ನಾವೂ ವೋಟ್ ಹಾಕ್ತೀವಿ.. ನೀವು?

ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಚುನಾವಣೆ ಬಿಸಿ ಜೋರಾಗಿಯೇ ಇತ್ತು. ಗೆಲ್ಲುವ ವಿಶ್ವಾಸದೊಂದಿಗೆ ಎಲ್ಲ ಅಭ್ಯರ್ಥಿಗಳು ಕಣದಲ್ಲಿ ಸೆಣಸುತ್ತಿದ್ದಾರೆ. ಆದರೆ, ಜಾಣ ಮತದಾರನ ಒಲವು ಯಾರ ಮೇಲಿದೆ ಎಂಬುದು ಮೇ 15ರಂದು ತಿಳಿಯಲಿದೆ. ಅದಕ್ಕೂ ಮೊದಲು ಇಂದು (ಮೇ 12) ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತ ಹಾಕುವುದು ನಮ್ಮೆಲ್ಲರ ಜವಾಬ್ದಾರಿ. ಈ ಕರ್ತವ್ಯ ಎಲ್ಲರೂ ನಿರ್ವಹಿಸಬೇಕು. ಅಂತೆಯೇ ಸ್ಯಾಂಡಲ್​ವುಡ್​ನ ಸೆಲೆಬ್ರಿಟಿಗಳು ಮತದಾನದ ಬಗ್ಗೆ ನಮಸ್ತೆ ಬೆಂಗಳೂರು ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಪ್ಪದೆ ವೋಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಮತ ಮಾರಿಕೊಳ್ಳುವುದು ದೇಶದ್ರೋಹ!

ಮತದಾನ ಮಾಡಲು ತುಂಬ ದಿನಗಳಿಂದ ಕಾದಿದ್ದೆ. ಕೊನೆಗೂ ಆ ಸಮಯ ಇದೀಗ ಬಂದಿದೆ. ನನಗೆ ಗುರುತಿನ ಚೀಟಿ ಸಿಕ್ಕಾಗ ಚುನಾವಣೆ ಇರಲಿಲ್ಲ. ಆದರೆ ಈಗ ಹಾಗಾಗಿಲ್ಲ. ಮೊದಲ ಬಾರಿಗೆ ಮತ ಹಾಕಿ ಕೈಗೆ ಶಾಯಿ ಹಾಕಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಆಗಿರುವುದರಿಂದ ನಮ್ಮನ್ನಾಳುವವರನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಅದು ಮತದಾನದಿಂದ ಮಾತ್ರ ಸಾಧ್ಯ. ಭಾರತೀಯ ಪ್ರಜೆಯಾಗಿ ಅದು ನನ್ನ ಹಕ್ಕು ಮತ್ತು ಜವಾಬ್ದಾರಿಯೂ ಹೌದು. ವೋಟ್ ಹಾಕುವ ಮೂಲಕ ಸೂಕ್ತ ವ್ಯಕ್ತಿಯನ್ನು ಆರಿಸಿ ತರಬೇಕು. ನಿಷ್ಠ ಮತ್ತು ತಿಳಿವಳಿಕೆಯುಳ್ಳ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಣ-ಹೆಂಡಕ್ಕೆ ಮತವನ್ನು ಮಾರಿಕೊಳ್ಳುವುದು ದೇಶಕ್ಕೆ ಮಾಡುವ ದ್ರೋಹ. ಅದೇ ರೀತಿ ಮತದಾನಕ್ಕೆ ಗೈರು ಆಗುವುದು ಅದಕ್ಕಿಂತ ದೊಡ್ಡ ತಪು್ಪ. ಹೀಗಾಗಿ ನಾವು ಬದುಕಿದ್ದೇವೆ ಎಂಬುದನ್ನು ತೋರಿಸುವುದಕ್ಕಾದರೂ ಎಲ್ಲರೂ ತಪ್ಪದೆ ಮತದಾನ ಮಾಡೋಣ.

| ನಿಶ್ವಿಕಾ ನಾಯ್ಡು ನಟಿ


ಅವಕಾಶ ಮಿಸ್ ಮಾಡಿಕೊಳ್ಳುವುದಿಲ್ಲ..

ರಾಜಕೀಯದಲ್ಲಿ ಯುವಜನತೆಯ ಪಾತ್ರ ತುಂಬ ಮಹತ್ವದ್ದು. ಹಾಗಾಗಿ ವೋಟ್ ಮಾಡುವ ಅವಕಾಶವನ್ನು ಯಾರೂ ಮಿಸ್ ಮಾಡಿಕೊಳ್ಳಬಾರದು. ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ನೀಡುವುದರಿಂದ ಉತ್ತಮ ಸಮಾಜವನ್ನು ನಿರ್ವಿುಸಬಹುದು. ನಾನು ಮೊದಲ ಸಲ ಮತದಾನ ಮಾಡಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ. ಅವಾಗಂತೂ ಸಖತ್ ಎಗ್ಸೆ ೖಟ್​ವೆುಂಟ್ ಇತ್ತು. ಈ ಬಾರಿ ಕೂಡ ತಪ್ಪದೆ ವೋಟ್ ಮಾಡುತ್ತೇನೆ. ಶೂಟಿಂಗ್ ವೇಳೆ ಸ್ವಲ್ಪ ಪೆಟ್ಟಾಗಿದ್ದರಿಂದ ಸದ್ಯಕ್ಕೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಹಾಗಂತ ಮತ ಚಲಾಯಿಸುವುದನ್ನು ಖಂಡಿತ ತಪ್ಪಿಸಿಕೊಳ್ಳುವುದಿಲ್ಲ. ನಮಗಿಂತ ಕಷ್ಟದ ಪರಿಸ್ಥಿತಿಯಲ್ಲಿ ಇರುವವರು ವೋಟ್ ಮಾಡುತ್ತಾರೆ. ಮತದಾನ ಮಾಡುವ ಮೂಲಕ ನಾವೆಲ್ಲರೂ ನಮ್ಮ ಹಕ್ಕು ಮತ್ತು ಕರ್ತವ್ಯ ನಿಭಾಯಿಸಬೇಕು.

