ಉತ್ತಮ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

| ಡಾ ಬಿ. ಎಂ. ಹೆಗ್ಡೆ, ಖ್ಯಾತ ಹೃದ್ರೋಗ ತಜ್ಞರು

ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗುವುದಲ್ಲ, ನಿಮ್ಮ ಮನೆವೈದ್ಯರ (ಫ್ಯಾಮಿಲಿ ಡಾಕ್ಟರ್) ಬಳಿಗೆ ಹೋಗಬೇಕು. ಅದು ಬಹಳ ಮುಖ್ಯ. ಏನು ಕಾಯಿಲೆ ಎಂದು ಕಂಡುಕೊಂಡ ನಂತರ ಬೇಕಾದರೆ ಆಸ್ಪತ್ರೆಗೆ ಹೋಗಬಹುದು. ತೊಂದರೆಯಿಲ್ಲ. ಮುಂದೆ ಏನು ಮಾಡಬೇಕು ಎಂದು ಆಸ್ಪತ್ರೆಯಲ್ಲಿ ಹೇಳುತ್ತಾರೆ. ಏಕೆಂದರೆ ಎಷ್ಟೋ ಆಸ್ಪತ್ರೆಗಳಲ್ಲಿ ಏನು ಕಾಯಿಲೆ ಎಂದು ಕಂಡುಹಿಡಿಯುವುದಿಲ್ಲ. ಅವರು ನೇರವಾಗಿ ಟೆಸ್ಟ್ ಮಾಡುವುದಕ್ಕೇ ಪ್ರಾರಂಭಿಸಿಬಿಡುತ್ತಾರೆ.

ನನಗೆ ಈಗಲೂ ನೆನಪಿದೆ. ನಾವು ಚಿಕ್ಕವರಿದ್ದಾಗ ಈ ದೊಡ್ಡ ದೊಡ್ಡ ಆಸ್ಪತ್ರೆಗಳು, ಕಾರ್ಪೆರೇಟ್ ಆಸ್ಪತ್ರೆಗಳು ಇರಲಿಲ್ಲ. ಆದರೆ ಆರಂಭದಲ್ಲಿ ಒಬ್ಬ ಮದ್ರಾಸ್​ನಲ್ಲಿ ಒಂದು ದೊಡ್ಡ ಆಸ್ಪತ್ರೆಯನ್ನು ಪ್ರಾರಂಭಿಸಿದ. ಅವನು ಅಮೆರಿಕಕ್ಕೆ ಹೋಗಿಬಂದವನಾಗಿದ್ದ. ಅಮೆರಿಕದ ಮಾದರಿಯನ್ನೇ ಇಲ್ಲಿ ಅಳವಡಿಸಲು ಒಂದು ಆಸ್ಪತ್ರೆಯನ್ನು ಸ್ಥಾಪಿಸಿದ. ಒಂದು ದಿನ ಅವನು ನಮ್ಮ ಒಬ್ಬ ಪ್ರೊಫೆಸರರ ಬಳಿ ಬಂದು, ‘ನಾನು ಒಂದು ಆಸ್ಪತ್ರೆಯನ್ನು ಸ್ಥಾಪನೆ ಮಾಡಿದ್ದೇನೆ. ನಿಮ್ಮ ಪೇಷಂಟ್​ಗಳು ಯಾರಾದರೂ ಇದ್ದರೆ ಅಡ್ಮಿಟ್ ಮಾಡಿ’ ಎಂದ.

ಒಂದು ದಿನ ಅವರು ಪೇಷಂಟ್ ಒಬ್ಬರನ್ನು ಸೇರಿಸಿದರು. ಅವರು ಹೀಗೆ ಬರೆದಿದ್ದರು; ‘ಈ ಪೇಷಂಟನ್ನು ನಾನು ನೋಡಿದ್ದೇನೆ. ಇಂತಿಂಥ ಕಾಯಿಲೆ ಇದೆ. ಇಲ್ಲಿ ಸೂಚಿಸಿದ ಎರಡು ಟೆಸ್ಟ್​ಗಳನ್ನು ಮಾಡಿ’. ಹೀಗೆ ಬರೆದುಕೊಟ್ಟ ಅವರು ಮರುದಿನ ಪೇಷಂಟ್ ನೋಡಲು ಆಸ್ಪತ್ರೆಗೆ ಹೋದರು. ಅಲ್ಲಿ ಆ ರೋಗಿಗೆ ಹಲವಾರು ಟೆಸ್ಟ್​ಗಳನ್ನು ಮಾಡಿಸಿಬಿಟ್ಟಿದ್ದರು. ಅದಕ್ಕೆ ಅವರು ಆಸ್ಪತ್ರೆಯ ವ್ಯಕ್ತಿಯನ್ನು ಕರೆದು ಕೇಳಿದರು, ‘ಯಾರು ಇಷ್ಟೊಂದು ಟೆಸ್ಟ್​ಗಳನ್ನು ಮಾಡಲು ಹೇಳಿದ್ದು? ನಾನು ಹೇಳಿದ್ದು ಎರಡೇ ಟೆಸ್ಟ್ ಗಳನ್ನಲ್ಲವೆ?’ ಎಂದು. ಅದಕ್ಕೆ ಹೀಗೆ ಉತ್ತರ ಬಂತು, ‘ಅಲ್ಲ, ಅದು ನಮ್ಮ ಆಸ್ಪತ್ರೆಯ ಕ್ರಮ. ಇಲ್ಲಿ ಬಂದವರಿಗೆ ಎಲ್ಲ ಟೆಸ್ಟ್ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮ ಆಸ್ಪತ್ರೆ ಕೂಡ ನಡೆಯಬೇಕಲ್ಲವಾ?’ ಕೂಡಲೇ ಆ ಪೇಷಂಟನ್ನು ಡಿಸ್ಚಾರ್ಜ್ ಮಾಡಿಸಿದ ಅವರು ನಂತರ ಆ ಆಸ್ಪತ್ರೆಯ ಹತ್ತಿರವೂ ಹೋಗಲಿಲ್ಲ.

