ಬರೆಯೋದಲ್ಲ ಪ್ರೆಸೆಂಟ್ ಮಾಡೋದು!

ಇನ್ನೇನು, ನೋಡನೋಡುತ್ತಲೇ ಜನವರಿ ತಿಂಗಳೂ ಅರ್ಧ ಕಳೆದೇ ಹೋಗಿದೆ. ಅಂತಿಮ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇವೆ. ಓದುವ ಜತೆಜತೆಗೆ ಪರೀಕ್ಷೆಯಲ್ಲಿ ಉತ್ತರಗಳನ್ನು ಸರಿಯಾಗಿ ಪ್ರೆಸೆಂಟ್ ಮಾಡುವ ಕೌಶಲವನ್ನೂ ಬೆಳೆಸಿಕೊಳ್ಳಬೇಕಾದ ಸಮಯವಿದು. ಉತ್ತರಗಳನ್ನು ನೀಟಾಗಿ ಪ್ರೆಸೆಂಟ್ ಮಾಡುವುದರಿಂದ ಬೋನಸ್ ಅಂಕಗಳು ದೊರೆತು ಯಶಸ್ಸಿಗೆ ಹೆಚ್ಚು ಹತ್ತಿರವಾಗಬಹುದು.

| ಜಿ.ಕೆ. ವೆಂಕಟೇಶಮೂರ್ತಿ ಕಾರವಾರ

ನಾವು ಯಾವುದೇ ವಸ್ತುವನ್ನು ಒಬ್ಬರಿಗೆ ಪ್ರೆಸೆಂಟ್ ಮಾಡುವಾಗ ಅವರ ಮನಸ್ಸಿನಲ್ಲಿ ನಮ್ಮ ಬಗ್ಗೆ ಒಳ್ಳೆಯ ಭಾವನೆ ಉಂಟಾಗಲಿ ಎಂದುಕೊಳ್ಳುತ್ತೇವೆ ಅಲ್ಲವೇ? ಅದಕ್ಕಾಗಿ ಹೆಚ್ಚಿನ ಶ್ರಮವನ್ನೂ ವಹಿಸುತ್ತೇವೆ. ಅದೇ ರೀತಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೇವಲ ಉತ್ತರಗಳನ್ನು ಬರೆದರೆ ಸಾಲದು. ಪ್ರೆಸೆಂಟ್ ಮಾಡಬೇಕು.

ಪರೀಕ್ಷೆಯಲ್ಲಿ ಉತ್ತರಗಳನ್ನು ಪ್ರೆಸೆಂಟ್ ಮಾಡುವುದರ ಗುರಿ ಶಿಕ್ಷಕರ ಮನಸ್ಸನ್ನು ಗೆಲ್ಲುವುದೇ ಆಗಿರುತ್ತದೆ. ಉತ್ತರ ಬರೆಯಬೇಕು ಎಂಬುದನ್ನು ಕಿತ್ತುಹಾಕಿ ಪ್ರೆಸೆಂಟ್ ಮಾಡಬೇಕು ಎಂಬ ಮನೋಧರ್ಮ ಹೊಂದಿರಬೇಕು. ಉತ್ತರವನ್ನು ನೋಡಿದ ಶಿಕ್ಷಕರು ‘ವೆರಿ ಗುಡ್’ ಎಂದು ಹೇಳುವಂತಾಗಬೇಕು. ಒಮ್ಮೆ ಬರೆದ ಅಕ್ಷರವನ್ನು ತಿದ್ದಿ ಅಲ್ಲೇ ಬೇರೆ ಅಕ್ಷರ ಅಥವಾ ಸಂಖ್ಯೆಯನ್ನು ಬರೆಯುವುದೂ ಒಂದು ಕೆಟ್ಟ ಅಭ್ಯಾಸ. ಕೈಗೂ ಮನಸ್ಸಿಗೂ ಹೊಂದಾಣಿಕೆ ಇಲ್ಲದಿರುವುದೇ ಓವರ್ ರೈಟಿಂಗ್ ಆಗಲು ಕಾರಣ. ಇಂಗ್ಲಿಷ್​ನಲ್ಲಿ ‘ಥಿಂಕ್ ಫಸ್ಟ್, ರೈಟ್ ನೆಕ್ಸ್ಟ್’ ಎನ್ನುತ್ತಾರೆ. ಮನಸ್ಸಿನಲ್ಲಿ ಉತ್ತರಗಳು ಮೊದಲು ಬರಬೇಕು. ಆದರೆ, ಇವು ನಾಗಾಲೋಟದಿಂದ ಬರಬಹುದು, ಆದರೆ ಕೈ ಅಷ್ಟು ವೇಗವಾಗಿ ಬರೆಯಲು ಹೇಗೆ ಸಾಧ್ಯ? ಆದ್ದರಿಂದ ಮನಸ್ಸಿನಲ್ಲಿ ಸ್ವಲ್ಪ ನಿಧಾನವಾಗಿ ಯೋಚಿಸಿ ಕೈ ವೇಗ ಹೆಚ್ಚಿಸಿಕೊಳ್ಳಬೇಕಾದುದು ಅನಿವಾರ್ಯ. ಬರೆಯುವಾಗ ಹ್ಯಾಂಡ್-ಮೈಂಡ್ ಸಹಯೋಗ ಅಗತ್ಯ. ಉತ್ತರ ಬರೆಯುವುದೆಂದರೆ ರನ್ನಿಂಗ್ ರೇಸ್ ಅಲ್ಲ. ರೇಸ್​ನಲ್ಲಾದರೆ ಫಸ್ಟ್ ಬರುವುದೇ ಎಲ್ಲಕ್ಕಿಂತ ಮುಖ್ಯ. ಆದರೆ ಉತ್ತರ ಬರೆಯುವಾಗ ಆ ಮನೋಭಾವ ಹಾನಿಕಾರಕ. ಇಲ್ಲಿ ಚೆನ್ನಾಗಿ ಪ್ರೆಸೆಂಟ್ ಮಾಡಬೇಕು ಎಂಬ ಮನಸ್ಥಿತಿ ಇರಬೇಕು. ಪರೀಕ್ಷೆಯಲ್ಲಿ ಸಮಯ ಸಾಕಾಗುವುದಿಲ್ಲವೇನೋ ಎಂಬ ಭಯದಿಂದ ಅನೇಕರು ಆತುರ ಮಾಡಿ ಅಕ್ಷರ ಕೆಡಿಸಿಕೊಳ್ಳುತ್ತಾರೆ. ಅದು ಸರಿಯಲ್ಲ. ವೇಗವಾಗಿ ಬರೆದರೂ ಅಕ್ಷರಗಳು ಸುಂದರವಾಗಿಯೂ ಇರುವಂತೆ ಮೊದಲಿನಿಂದಲೇ ಅಭ್ಯಾಸ ಮಾಡಿರಬೇಕು.

ಹೇಗಿರಬೇಕು ಬರವಣಿಗೆ?

# ಉತ್ತರ ಪತ್ರಿಕೆಯ ಮಾರ್ಜಿನ್​ನಲ್ಲಿ ಪ್ರಶ್ನೆಯ ಸಂಖ್ಯೆಯನ್ನು ಮಾತ್ರ ಬರೆಯಬೇಕು.

# ಒಂದು ಉತ್ತರ ಬರೆದಾದ ಮೇಲೆ ಒಂದು ಗೆರೆಯನ್ನು ಖಾಲಿ ಬಿಡುವುದು ಉತ್ತಮ.

# ಅಕ್ಷರಗಳು ಸುಂದರವಾಗಿಲ್ಲದಿದ್ದರೂ ಶಿಕ್ಷಕರಿಗೆ ಸುಲಭವಾಗಿ ಓದುವಂತೆ ಸ್ಪಷ್ಟವಾಗಿರಬೇಕು.

# ಗಣಿತದಲ್ಲಾದರೆ ಅಂತಿಮ ಉತ್ತರವನ್ನು ಕೆಳಗಿನ ಲೈನ್​ನಲ್ಲಿ ಸ್ಪಷ್ಟವಾಗಿ ಹೈಲೈಟ್ ಮಾಡಿ ಬರೆಯಬೇಕು. ಉತ್ತರ ಎಲ್ಲಿದೆ ಎಂದು ಶಿಕ್ಷಕರು ಹುಡುಕುವಂತಾಗಬಾರದು. ಉತ್ತರಕ್ಕೆ ನೀಟಾಗಿ ಒಂದು ಬಾಕ್ಸ್ ಹಾಕುವುದು ಒಳ್ಳೆಯ ಅಭ್ಯಾಸ.