| ಆರೋಹಿ ನಾರಾಯಣ್ ನಟಿ


ನಮ್ಮ ಹಕ್ಕನ್ನು ಚಲಾಯಿಸೋಣ

ಇಷ್ಟು ವರ್ಷ ಮತದಾನದ ಬಗ್ಗೆ ಕೇಳಿದ್ದೆ. ಅಪ್ಪ-ಅಮ್ಮ ಮತದಾನ ಮಾಡುವುದನ್ನು ನೋಡಿದ್ದೆ. ಆದರೆ ಇದೇ ಮೊದಲ ಬಾರಿಗೆ ನಾನು ವೋಟ್ ಮಾಡುತ್ತಿದ್ದು, ಪಾಲಕರ ಸಲಹೆ ಪಡೆದುಕೊಳ್ಳುತ್ತಿದ್ದೇನೆ. ನಮ್ಮ ಊರು ಹಾಸನ. ನಾನು ಇಲ್ಲಿಯೇ ಮತದಾನ ಮಾಡುತ್ತಿದ್ದೇನೆ. ಹಾಗಾಗಿ ಊರಿಗೆ ಬಂದಿದ್ದೇನೆ. ಒಳ್ಳೆಯ ಶಾಸಕರೊಬ್ಬರಿಂದ ಕ್ಷೇತ್ರದ ಸ್ಥಿತಿಯೇ ಬದಲಾಗಬಹುದು. ಅಂಥವರನ್ನು ಚುನಾಯಿಸುವ ಪ್ರಕ್ರಿಯೆಯಲ್ಲಿ ನಾನೂ ಒಬ್ಬಳಾಗುತ್ತಿದ್ದೇನೆ ಎಂಬ ಖುಷಿ ಇದೆ. ಪ್ರತಿಯೊಬ್ಬ ಪ್ರಜೆಯೂ ತಪ್ಪದೆ ಮತದಾನ ಮಾಡಬೇಕು.

| ಲೇಖಾ ಚಂದ್ರ, ನಟಿ


ಪ್ರಜಾಪ್ರಭುತ್ವಕ್ಕೆ ಮೋಸ ಮಾಡಬೇಡಿ

ಎರಡನೇ ಬಾರಿಗೆ ಮತದಾನ ಮಾಡುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಈ ಹಿಂದೆ 2013ರ ವಿಧಾನಸಭಾ ಚುನಾವಣೆಯಲ್ಲಿ ಕುತೂಹಲದಿಂದಲೇ ಮೊದಲ ವೋಟ್ ಹಾಕಿದ್ದೆ. ಇದೀಗ ಮತ್ತೆ ನಮಗೆ ಬೇಕಾದ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಕಾಲ ಬಂದಿದೆ. ಯಾವ ವ್ಯಕ್ತಿ ಸರಿ ಅಂತ ನಿಮಗನಿಸುತ್ತದೆಯೋ ಅಂಥವರಿಗೆ ಮತಹಾಕಿ. ಯಾರೂ ಸರಿಯಾಗೇ ಇಲ್ಲ ಅಂತ ಅನಿಸಿದಲ್ಲಿ ನೋಟಾ (ಮೇಲಿನ ಯಾವುದೂ ಅಲ್ಲ) ಬಟನ್ ಇದ್ದೇ ಇದೆ. ಆದರೆ ಮತ ಚಲಾಯಿಸದೆ, ಗೈರಾದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಮೋಸ. ಅದೇ ರೀತಿ ರಾಜಕೀಯದಲ್ಲಿ ಜಾತಿ, ಧರ್ಮ ಸೇರಿಸದೆ, ಯಾವ ಅಭ್ಯರ್ಥಿ ಏನು ಕೆಲಸ ಮಾಡಿದ್ದಾರೆ, ಮುಂದೆಯೂ ಮಾಡಬಹುದಾ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕೋಣ. ಈ ಮೊದಲು ನಮ್ಮ ಮನೆಯಲ್ಲಿ ಯಾರಿಗೆ ಬೆಂಬಲ ಸೂಚಿಸುತ್ತಿದ್ದರೋ ಅವರಿಗೆ ಮತ ಹಾಕಿದ್ದೆ. ಇದೀಗ ನಾನೇ ಅಭ್ಯರ್ಥಿಗಳ ಬಗ್ಗೆ ತಿಳಿದುಕೊಂಡು, ಅವರ ಪೂರ್ವಾಪರ ಅರಿತು ಮತ ಹಾಕುತ್ತಿದ್ದೇನೆ. ಈ ಮೂಲಕ ಭವಿಷ್ಯವನ್ನು ಭದ್ರವಾಗಿಸೋಣ.

| ಸಂಜನಾ ಪ್ರಕಾಶ್ ನಟಿ

Leave a Reply

Your email address will not be published. Required fields are marked *