ವೈದ್ಯರ ನಿರ್ಲಕ್ಷ್ಯ, ಯುವಕ ಸಾವು ಆರೋಪ

ರಾಣೆಬೆನ್ನೂರ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗೆಂದು ದಾಖಲಾಗಿದ್ದ ಯುವಕ ವೈದ್ಯರ ನಿರ್ಲಕ್ಷ್ಯಂದ ಮೃತಪಟ್ಟದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಗಳು ಹಾಗೂ ಸಾರ್ವಜನಿಕರು ಭಾನುವಾರ ನಗರದ ಹಲಗೇರಿ ರಸ್ತೆಯ ಸರ್ಕಾರಿ ಆಸ್ಪತ್ರೆ ಮುಂಭಾಗ ಶವವಿರಿಸಿ ಪ್ರತಿಭಟನೆ ನಡೆಸಿದರು.

ಘಟನೆ ಹಿನ್ನೆಲೆ: ಇಲ್ಲಿನ ಕೆಎಸ್​ಆರ್​ಟಿಸಿ ಬಸ್​ನಿಲ್ದಾಣದಲ್ಲಿ ನಗರದ ಇಸ್ಲಾಂಪುರ ಓಣಿಯ ಖಮರುದ್ದೀನ್ ಬಾಬುಸಾಬ್ ಹಾವನೂರ (26)ಗೆ ಬಸ್ ಹಿಮ್ಮುಖವಾಗಿ ಬಡಿದು ಗಾಯಗೊಂಡಿದ್ದನು. ತಕ್ಷಣವೇ ಈತನನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಂದಲೇ ಯುವಕ ಮೃತ ಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಸಂಬಂಧಿಗಳು ಶವವನ್ನು ಸರ್ಕಾರಿ ಆಸ್ಪತ್ರೆ ಮುಂಭಾಗ ಇರಿಸಿ ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಆಸ್ಪತ್ರೆ ನಿರ್ಲಕ್ಷ್ಯ:

ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಬಹುತೇಕ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಆಗಮಿಸುವುದಿಲ್ಲ. ಅವರುಗಳು ಬರೀ ತಮ್ಮ ಖಾಸಗಿ ಆಸ್ಪತ್ರೆ ಕಡೆ ಹೆಚ್ಚಿನ ನಿಗಾ ವಹಿಸುತ್ತಾರೆ. ಬಡವರಿಗೆ ಆರೋಗ್ಯ ಸೇವೆಯೇ ದೊರೆಯದಂತಾಗಿದೆ. ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಸಮರ್ಪಕ ಚಿಕಿತ್ಸೆ ನೀಡಿದ್ದರೆ ಬದುಕುತ್ತಿದ್ದನು ಎಂದು ಸಾರ್ವಜನಿಕರು ಆರೋಪಿಸಿದರು.

ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್​ಪಿ ಅನಿಲಕುಮಾರ ಭೂಮರಡ್ಡಿ ನೇತೃತ್ವದಲ್ಲಿ ಆಗಮಿಸಿದ ಪೊಲೀಸರು, ಆಸ್ಪತ್ರೆಯ ವೈದ್ಯರು ಹಾಗೂ ಮೃತನ ಸಂಬಂಧಿಗಳೊಂದಿಗೆ ರ್ಚಚಿಸಿ ಪ್ರತಿಭಟನೆ ತಿಳಿಗೊಳಿಸಿದರು. ವೈದ್ಯರ ಕಾರ್ಯವೈಖರಿ ಹಾಗೂ ಘಟನಾವಳಿಯ ಪೂರ್ತಿ ವಿವರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗೆ ತಿಳಿಸಲಾಗುವುದು. ಮೃತನ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವ ಯತ್ನ ನಡೆಸಲಾಗುವುದು ಎಂದು ಪ್ರತಿಭಟನಾನಿರತರಿಗೆ ತಿಳಿಸಿದರು.