# ಗಣಿತದ ಅಂತಿಮ ಉತ್ತರದಲ್ಲಿ ಸಂಖ್ಯೆಯ ನಂತರ ಯೂನಿಟ್ಟುಗಳನ್ನು ಸೆಂಟಿಮೀಟರ್, ಮೀಟರ್ ಇತ್ಯಾದಿ ಸ್ಪಷ್ಟವಾಗಿ ಬರೆಯಬೇಕು. ಸಂಖ್ಯೆ ಹಾಗೂ ಯೂನಿಟ್​ಗಳ ನಡುವೆ ಸ್ವಲ್ಪ ಅಂತರವಿರಲಿ. ರೂ. ಎಂದು ಬರೆಯುವಾಗ ಸಂಖ್ಯೆಯ ಮೊದಲೇ ಬರೆಯಬೇಕು. ಪಠ್ಯಪುಸ್ತಕದಲ್ಲಿ ಇದೇ ಪದ್ಧತಿ ಅನುಸರಿಸಲಾಗಿದೆ. ಉದಾ: ರೂ. 50; 275 ಸೆಂ.ಮೀ.

# ರೇಖಾಗಣಿತದ ಉತ್ತರಗಳನ್ನು ಬರೆಯಲು ವಿಶಿಷ್ಟ ವಿಧಾನವೇ ಇದೆ. ಇಂಗ್ಲಿಷ್ ಅಥವಾ ಕನ್ನಡದಲ್ಲಾದರೆ ಒಂದು ಸಾಲು ತುಂಬಿದ ನಂತರ ಮುಂದಿನ ಸಾಲಿಗೆ ಹೋಗುತ್ತೇವೆ. ರೇಖಾಗಣಿತದಲ್ಲಾದರೆ, ಒಂದು ಸಾಲಿನಲ್ಲಿ ಒಂದು ಹೇಳಿಕೆ (ಸ್ಟೇಟ್​ವೆುಂಟ್) ಬರೆದು ಮುಂದೆ ಆವರಣದಲ್ಲಿ ಕಾರಣ ತಿಳಿಸಬೇಕಾಗುತ್ತದೆ.

# ರೇಖಾಗಣಿತದ ಚಿತ್ರಗಳ ಗೆರೆಗಳು ಏಕರೀತಿಯಲ್ಲೇ ಇರಬೇಕು. ಸರಳ ರೇಖೆಗಳು ಡಾರ್ಕ್ ಆಗಿ ವೃತ್ತಗಳು ಲೈಟ್ ಆಗದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ, 0.5 ಮಿ.ಮೀ. ಕ್ಲಿಕ್ ಪೆನ್ಸಿಲ್ ಉಪಯೋಗಿಸುವುದು ಉತ್ತಮ.

# ರೇಖಾಗಣಿತದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತ್ರಿಭುಜ, ಸಮಾಂತರ, ಆದ್ದರಿಂದ, ಏಕೆಂದರೆ, ಮುಂತಾದ ಪದಗಳಿಗೆ ಚಿನ್ಹೆ ಉಪಯೋಗಿಸಬೇಕು.

# ವಿಜ್ಞಾನದ ಚಿತ್ರ ಬರೆಯುವಾಗ ಅದರ ಗಾತ್ರ ಎಷ್ಟಿರಬೇಕು ಎಂಬುದನ್ನು ಯೋಚಿಸಬೇಕು. ಗಾತ್ರಕ್ಕೆ ಟೆಕ್್ಟ ಬುಕ್ ಮಾದರಿ ಅಲ್ಲ, ಏಕೆಂದರೆ ಪುಟಗಳ ಸಂಖ್ಯೆ ಮಿತಿಗೊಳಿಸಲು ಅಥವಾ ಒಂದು ನಿರ್ದಿಷ್ಟ ಪುಟದಲ್ಲಿ ಅದನ್ನು ಹಾಕಲು ಪಠ್ಯಪುಸ್ತಕದಲ್ಲಿ ಚಿತ್ರಗಳನ್ನು ಕುಗ್ಗಿಸಿರುತ್ತಾರೆ.