ಈ ಆಸ್ಪತ್ರೆಗಳ ಶಾಪ ಹೋಗಬೇಕಾದರೆ, ‘ನಾವು ಜನರಿಗೆ ಅನ್ಯಾಯ ಮಾಡಬಾರದು. ಆದಷ್ಟು ಸಮಾಧಾನ ಮಾಡಿ ಪೇಷಂಟ್​ಗೆ ಬೇಕಾಗಿದ್ದನ್ನೇ ಮಾಡಬೇಕು. ಅನವಶ್ಯಕವಾಗಿ ಬೇಡದ ಟೆಸ್ಟ್​ಗಳನ್ನು ಮಾಡಬಾರದು’ ಎಂಬುದು ಅವರಿಗೆ ಅರ್ಥವಾಗಬೇಕು. ಆದರೆ ಅಷ್ಟು ಬೇಗ ಅವರಿಗೆ ಗೊತ್ತಾಗುವುದಿಲ್ಲ. ಅದಕ್ಕೆ ಹಲವು ಕಾಲ ಬೇಕು.

ಈಗ ಏನಾಗಿದೆ ಅಂದರೆ, ನಾನು ಆಸ್ಪತ್ರೆ ಸ್ಥಾಪಿಸಿದ್ದೇನೆ. ನನಗೆ ಲಾಭ ಬೇಕು ಎಂಬ ಮನೋಭಾವವೇ ಮೊದಲು ಬರುತ್ತದೆ. ಲಾಭ ಬೇಕಾದರೆ ಅನ್ಯಾಯ ಮಾಡಬೇಕು. ನಮ್ಮ ಆಸ್ಪತ್ರೆಗಳಲ್ಲಿ ಕಾಯಿಲೆಯವನಿಂದ ಲಾಭ ಮಾಡಿಕೊಳ್ಳಬೇಕಾದರೆ – ಅವನಿಗೆ ಅತಿಯಾದ ಚಿಕಿತ್ಸೆಗಳನ್ನು ಮಾಡಬೇಕು. ಇಲ್ಲದಿದ್ದರೆ ಸಾಧ್ಯವಾಗುವುದಿಲ್ಲ. ಇದಕ್ಕೊಂದು ಉದಾಹರಣೆ ಹೇಳುತ್ತೇನೆ.

ಈಗ ಗರ್ಭಿಣಿಯರಾದ ಎಲ್ಲರೂ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ಆರಂಭದಲ್ಲೇ ಏನು ಮಾಡುತ್ತಾರೆ? ಎಷ್ಟು ಸಿಗಬಹುದೆಂದು ಯೋಚಿಸುತ್ತಾರೆ. ಸಹಜ ಹೆರಿಗೆಯಾದರೆ ಹತ್ತು ಸಾವಿರ ರೂ. ಸಿಗಬಹುದು. ಅದನ್ನೇ ಸಿಸೇರಿಯನ್ ಮಾಡಿದರೆ ಒಂದು ಲಕ್ಷ ರೂ. ಆಗಬಹುದು. ಹೀಗಾಗಿ ಪರೀಕ್ಷೆ ಮಾಡಿ, ‘ಸಹಜ ಹೆರಿಗೆ ಆಗುವುದು ಕಷ್ಟ. ಸಿಸೇರಿಯನ್ನೇ ಮಾಡೋಣ’ ಎಂಬ ಐಡಿಯಾ ಕೊಡುತ್ತಾರೆ. ಹಾಗಾಗಿ ಸಿಸೇರಿಯನ್ ವಿಭಾಗದ ರೇಟ್ ಹೆಚ್ಚುತ್ತ ಹೋಗುತ್ತದೆ. ಹಾಗೆಯೇ ನೀವು ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋದರೆ ಡಾಕ್ಟರ್ ಹೇಳುತ್ತಾರೆ, ‘ಇದು ಅಪೆಂಡಿಕ್ಸ್ ಇರಬಹುದು, ನೋಡೋಣ’ ಎಂದು. ನಂತರ ಆಪರೇಷನ್ ಮಾಡುತ್ತಾರೆ. ಆಗ ಸಹಜವಾಗಿ ಆಸ್ಪತ್ರೆಯ ಬಿಲ್ ಮೇಲಕ್ಕೆ ಏರುತ್ತದೆ. ಆದರೆ ಅಲ್ಲಿ ಅಪೆಂಡಿಕ್ಸ್ ನಾರ್ಮಲ್ ಕೂಡ ಇರಬಹುದು. ಅದನ್ನು ನಂತರವೂ ಹೇಳುವುದಿಲ್ಲ. ಸುಮ್ಮನೆ ಆಪರೇಷನ್ ಮಾಡುತ್ತಾರೆ. ಅಪೆಂಡಿಕ್ಸ್ ಇಲ್ಲ, ಆಪರೇಷನ್ನೂ ಆಯ್ತು. ಎಲ್ಲವೂ ಅನವಶ್ಯಕ. ಹಾಗಾಗಿ ಜಾಗ್ರತೆಯಿಂದಿರಿ. ನೀವು ಜಾಗ್ರತೆಯಿಂದಿಲ್ಲದಿದ್ದರೆ ಲೋಕ ನಿಮ್ಮನ್ನು ಬೇಕಾದ ಹಾಗೆ ಬಳಸಿಕೊಳ್ಳುತ್ತದೆ. ಹಾಗಾಗಿ ನಾವೆಲ್ಲ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು.