ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೋಲ್ಕತ್ತಾದ ವೈದ್ಯೆಯ ಬರ್ಬರ ಹತ್ಯೆ ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಕೂಗು ಕಾಸರಗೋಡು ಜಿಲ್ಲೆಯಲ್ಲೂ ಪ್ರತಿಧ್ವನಿಸಿದೆ. ಐಎಂಎ ಕಾಸರಗೋಡು ಜಿಲ್ಲಾ ಘಟಕದ ಕರೆಯ ಮೇರೆಗೆ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಹೊರ ರೋಗಿ ವಿಭಾಗ ಬೆಳಗ್ಗೆ 6ರಿಂದ ಸಂಪೂರ್ಣ ಬಂದ್ ಆಗಿದ್ದು, ಆ.18ರ ಬೆಳಗ್ಗೆ 6ರ ವರೆಗೆ ಮುಷ್ಕರ ಮುಂದುವರಿಯಿತು. ರೋಗಿಗಳಿಗೆ ತುರ್ತು ಅಗತ್ಯದ ಚಿಕಿತ್ಸೆಯನ್ನು ಮಾತ್ರ ನೀಡಲಾಗಿದೆ. ವೈದ್ಯರು ಹೊರ ರೋಗಿ ವಿಭಾಗದಲ್ಲಿ ಹಾಜರಾಗದೆ ಮುಷ್ಕರದಲ್ಲಿ ಪಾಲ್ಗೊಂಡರು. ಸರ್ಕಾರಿ ವೈದ್ಯರು ಕೈಗೆ ಕಪ್ಪು ಬಟ್ಟೆ ಬಿಗಿದು ಪ್ರತಿಭಟನೆಯೊಂದಿಗೆ ತುರ್ತು ಸೇವಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರು. ಮುಷ್ಕರಕ್ಕೆ ಆರೋಗ್ಯ ರಂಗದ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದವು.
ಮುಷ್ಕರ ನಿರತ ವೈದ್ಯರು ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಞಂಗಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಆರೋಗ್ಯ ಕಾರ್ಯಕರ್ತರಿಗೆ ತಮ್ಮ ಕರ್ತವ್ಯಾವಧಿಯಲ್ಲಿ ಸೂಕ್ತ ಭದ್ರತೆ ಒದಗಿಸಬೇಕು, ಕೋಲ್ಕತ್ತಾದ ಟ್ರೈನಿ ವೈದ್ಯೆ ಮೇಲಿನ ಹಂತಕರನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳಬೇಕು, ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆ ಹಾಗೂ ಆಸ್ಪತ್ರೆಗಳ ವಿರುದ್ಧ ನಡೆಯುತ್ತಿರುವ ಗೂಂಡಾ ವರ್ತನೆ ಕೊನೆಗಾಣಿಸಲು ಕಠಿಣ ಕಾನೂನು ಜಾರಿಗೊಳಿಸಬೇಕು, ಜತೆಗೆ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವವರ ಭದ್ರತೆಗೂ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ವೈದ್ಯರ ಪ್ರತಿಭಟನೆಯಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಆಗಮಿಸಿದ ರೋಗಿಗಳು ಪರದಾಡಿದರು.