# ನಾವು ಬರೆಯುವ ಉತ್ತರವು ಪ್ರಶ್ನೆಗೆ ಯಾವುದೋ ಒಂದು ಉತ್ತರ ಆಗಿರದೆ ಆ ಪ್ರಶ್ನೆಗೆ ಅತ್ಯುತ್ತಮ ಉತ್ತರ ಆಗಿರಬೇಕು.

# ವ್ಯತ್ಯಾಸ ತಿಳಿಸಿ ಎಂಬ ಪ್ರಶ್ನೆಗೆ ಮಧ್ಯದಲ್ಲಿ ಒಂದು ಗೆರೆ ಎಳೆದು ಅಕ್ಕಪಕ್ಕದಲ್ಲಿ ಉತ್ತರ ಬರೆಯುವುದು ಒಳ್ಳೆಯದು.

ಇದೊಂದು ಕೌಶಲ…

ವಿದ್ಯಾರ್ಥಿಗಳು ಪ್ರೆಸೆಂಟೇಷನ್ ಸ್ಕಿಲ್ ಬೆಳೆಸಿಕೊಳ್ಳುವುದರಿಂದ ಭವಿಷ್ಯದಲ್ಲೂ ಅವರಿಗೆ ಉಪಯೋಗವಾಗುತ್ತದೆ. ಮುಂದೆ ಶಿಕ್ಷಣ ಮುಗಿದು ಕೆಲಸಕ್ಕಾಗಿ ಇಂಟರ್ ವ್ಯೂ ಎದುರಿಸಬೇಕಾದಾಗ ತಮ್ಮನ್ನು ತಾವೇ ಪ್ರೆಸೆಂಟ್ ಮಾಡಿಕೊಳ್ಳಬೇಕಾಗುತ್ತದೆ. ಪಿಎಚ್​ಡಿ ಪರೀಕ್ಷೆ ಎದುರಿಸುವಾಗಲೂ ತಮ್ಮ ಸಂಶೋಧನಾ ವಿಷಯಗಳನ್ನು ಪ್ರೆಸೆಂಟ್ ಮಾಡಬೇಕಾಗುತ್ತದೆ. ಹೀಗೆ ಪ್ರೆಸೆಂಟೇಷನ್ ಸ್ಕಿಲ್ ಎಲ್ಲ ರಂಗಗಳಲ್ಲಿಯೂ ಮುಖ್ಯ. ಶಿಕ್ಷಕರಿಗೆ ದಿನವೂ ಹೋಂವರ್ಕ್ ತೋರಿಸುವುದು ಎಂಬ ಭಾವನೆ ಹೊಂದಿರದೆ ಅದನ್ನು ಪ್ರೆಸೆಂಟ್ ಮಾಡುವುದು ಎಂಬ ಭಾವನೆಯನ್ನು ವಿದ್ಯಾರ್ಥಿಗಳು ಹೊಂದುವುದರಿಂದ ಪ್ರೆಸೆಂಟೇಷನ್ ಸ್ಕಿಲ್ ಮೈಗೂಡಿಸಿಕೊಳ್ಳಲು ಸಾಧ್ಯ.

ನಾಲ್ಕು ಬಗೆಯ ಸ್ಪೇಸಿಂಗ್….

ನಮ್ಮ ಒಂದೊಂದೇ ಅಕ್ಷರಗಳನ್ನು ಪ್ರತ್ಯೇಕವಾಗಿ ನೋಡಿದಾಗ ಅವು ಚೆನ್ನಾಗಿ ಕಾಣದಿದ್ದರೂ ಅವನ್ನು ಜೋಡಿಸಿ ಉತ್ತರ ಬರೆದಾಗ ಅಂದವಾಗಿ ಕಾಣುವಂತೆ ಪ್ರೆಸೆಂಟ್ ಮಾಡುವ ಉಪಾಯವೇ ಸ್ಪೇಸಿಂಗ್. ಅಂದರೆ, ಖಾಲಿ ಜಾಗ ಬಿಡುವುದು. ಒಟ್ಟು ನಾಲ್ಕು ಬಗೆಯ ಸ್ಪೇಸಿಂಗ್​ಗಳಿವೆ. 1) ಲೆಟರ್ಸ್ ಸ್ಪೇಸಿಂಗ್-ಅಕ್ಷರಗಳ ನಡುವಿನ ಅಂತರ 2) ವರ್ಡ್ ಸ್ಪೇಸಿಂಗ್-ಪದಗಳ ನಡುವಿನ ಅಂತರ 3) ಲೈನ್ ಸ್ಪೇಸಿಂಗ್-ಸಾಲುಗಳ ನಡುವಿನ ಅಂತರ 4) ಪೇಜ್ ಸ್ಪೇಸಿಂಗ್-ಪೇಜ್ ಲೇಔಟ್ ಅಥವಾ ಪುಟವಿನ್ಯಾಸ. ಲೆಟರ್ಸ್ ಸ್ಪೇಸಿಂಗ್ ಎಂದರೆ ಒಂದು ಪದದೊಳಗೆ ಅಕ್ಷರಗಳ ನಡುವಿನ ಅಂತರ. ಇದು ಅತಿ ಕನಿಷ್ಠವಾಗಿದ್ದು ಅಕ್ಷರಗಳು ಮುತ್ತು ಪೋಣಿಸಿದಂತೆ ಇರಬೇಕು. ಹೆಚ್ಚು ಸಂದುಗಳಿಲ್ಲದೆ ಅಚ್ಚುಕಟ್ಟಾಗಿ ಜೋಡಿಸಿರುವ ದಂತಪಂಕ್ತಿಯಂತೆ ಇರಬೇಕು. ವರ್ಡ್ ಸ್ಪೇಸಿಂಗ್ ಎಂದರೆ ಪದ ಪದಗಳ ನಡುವಿನ ಅಂತರ. ಇದು ಯೂನಿಫಾಮ್ರ್ ಆಗಿದ್ದು, ಸುಮಾರು ಅರ್ಧ ಸೆಂಟಿಮೀಟರ್​ನಷ್ಟು ಇರಬೇಕು.

ಲೈನ್ ಸ್ಪೇಸಿಂಗ್ ಎಂದರೆ ಒಂದು ಸಾಲಿಗೂ ಮತ್ತು ಅದರ ಕೆಳಗಿನ ಸಾಲಿಗೂ ಇರುವ ಅಂತರ. ಬಿಳಿ ಹಾಳೆಯಲ್ಲಿ ಬರೆಯುವಾಗ ಅಕ್ಷರಗಳು ದೊಡ್ಡದಾಗಿದ್ದರೆ ಸಾಲುಗಳ ನಡುವೆ ಹೆಚ್ಚಿನ ಅಂತರ ಬಿಡಬಹುದು. ಈ ಸ್ವಾತಂತ್ರ್ಯ ರೂಲ್ಡ್ ಪೇಪರ್ ಮೇಲೆ ಬರೆಯುವಾಗ ಇರುವುದಿಲ್ಲ. ರೂಲ್​ಗಳ ನಡುವಿನ ಅಂತರಕ್ಕೆ ಸರಿಯಾಗಿ ನಮ್ಮ ಅಕ್ಷರಗಳ ಎತ್ತರವನ್ನು ಹೊಂದಿಸಬೇಕಾಗುತ್ತದೆ. (ಅಕ್ಷರಗಳ ಎತ್ತರವು ಗೆರೆಗಳ ನಡುವಿನ ಅಂತರದ ಅರ್ಧದಷ್ಟಲ್ಲ, ತಲಾ ಮೂರನೇ ಒಂದು ಎತ್ತರವಿದ್ದರೆ ಚೆನ್ನಾಗಿ ಕಾಣುತ್ತದೆ.) ಪೇಜ್ ಸ್ಪೇಸಿಂಗ್ ಎಂದರೆ ಇಡೀ ಪುಟದ ವಿನ್ಯಾಸ. ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ತುಂಬಿದಂತೆ ಅಕ್ಷರಗಳನ್ನು ಪುಟದಲ್ಲಿ ತುಂಬಿದರೆ ಚಂದ ಕಾಣುವುದಿಲ್ಲ. ಲಕ್ಷುರಿ ಬಸ್ಸಿನಲ್ಲಿ ಸೀಟುಗಳನ್ನು ಜೋಡಿಸಿರುವಂತೆ ಇರಬೇಕು. ಪೇಜ್ ಸ್ಪೇಸಿಂಗ್​ನಲ್ಲಿ ಎಡ ಮತ್ತು ಮೇಲ್ಭಾಗದ ಮಾರ್ಜಿನ್ ಬಿಡುವುದೂ ಸೇರಿದೆ. ಮಾರ್ಜಿನ್ ಸಾಕಷ್ಟು ಅಗಲ ಇರಬೇಕು. ಪ್ಯಾರಾದ ಮೊದಲ ಸಾಲನ್ನು ಸ್ವಲ್ಪ ಇಂಡೆಂಟ್ ಬಿಟ್ಟು ಪ್ರಾರಂಭಿಸುವುದು ಅಥವಾ ಪ್ಯಾರಾಗಳ ನಡುವೆ ಒಂದು ಸಾಲನ್ನು ಬಿಡುವುದು ಪೇಜ್ ಸ್ಪೇಸಿಂಗ್ ಅನಿಸಿಕೊಳ್ಳುತ್ತದೆ.