ವಿಶ್ವದ ಬಲಿಷ್ಠ ಪಾಸ್​​​ಪೋರ್ಟ್​ಗಳು ಯಾವುವು ಗೊತ್ತೇ? ಇಲ್ಲಿದೆ ಪಟ್ಟಿ

ನವದೆಹಲಿ: ವಿಶ್ವದ ಅತ್ಯಂತ ಬಲಿಷ್ಠ ಹಾಗೂ ಅತ್ಯಂತ ಕೆಟ್ಟ ಪಾರ್ಸ್​ಪೋರ್ಟ್​ಗಳ ಪಟ್ಟಿಯನ್ನು ಹ್ಯಾನ್ಲೆ ಆ್ಯಂಡ್ ಪಾರ್ಟ್ನರ್ ಬಿಡುಗಡೆಗೊಳಿಸಿದೆ. ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳಾದ ಜಪಾನ್ ಹಾಗೂ ಸಿಂಗಾಪುರ 190 ಅಂಕ ಗಳಿಸುವ ಮೂಲಕ ಬಲಿಷ್ಠ ಪಾಸ್​​​ಪೋರ್ಟ್​ಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿವೆ.

ಫಿನ್ಲೆಂಡ್​​ , ಜರ್ಮನಿ, ದಕ್ಷಿಣ ಕೊರಿಯಾ 188 ಅಂಕಗಳ ಮೂಲಕ ಎರಡನೇ ಸ್ಥಾನ ಹಂಚಿಕೊಂಡಿವೆ. ಡೆನ್ಮಾರ್ಕ್​, ಇಟಲಿ, ಲಕ್ಸೆಂಬರ್ಗ್​ 187 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿವೆ. ಫ್ರಾನ್ಸ್​​, ಸ್ಪೇನ್, ಸ್ವೀಡನ್ 186 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿವೆ. ಆಸ್ಟ್ರಿಯಾ, ನೆದರ್ಲೆಂಡ್, ಪೋರ್ಚುಗಲ್ 185 ಅಂಕ ಪಡೆದಿದ್ದು, ಐದನೇ ಸ್ಥಾನದಲ್ಲಿವೆ. ಬೆಲ್ಜಿಯಂ, ಕೆನಡಾ, ಗ್ರೀಸ್, ಐರ್ಲೆಂಡ್, ನಾರ್ವೆ, ಬ್ರಿಟನ್, ಅಮೆರಿಕ ಹಾಗೂ 184 ಅಂಕ ಪಡೆದು ಆರನೇ ಸ್ಥಾನ ಗಳಿಸಿವೆ. ಮಾಲ್ಟಾ ಹಾಗೂ ಜೆಕ್ ರಿಪಬ್ಲಿಕ್ 183 ಅಂಕಗಳೊಂದಿಗೆ ಏಳನೇ ಸ್ಥಾನ ಕಾಯ್ದುಕೊಂಡಿವೆ. ನ್ಯೂಜಿಲೆಂಡ್ 182 ಅಂಕ ಗಳಿಸಿದ್ದು, ಪಟ್ಟಿಯಲ್ಲಿ 8 ನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ, ಲಿಥುವೇನಿಯಾ, ಸ್ಲೊವಾಕಿಯಾ 181 ಅಂಕಗಳಿಸಿದ್ದು 9 ನೇ ಸ್ಥಾನ ಪಡೆದಿದೆ. ಹಂಗರಿ ಐಸ್​ಲೆಂಡ್, ಲಾಟ್ವಿಯಾ, ಸ್ಲೊವೇನಿಯಾ 180 ಅಂಕ ಗಳಿಸಿದ್ದು 10 ನೇ ಸ್ಥಾನ ಪಡೆದಿದೆ.

ಕೆಟ್ಟ ಪಾಸ್​​ಫೊರ್ಟ್​ಗಳ ಪಟ್ಟಿ: ಅತ್ಯಂತ ಕೆಟ್ಟ ಪಾಸ್​ಪೋರ್ಟ್​ಗಳ ಪಟ್ಟಿ ಬಿಡುಗಡೆಯಾಗಿದ್ದೆದು, ಯುದ್ಧಪೀಡಿತ ಅಫ್ಘನಿಸ್ತಾನದ್ದು ನಂಬರ್ 1 ಸ್ಥಾನ. ಎರಡನೇ ಸ್ಥಾನವನ್ನು ಇರಾಕ್ ಅಲಂಕರಿಸಿದೆ. ಭಾರತದ ಮೇಲೆ ಸದಾ ವಿಷ ಉಗುಳುವ ಪಾಕಿಸ್ತಾನದ್ದು ನಾಲ್ಕನೇ ಅತ್ಯಂತ ಕೆಟ್ಟ ಪಾಸ್​​ಪೋರ್ಟ್. 


ಪಟ್ಟಿಯಲ್ಲಿ ಕುಸಿದ ಭಾರತ: ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 82 ನೇ ಸ್ಥಾನ ಪಡೆದಿದೆ. ವರ್ಷದಿಂದ ವರ್ಷಕ್ಕೆ ಭಾರತದ ಸ್ಥಾನ ಕುಸಿಯುತ್ತಾ ಸಾಗುತ್ತಿದೆ. 2014 ರ ಪಟ್ಟಿಯಲ್ಲಿ ಭಾರತ 76ನೇ ಸ್ಥಾನದಲ್ಲಿತ್ತು. 2015 ರಲ್ಲಿ 88 ನೇ ಜಾರಿತ್ತು. 2018 ರಲ್ಲಿ 81 ನೇ ಸ್ಥಾನಕ್ಕೇರಿತ್ತು. 2019ರ ಪಟ್ಟಿಯಲ್ಲಿ ಮತ್ತೊಮ್ಮೆ ಕುಸಿತ ಕಂಡಿದ್ದು, 82ನೇ ಸ್ಥಾನಕ್ಕೆ ಜಾರಿದೆ.

ಪಾಸ್​​ಪೋರ್ಟ್​ ಬಲಿಷ್ಠತೆ ನಿರ್ಣಯಿಸುವುದು ಹೇಗೆ?
ವೀಸಾ ಆನ್​ ಅರೈವಲ್​ ಅಂದರೆ ಪ್ರಯಾಣಿಸಬೇಕಾದ ರಾಷ್ಟ್ರಕ್ಕೆ ತೆರಳಿ ಅಲ್ಲಿನ ಏರ್​​ಪೋರ್ಟ್​ನಲ್ಲೇ ವೀಸಾ ಪಡೆಯುವುದು. ಈ ವ್ಯವಸ್ಥೆಯ ಆಧಾರದಲ್ಲಿ ಪಾಸ್​​ಪೋರ್ಟ್​ನ ಬಲಿಷ್ಠತೆ ನಿರ್ಣಯಿಸಲಾಗುತ್ತದೆ. ಜಪಾನ್ ಹಾಗೂ ಸಿಂಗಾಪುರ ದೇಶಗಳ ಪ್ರಜೆಗಳಿಗೆ 190 ರಾಷ್ಟ್ರಗಳು ವೀಸಾ ಆನ್ ಅರೈವಲ್ ಸೌಲಭ್ಯ ಕಲ್ಪಿಸಿವೆ. ಈ ರಾಷ್ಟ್ರಗಳ ಪ್ರಜೆಗಳು 190 ರಾಷ್ಟ್ರಗಳಿಗೆ ತೆರಳಲು ಮೊದಲೇ ವೀಸಾ ಪಡೆಯುವ ಅಗತ್ಯವಿಲ್ಲ. ಅಲ್ಲಿನ ಏರ್​​ಪೋರ್ಟ್​ನಲ್ಲೇ ಕ್ಷಣಮಾತ್ರದಲ್ಲಿ ವಿಸಾ ಪಡೆಯಬಹುದು.

Leave a Reply

Your email address will not be published. Required fields are marked *