ಕಂಡಿದ್ದೆಲ್ಲ ಯಾಕೆ ಬೇಕು?

|ತ್ರಿವೇಣಿ ಶ್ರೀನಿವಾಸರಾವ್ ಷಿಕಾಗೊ, ಅಮೆರಿಕ

ಅಗತ್ಯವಿದ್ದ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುವ ಕಾಲ ಇದಲ್ಲ. ಯಾವಾಗಲಾದರೂ, ಏತಕ್ಕಾದರೂ ಬೇಕಾದೀತು ಎಂದೋ, ನೆಂಟರಿಷ್ಟರ ಮನೆಗಳಲ್ಲಿದೆ ಎಂದೋ ಬೇಕೋ ಬೇಡವೋ ಹಲವಾರು ವಸ್ತುಗಳಿಂದ ಮನೆ ತುಂಬಿಸಿಕೊಳ್ಳುವ ಹಪಾಹಪಿ ಹೆಚ್ಚಾಗಿರುವ ದಿನಗಳಿವು. ಮಹಿಳೆಯರಿಗೆ ಈ ಹುಚ್ಚು ಸ್ವಲ್ಪ ಹೆಚ್ಚೇ.

ಮಿತವ್ಯಯವನ್ನು ರಕ್ತಗತವಾಗಿಸಿಕೊಂಡಿರುವ, ಮಧ್ಯಮ ವರ್ಗದಿಂದ ಬಂದ ತಲೆಮಾರಿನವರನ್ನು ಬಹಳವಾಗಿ ಬಾಧಿಸುವ ವಿಷಯವೆಂದರೆ, ಮಿತಿಮೀರಿರುವ ಕೊಳ್ಳುಬಾಕತನ. ತೀರಾ ಅನಿವಾರ್ಯವಾದಾಗ ಮಾತ್ರ ವಸ್ತುಗಳನ್ನು ತಂದು ಬಳಸುತ್ತಿದ್ದವರಿಗೆ ಈಗ ತುಂಬಿತುಳುಕುತ್ತಿರುವ ಸಮೃದ್ಧಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎನ್ನಬಹುದು. ನೋಟ್ ಬುಕ್ಕಿನ ಕೊನೇ ಹಾಳೆಯ, ಕೊನೆಯ ಸಾಲಿನಲ್ಲೂ ಬರೆದು ಮುಗಿಸುತ್ತಿದ್ದ ಆ ದಿನಗಳ ನೆನಪು ಹಸಿರಾಗಿರುವ ನಮ್ಮಂಥವರಿಗೆ ಉಪಯೋಗಿಸದೆ ಬಿಸುಟ ಖಾಲಿ ಪುಟಗಳ ನೋಟ್ ಪುಸ್ತಕಗಳು ವಿಚಿತ್ರ ಕಸಿವಿಸಿಯುಂಟು ಮಾಡುವುದು ಸುಳ್ಳಲ್ಲ.

ಕೊಳ್ಳುಬಾಕತನ ಸಾರ್ವತ್ರಿಕವಾಗಿರುವ ಪಿಡುಗು. ಕಂಡಿದ್ದನ್ನೆಲ್ಲ ಕೊಳ್ಳಬೇಕೆಂಬ ದಾಹ. ಬೇಕೋ ಬೇಡವೋ ಒಟ್ಟಿನಲ್ಲಿ ಕೊಳ್ಳುತ್ತಿರಬೇಕು. ಅಗತ್ಯವಿದೆಯೋ ಇಲ್ಲವೋ ಎಂಬುದನ್ನು ಯೋಚಿಸುವ ವ್ಯವಧಾನವೂ ಕಡಿಮೆಯಾಗಿದೆ. ಗುಂಪಾಗಿ ಶಾಪಿಂಗ್ ಹೊರಟಾಗಂತೂ ಈ ಚಟವನ್ನು ನಿಯಂತ್ರಿಸಿಕೊಳ್ಳುವುದು ಸಾಹಸವೇ! ಕೆಲವು ಬಾರಿ ಇಷ್ಟವಿಲ್ಲದಿದ್ದರೂ ಜತೆಗಿರುವವರು ಕೊಂಡಾಗ ಮನಸ್ಸು ಚಂಚಲಗೊಳ್ಳುವುದು ಒಂದಾದರೆ, ಏನೂ ಕೊಳ್ಳದಿದ್ದರೆ ಇತರರು ನಮ್ಮನ್ನು ಎಲ್ಲಿ ಜಿಪುಣರೆಂದು ಭಾವಿಸುವರೋ ಎಂಬ ಅಳುಕು ಇನ್ನೊಂದೆಡೆ. ಒಟ್ಟಿನಲ್ಲಿ ಬೇಡದ ಮತ್ತಷ್ಟು ವಸ್ತುಗಳನ್ನು ಮನೆತುಂಬಿಸಿಕೊಳ್ಳುವುದು ತಪ್ಪದು.

ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರ ತಾಯಿ ನಿಧನರಾದರು. ಸಾಂತ್ವನ ಹೇಳಲು ಅವರ ಮನೆಗೆ ಹೋಗಿದ್ದೆ. ಅವರ ತಾಯಿಯವರು ಕೊನೆಯ ದಿನಗಳನ್ನು ಕಳೆದಿದ್ದ ಕೊಠಡಿಯನ್ನೊಮ್ಮೆ ನೋಡಬೇಕೆಂದು ಬಯಸಿದೆ. ಅಲ್ಲಿಗೆ ಕರೆದೊಯ್ದರು. ಗೋಡೆಯ ಬದಿಗೆ ಚಿಕ್ಕದೊಂದು ಮೇಜಿನ ಮೇಲೆ ಅವರ ತಾಯಿಯ ಭಾವಚಿತ್ರವನ್ನಿರಿಸಿ ಅದರ ಎದುರು ದೀಪವಿಟ್ಟಿದ್ದರು. ಅವರು ಬಳಸುತ್ತಿದ್ದ ಪುಸ್ತಕ, ಕನ್ನಡಕ, ಪೆನ್ನು ಇತ್ಯಾದಿ ಸಣ್ಣಪುಟ್ಟ ವಸ್ತುಗಳನ್ನು ಅದರ ಮುಂದಿರಿಸಿದ್ದರು. ಮಾತಿನ ನಡುವೆ, ‘ಅವರಿಗೆ ಸೇರಿದ ಬಟ್ಟೆಬರೆಗಳು, ಸೀರೆಗಳನ್ನೆಲ್ಲ ಏನು ಮಾಡಿದಿರಿ?’ ಎಂದು ಪ್ರಾಸಂಗಿಕವಾಗಿ ಕೇಳಿದೆ. ಅಲ್ಲೇ ಇದ್ದ ಕಪಾಟನ್ನು ತೆರೆದು ತೋರಿಸಿದರು. ನೀಟಾಗಿ ಮಡಿಸಿ ಇರಿಸಿದ್ದ ಕೆಲವೇ ಸೀರೆ-ರವಿಕೆಗಳು, ಟವಲ್, ಕರವಸ್ತ್ರಗಳು ಮತ್ತು ಇನ್ನಿತರ ಅಗತ್ಯ ವಸ್ತುಗಳಷ್ಟೇ ಅಲ್ಲಿದ್ದವು.

ದೊಡ್ಡದೊಂದು ಸೀರೆಯ ಮಳಿಗೆಯೇ ಇರಬಹುದೆಂದು ನಿರೀಕ್ಷಿಸಿದ್ದ ಅಚ್ಚರಿಗೆ ಉತ್ತರವಾಗಿ, ಅವರ ತಾಯಿ ಎಂದೂ ಹೆಚ್ಚಿನ ಸೀರೆಗಳನ್ನು ಹೊಂದಿರಲೇ ಇಲ್ಲವೆಂದೂ, ಅವರಾಗಿಯೇ ಸೀರೆಗಳನ್ನು ಕೊಳ್ಳುವ ಅಭ್ಯಾಸವೇ ಇರಲಿಲ್ಲವೆಂದೂ ತಿಳಿಸಿದರು. ಬಂಧು-ಮಿತ್ರರು ಪ್ರೀತಿಪೂರ್ವಕವಾಗಿ ಕೊಡುವ ಸೀರೆಗಳು ತಮ್ಮ ಸಂಗ್ರಹದಲ್ಲಿ ಹೆಚ್ಚಾಗಿ ಸೇರಿದರೆ, ಅದನ್ನು ಕೂಡಲೇ ಅಗತ್ಯವಿದ್ದ ಇನ್ನಾರಿಗೋ ಕೊಟ್ಟುಬಿಡುತ್ತಿದ್ದರಂತೆ. ಈ ಕೆಲವೇ ಸೀರೆಗಳನ್ನು ಗತಿಸಿದ ಹಿರಿಯ ಜೀವದ ನೆನಪಿಗಾಗಿ, ಅತ್ತಿಗೆ, ನಾದಿನಿಯರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದರು. ತಾಯಿಯವರು ಬರೀ ಬಟ್ಟೆಬರೆಗಳಲ್ಲಿ ಮಾತ್ರವಲ್ಲ, ಹಣಕಾಸಿನ ದೊಡ್ಡ ಭಾಗವನ್ನು ತಮ್ಮ ಹಳ್ಳಿಯ ಶಾಲೆಗೂ, ಉಳಿದ ಭಾಗವನ್ನು ಕುಟುಂಬದ ಎಲ್ಲ ಸದಸ್ಯರಿಗೂ ವಿತರಿಸಿ, ತಮ್ಮ ಅಂತಿಮಯಾತ್ರೆಯ ಖರ್ಚಿಗೂ ಹಣ ತೆಗೆದಿಟ್ಟಿದ್ದರೆಂದು ತಿಳಿಸಿದರು. ಎಂಬತ್ತು ವರುಷಕ್ಕೂ ಮೀರಿದ ತುಂಬುಜೀವಿತವನ್ನು ಸರಳ, ಸುಂದರವಾಗಿ ಬಾಳಿದ ಹಿರಿಯರು ಅವರು. ತಮ್ಮ ಮಧುರ ನೆನಪಿನ ಹೊರತಾಗಿ, ಮನೆಮಂದಿಗೆ ಹೊರೆಯಾಗಿ, ಕಿರಿಕಿರಿಯಾಗುವಂಥದ್ದೇನೂ ಅವರು ಅಲ್ಲಿ ಉಳಿಸಿರಲೇ ಇಲ್ಲ!

ಎಷ್ಟು ಬಟ್ಟೆಗಳಿದ್ದರೂ ಹೊರಗೆ ಹೊರಟಾಗ ತೊಡಲು ತಕ್ಕ ಉಡುಗೆಯಿಲ್ಲ ಎಂದು ಕೊರಗುವುದು, ತಂದ ವಸ್ತು ಹಳತಾಗುವ ಮುನ್ನವೇ ಮತ್ತೊಂದು ಹೊಸತನ್ನು ಅದರ ಜಾಗದಲ್ಲಿ ತಂದಿಡುವುದು, ಅಂಗಡಿಯ ಶೆಲ್ಪುಗಳಲ್ಲಿ ಕಂಡಿದ್ದನ್ನೆಲ್ಲ ಬಾಚಿ ತಂದು ಮನೆಯನ್ನೇ ಉಗ್ರಾಣವಾಗಿಸಿಕೊಳ್ಳುವುದು…ಈ ಪ್ರವೃತ್ತಿಯನ್ನು ಸುತ್ತಲಿನ ಸಮಾಜದಲ್ಲಿ ಕಾಣುತ್ತಲೇ ಇರುತ್ತೇವೆ. ಕೊಳ್ಳುವ ಮೊದಲು ನಿಜವಾಗಲೂ ಈ ವಸ್ತು ನಮಗೆ ಈಗ ಅಗತ್ಯವೇ? ಎಂದು ಒಮ್ಮೆ ಪ್ರಶ್ನಿಸಿಕೊಂಡು, ಕೊಳ್ಳುವ ಅಭ್ಯಾಸ ಒಳ್ಳೆಯದು. ಅವಶ್ಯಕತೆ ಇಲ್ಲದಿದ್ದರೂ ಖರೀದಿಸುವುದು, ಕೊಂಡು ತಂದಿದ್ದನ್ನು ಇರಿಸಲು ಜಾಗವಿಲ್ಲದೆ ಪರದಾಡುವುದು ಬೇಕೇ? ಮನೆಯನ್ನು, ವಸ್ತುಗಳನ್ನು ಪ್ರದರ್ಶಕ್ಕಿಟ್ಟಂತಹ ‘ಮ್ಯೂಸಿಯಂ’ಗಳಾಗಿಸುವುದೇಕೆ? ನಮ್ಮ ಕೊಳ್ಳುಬಾಕತನಕ್ಕೆ ಸ್ವಯಂ ನಿಯಂತ್ರಣ ವಿಧಿಸಿಕೊಂಡರೆ ಹಣ ಉಳಿತಾಯವಾಗುವುದಲ್ಲದೆ, ಮನೆ ಚೊಕ್ಕಟವಾಗಿರುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ.