ವ್ಯಕ್ತಿಯ ದೇಹದಲ್ಲಿ ಗರ್ಭಾಶಯ ಸೇರಿ ಹೆಣ್ಣಿನ ಸಂತಾನೋತ್ಪತ್ತಿ ಅಂಗಾಂಗಗಳು ಪತ್ತೆ!

ಮುಂಬೈ: ವಿರಳಾತಿವಿರಳ ಪ್ರಕರಣವೊಂದರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ತೆರಳಿದ್ದ 29 ವರ್ಷದ ವ್ಯಕ್ತಿಯೊಬ್ಬನ ದೇಹದಲ್ಲಿ ಗರ್ಭಾಶಯ ಸೇರಿ ಕಾರ್ಯನಿರ್ವಹಿಸದ ಹೆಣ್ಣಿನ ಸಂತಾನೋತ್ಪತ್ತಿ ಅಂಗಾಂಗಳು ಪತ್ತೆಯಾಗಿವೆ.

ಮುಂಬೈನ ಜೆಜೆ ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳ ಹಿಂದೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಅನಗತ್ಯ ಅಂಗಾಂಗಳನ್ನು ತೆಗೆದುಹಾಕಿದ್ದಾರೆ.

ಇದುವರೆಗೂ ಈ ರೀತಿಯ 200 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇಂತಹ ಪ್ರಕರಣ ತುಂಬಾ ವಿರಳವಾಗಿದ್ದು, ಇಂತಹ ಪ್ರಕರಣಗಳನ್ನು ”ಪರ್ಸಿಸ್ಟೆನ್ಸ್​ ಮುಲೇರಿಯನ್ ಡಕ್ಟ್ ಸಿಂಡ್ರೋಮ್” ಎಂದು ಕರೆಯಲಾಗುತ್ತದೆ ಎಂದು ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟ್​ ಗೀತೆ ತಿಳಿಸಿದ್ದಾರೆ. ಇವರ ಮೇಲ್ವಿಚಾರಣೆಯಲ್ಲಿಯೇ ಜೂನ್​ 26ರಂದು ವ್ಯಕ್ತಿಗೆ ಶಸ್ತಚಿಕಿತ್ಸೆ ನಡೆಸಲಾಗಿತ್ತು.

ಕಾರ್ಯನಿರ್ವಹಿಸದ ಅಂಗಗಳಾದ ಗರ್ಭಾಶಯ, ಫೆಲೋಪಿಯನ್ ಟ್ಯೂಬ್​, ಸೆರ್ವಿಕ್ಸ್​ ಹಾಗೂ ಅಪೂರ್ಣವಾದ ಯೋನಿಯ ಅಂಗವನ್ನು ತೆಗೆದು ಹಾಕಲಾಗಿದ್ದು, ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಗೀತೆ ಮಾಹಿತಿ ನೀಡಿದ್ದಾರೆ.

ವ್ಯಕ್ತಿಯ ದೇಹವನ್ನು ಸ್ಕ್ಯಾನ್​ ಮಾಡಿದಾಗ ವೃಷಣಗಳು ಆತನ ಹೊಟ್ಟೆಯಲ್ಲಿಯೇ ಇರುವುದು ದೃಢಪಟ್ಟಿತು. ಯಾವಾಗ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿದೆವೋ ಆಗ ಗರ್ಭಾಶಯ ರೀತಿಯ ಭಾಗ ಕಾಣಿಸಿತು. ಎಂಆರ್​ಐ ಸ್ಕ್ಯಾನ್​ ಮಾಡಿ ನೋಡಿದಾಗ ವ್ಯಕ್ತಿ ಫೆಲೋಪಿಯನ್ ಟ್ಯೂಬ್​, ಸೆರ್ವಿಕ್ಸ್​ ಹಾಗೂ ಅಪೂರ್ಣವಾದ ಯೋನಿಯ ಭಾಗ ಇರುವುದು ಗೊತ್ತಾಯಿತು ಎಂದು ಗೀತೆ ವಿವರಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *