ಕರುಣಾನಿಧಿ ಆರೋಗ್ಯ ವಿಚಾರಿಸಲು ನಿವಾಸದತ್ತ ಗಣ್ಯರ ದೌಡು

ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ನೋಡಲು ಅಭಿಮಾನಿಗಳು ಹಾಗೂ ರಾಜಕೀಯ ವಲಯದ ಹಲವಾರು ಗಣ್ಯರು ಅವರ ಆರೋಗ್ಯ ವಿಚಾರಿಸಲು ಅವರ ನಿವಾಸದತ್ತ ದೌಡಾಯಿಸುತ್ತಿದ್ದಾರೆ.

ಕರುಣಾನಿಧಿ ಅವರ ಮಕ್ಕಳಾದ ಸ್ಟಾಲಿನ್​ ಮತ್ತು ಅಳಗಿರಿ ನಿನ್ನೆ ರಾತ್ರಿಯೇ ತಮಿಳುನಾಡಿನ ಗೋಪಾಲಪುರಂನಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದಾರೆ. ದೆಹಲಿಯಿಂದ ಈಗಾಗಲೇ ವಿಮಾನ ಹತ್ತಿರುವ ಪುತ್ರಿ ಕನಿಮೋಳಿ ಇಂದು ಮಧ್ಯಾಹ್ನದ ವೇಳೆಗೆ ಚೆನ್ನೈ ತಲುಪಲಿದ್ದಾರೆ ಎನ್ನಲಾಗಿದೆ.

ಮೂತ್ರನಾಳದ ಸೋಂಕು ಹಾಗೂ ಜ್ವರದಿಂದ ಬಳಲುತ್ತಿರುವ 94 ವರ್ಷದ ಕರುಣಾನಿಧಿ ಅವರಿಗೆ ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದೆ.

ಇನ್ನು ಕರುಣಾನಿಧಿಯವರ ಆರೋಗ್ಯ ವಿಚಾರಿಸಲು, ತಮಿಳುನಾಡಿನ ಮುಖ್ಯಮಂತ್ರಿ, ಪನ್ನೀರ್​ಸೆಲ್ವಂ, ನಟ ಹಾಗೂ ರಾಜಕಾರಣಿ ಕಮಲ್​ಹಾಸನ್​ ಅವರು ಭೇಟಿ ನೀಡಿದ್ದರು.

ಕಾವೇರಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದನ್​ ಸೆಲ್ವರಾಜ್​ ಹೇಳಿಕೆ ಬಿಡುಗಡೆ ಮಾಡಿದ್ದು, ಮೂತ್ರನಾಳದ ಸೋಂಕಿನಿಂದ ಅವರಿಗೆ ಜ್ವರ ಬಂದಿದೆ. ಹಾಗಾಗಿ ಆಸ್ಪತ್ರೆಯ ವೈದ್ಯರ ತಂಡ ಅವರ ಮನೆಯಲ್ಲಿಯೇ ಆಸ್ಪತ್ರೆ ಮಟ್ಟದ ಉತ್ತಮ ಚಿಕಿತ್ಸೆ ನೀಡುತ್ತಿದೆ. (ಏಜೆನ್ಸೀಸ್​)