ಬೀರೂರು: ಡಿಜೆ, ಪಟಾಕಿಗೆ ದುಂದು ವೆಚ್ಚ ಮಾಡದೆ ಸಮಾಜಮುಖಿ ಕೆಲಸಗಳೊಂದಿಗೆ ಗಣೇಶೋತ್ಸವ ಆಚರಿಸುತ್ತಿರುವುದು ಮಾದರಿ ಎಂದು ಬೀರೂರು ಪಿಎಸ್‌ಐ ಸಜಿತ್‌ಕುಮಾರ್ ಹೇಳಿದರು.
ಹುಲ್ಲುಬೆಂಕಿ ಬೀರಲಿಂಗೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ಓಂ ಯುವ ಸೇನೆ ಗಣೇಶ ಸಮಿತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಗಣೇಶ ಹಬ್ಬಗಳಲ್ಲಿ ಯುವಕರು ವಿವಿಧ ರೀತಿಯಲ್ಲಿ ಹಣ ವ್ಯಯಿಸುತ್ತಾರೆ. ಅದಕ್ಕಿಂತ ರಕ್ತದಾನ, ನೇತ್ರದಾನ, ಕ್ರೀಡಾಕೂಟಗಳು ಹಾಗೂ ಬಡ ಮಕ್ಕಳ ಶಿಕ್ಷಣಕ್ಕೆ ಸಹಕಾರದಂಥ ಸಾಮಾಜಿಕ ಕಾರ್ಯಗಳ ಮೂಲಕ ಹಬ್ಬ ಆಚರಿಸುತ್ತಿರುವುದು ಎಲ್ಲರಿಗೂ ಮಾದರಿ ಎಂದರು.
ಸಾರ್ವಜನಿಕ ಆಸ್ಪತ್ರೆ ಡಾ. ಗವಿರಂಗಪ್ಪ ಮಾತನಾಡಿ, ರಕ್ತವನ್ನು ಯಾರೂ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ರಕ್ತದಾನದಿಂದ ದೇಹ ಶುದ್ಧಿಯಾಗುತ್ತದೆ. ಜತೆಗೆ ಆರೋಗ್ಯ ಸಮಸ್ಯೆ ತಿಳಿಯಬಹುದು ಎಂದು ಹೇಳಿದರು.
ಶಿಬಿರದಲ್ಲಿ 60ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಯಿತು. ಶಿವಮೊಗ್ಗದ ಆಶಾಜ್ಯೋತಿ ರಕ್ತ ನಿಧಿ ಕೇಂದ್ರದ ಡಾ. ಹುಲ್ಲುಮನಿ, ಕಾಂಗ್ರೆಸ್ ಮುಖಂಡ ಭರತ್ ಕೆಂಪರಾಜ್, ಹಿರಿಯರಾದ ಪದ್ಮಮ್ಮ, ಸರಸ್ವತಮ್ಮ, ಓಂ ಯುವ ಸೇನೆ ಪದಾಧಿಕಾರಿಗಳು ಇದ್ದರು.