದೇವತೆ ಹಬ್ಬ ಆಯೋಜಿಸಿದ್ದು, ಅಷ್ಟರೊಳಗೆ ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚಿಸಬೇಕು. ಹಬ್ಬದ ವೇಳೆ ನೀರು, ವಿದ್ಯುತ್ ಪೂರೈಕೆಗೆ ವ್ಯತ್ಯಯವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಅಯ-ವ್ಯಯ ಸಭೆ ಕರೆದು ಎಲ್ಲರ ಮಾತು ಕೇಳಿ ನಂತರ ನಿಮಗೆ ತಿಳಿದಂತೆ ಮಾಡುತ್ತೀರಿ. ಕುಡಿಯುವ ನೀರಿಗೆ, ಬೀದಿಬದಿ ವ್ಯಾಪಾರಕ್ಕೆ ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದರು.
ಸರ್ಕಾರಿ ಶಾಲೆಗೆ ಕೊಠಡಿ, ಶೌಚಾಲಯವಿಲ್ಲ, ಮುಖ್ಯರಸ್ತೆ ತಿರುವುಗಳಿಗೂ ನಾಮಫಲಕಗಳಿಲ್ಲ. ರಸ್ತೆ ನಿರ್ವಿುಸಲು ನಗರಸಭೆ ಮಳಿಗೆ ಒಡೆದು ಹಾಕಿದ್ದು, ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. 3-4 ತಿಂಗಳು ಅಲೆದಾಡಿದರೂ ಇ-ಸ್ವತ್ತು ಸಿಗುತ್ತಿಲ್ಲ. ಟ್ಯಾಕ್ಸಿ ಸ್ಟ್ಯಾಂಡ್ಗೆ ಜಾಗ ನಿಗದಿಪಡಿಸಿ, ರಸ್ತೆ ನಿರ್ವಿುಸಿ, ಹೈಮಾಸ್ಟ್ ದೀಪ ಅಳವಡಿಸಿ ಮತ್ತು ನಗರದ ನಾಲ್ಕೂ ಕಡೆ ಸಿಸಿ ಕ್ಯಾಮರಾ ಅಳವಡಿಸಿದರೆ ಕಳ್ಳತನ ನಿಗ್ರಹಿಸಬಹುದು ಎಂದು ಸಾರ್ವಜನಿಕರು ಸಲಹೆ ನೀಡಿದರು.
ಉಪಾಧ್ಯಕ್ಷ ಎಚ್. ಜಂಬಣ್ಣ, ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ, ದಾದಾ ಖಲಂದರ್, ಆಟೋ ಹನುಮಂತಪ್ಪ, ಆರ್.ಸಿ. ಜಾವಿದ್, ಪಕ್ಕೀರಮ್ಮ, ಕೆ.ಬಿ. ರಾಜಶೇಖರ್, ಕ್ರೀಡಾಪಟು ಎಚ್. ನಿಜಗುಣ ಇತರರಿದ್ದರು.