ನಗರದಲ್ಲೂ ವೈದ್ಯರ ಮುಷ್ಕರದ ಬಿಸಿ

ಮೈಸೂರು: ದೇಶಾದ್ಯಂತ ನಡೆದ ವೈದ್ಯರ ಮುಷ್ಕರದ ಬಿಸಿ ನಗರಕ್ಕೂ ತಟ್ಟಿದ್ದು, ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗವನ್ನು(ಒಪಿಡಿ) ಬಂದ್ ಮಾಡಲಾಗಿತ್ತು. ಇದರಿಂದ ರೋಗಿಗಳು ಪರದಾಡಿದರು.

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ನಗರದಲ್ಲೂ ಬೆಂಬಲ ವ್ಯಕ್ತವಾಯಿತು. ಇದರಿಂದಾಗಿ ನಗರದ ಖಾಸಗಿ ಆಸ್ಪತ್ರೆಗಳ ಒಪಿಡಿಯನ್ನು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮುಚ್ಚಲಾಗಿತ್ತು.

ತುರ್ತು ಚಿಕಿತ್ಸೆ ಹಾಗೂ ವಾರ್ಡ್‌ಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಎಂದಿನಂತೆ ವೈದ್ಯಕೀಯ ಸೇವೆ ನೀಡಲಾಯಿತು. ಆದರೆ, ಹೊರರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಯಿತು. ಜೆಎಸ್‌ಎಸ್, ಅನಘ ಸೇರಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಂಡಿತ್ತು. ಮಾನವೀಯತೆ ಹಿನ್ನೆಲೆ ಕೆಲ ಆಸ್ಪತ್ರೆಗಳ ವೈದ್ಯರು ಕಪ್ಪುಪಟ್ಟಿ ಧರಿಸಿ ಸೇವೆ ನೀಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡುವ ವಿಷಯ ತಿಳಿದು ಬಹುತೇಕ ರೋಗಿಗಳು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದರು. ಅದರಲ್ಲೂ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಹೆಚ್ಚಿತ್ತು. ಇಲ್ಲಿ ಕಿರಿಯ ವೈದ್ಯರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ, ರಜೆ ರದ್ದುಪಡಿಸಿ ಎಲ್ಲ ಹಿರಿಯ ವೈದ್ಯರನ್ನು ಸೇವೆಗೆ ಬಳಕೆ ಮಾಡಿಕೊಳ್ಳಲಾಯಿತು. ಆದರೂ, ಆಸ್ಪತ್ರೆಗೆ ಬಂದ ಎಲ್ಲ ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಹಿರಿಯ ವೈದ್ಯರಿಗೆ ಸಾಧ್ಯವಾಗಲಿಲ್ಲ. ವಿವಿಧ ವಿಭಾಗಗಳ ಮುಂದೆ ರೋಗಿಗಳ ಸರದಿ ಸಾಲು ಕಂಡುಬಂತು.

ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದಿದ್ದರಿಂದ ಚಿಕಿತ್ಸಾ ಸೇವೆ ಒದಗಿಸಲು ತಡವಾಯಿತು. ಸಾಮಾನ್ಯ ದಿನದಲ್ಲಿ ಒಂದೊಂದು ಒಪಿಡಿಯಲ್ಲಿ 4 ಕಿರಿಯ ವೈದ್ಯರು, ಹಿರಿಯ ವೈದ್ಯರಿಗೆ ನೆರವು ನೀಡುತ್ತಿದ್ದರು.
ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಮಕ್ಕಳ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇದರಿಂದ ರೋಗಿಗಳ ತೊಂದರೆ ತಕ್ಕಮಟ್ಟಿಗೆ ನಿವಾರಣೆಯಾಯಿತು.

ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ: ನಿರಂತರವಾಗಿ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಿರಿಯ ವೈದ್ಯರ ಸಂಘ(ಜೆಡಿಎ)ದ ಸದಸ್ಯರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕರ್ತವ್ಯಕ್ಕೆ ಹಾಜರಾಗದೆ ಕಪ್ಪುಪಟ್ಟಿ ಧರಿಸಿ ಕಿರಿಯ ವೈದ್ಯರು ಆಕ್ರೋಶ ವ್ಯಕ್ತಪಡಿಸಿದರು. ತುರ್ತುನಿಗಾ ಘಟಕದ ಸೇವೆ ಹೊರತುಪಡಿಸಿ ಹೊರ ರೋಗಿಗಳ ವಿಭಾಗ, ವಾರ್ಡ್‌ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಬಹಿಷ್ಕರಿಸಿದ್ದರು.

ದೇಶದೆಲ್ಲೆಡೆ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇದು ವೈದ್ಯರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದೆ. ಕಾರ್ಯಕ್ಷೇತ್ರದಲ್ಲಿ ಭದ್ರತೆ, ಸವಲತ್ತುಗಳ ಕೊರತೆಯಿಂದ ಅನನುಕೂಲ, ಅಡಚಣೆಯಾಗುತ್ತಿದೆ. ಅಸುರಕ್ಷಿತ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ, ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಶೀಘ್ರವೇ ಭದ್ರತೆ ಕಲ್ಪಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಿರಿಯ ವೈದ್ಯರ ಸಂಘದ ಪದಾಧಿಕಾರಿಗಳಾದ ಡಾ.ಎಚ್.ನವೀನ್, ಡಾ.ವಿದ್ಯಾದೀಶ್, ಡಾ.ಸುಪ್ರೀತ್, ಟಿ.ಆರ್.ಅವಿನಾಶ್ ಸೇರಿ ಅಂದಾಜು 300ಕ್ಕೂ ಹೆಚ್ಚು ಕಿರಿಯ ವೈದ್ಯರು ಪಾಲ್ಗೊಂಡಿದ್ದರು.

ತೊಂದರೆಯಾಗದಂತೆ ಸೇವೆ
ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ವೈದ್ಯರು, ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಿದ್ದರು. ಹೀಗಾಗಿ, ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.
ಡಾ.ಆರ್.ವೆಂಕಟೇಶ್, ಜಿಲ್ಲಾ ಆರೋಗ್ಯಾಧಿಕಾರಿ.

Leave a Reply

Your email address will not be published. Required fields are marked *