ಹೊಗೆಸೊಪ್ಪ ಬೆಳೆ ಸ್ಥಗಿತದ ಆತಂಕ ಬೇಡ

ಕಂಪಲಾಪುರ: 2020ಕ್ಕೆ ಹೊಗೆಸೊಪ್ಪು ಬೆಳೆ ನಿಂತುಹೋಗುತ್ತದೆ ಎಂಬ ಆತಂಕ ಬೇಡ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್.ಪಾಟೀಲ್ ಹೇಳಿದರು.

ಚಿಲ್ಕುಂದ ತಂಬಾಕು ಮಾರುಕಟ್ಟೆ ಸಂಖ್ಯೆ 62ರಲ್ಲಿ ಬುಧವಾರ ಆಯೋಜಿಸಿದ್ದ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಕಾರ್ಯಾಗಾರದಲ್ಲಿ ಮಾತನಾಡಿ, ಎಲ್ಲೆ ಕಡಿಮೆ ದರ್ಜೆಯ ತಂಬಾಕು ಉತ್ಪಾದನೆಯಾಗುತ್ತಿದೆಯೋ ಅಲ್ಲಿ ಪರ್ಯಾಯ ಬೆಳೆ, ಗುಣಮಟ್ಟದ ತಂಬಾಕು ಉತ್ಪಾದನೆಯಾಗುವಲ್ಲಿ ಕಡಿಮೆ ಖರ್ಚಿನಲ್ಲಿ ಇಳುವರಿ ಹೆಚ್ಚಳಕ್ಕೆ ಪ್ರೇರೇಪಿಸಲಾಗುವುದು ಎಂದರು.

ಪ್ಲಾಸ್ಟಿಕ್‌ನಂತಹ ಅನ್ಯ ಪದಾರ್ಥಗಳು ತಂಬಾಕಿಗೆ ಸೇರದಂತೆ ಎಚ್ಚರ ವಹಿಸಿ, ಬೇಡಿಕೆಗೆ ಹಿನ್ನಡೆಯಾಗದಂತೆ ನಿಯಮ ಪಾಲಿಸಬೇಕೆಂದು ಸಲಹೆ ನೀಡಿದರು.

ಚಿಲ್ಕುಂದ ಪಶುಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿ.ಡಿ.ಧರಣೇಶ್ ಮಾತನಾಡಿ, ರೈತರು ವೈಜ್ಞಾನಿಕವಾಗಿ ಮತ್ತು ಕ್ರಮಬದ್ಧವಾಗಿ ಹೈನುಗಾರಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಅಭಿಪ್ರಾಯಪಟ್ಟರು.

ಕರುಗಳ ಪಾಲನೆ, ರಾಸುಗಳಿಗೆ ಮೇವು, ಔಷಧ ನೀಡುವಿಕೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ತೋಟಗಾರಿಕೆ ಅಧಿಕಾರಿ ಸಿದ್ದರಾಜು ಮಾತನಾಡಿ, ತಂಬಾಕು ಬೆಳೆಗಾರರು ಪರ್ಯಾಯ ಬೆಳೆಗೆ ಪರಿವರ್ತನೆಯಾಗುವ ಮೊದಲು ಜಮೀನಿಗೆ ನೀರಾವರಿ ಸೌಲಭ್ಯ ಹೊಂದಬೇಕು. ಬಾಳೆ, ತೆಂಗು, ತರಕಾರಿ ಬೆಳೆಗಳಿಗೆ ಹನಿ ನೀರಾವರಿ ಪ್ರೋತ್ಸಾಹ ಧನ ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ವರ್ಣ ನಾಗಭೂಷಣ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಾದವ್ ಬಾಬು , ಐ.ಟಿ.ಸಿ. ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ಪೂರ್ಣೇಶ್, ರೈತರ ಪರವಾಗಿ ಹಿಟ್ಗಳ್ಳಿ ರವಿ ಮಾತನಾಡಿದರು.

ಹರಾಜು ಅಧೀಕ್ಷಕರಾದ ಪಿ.ಕೆ.ವೀರಭದ್ರಯ್ಯ, ಬಿ.ಮಂಜುನಾಥ್, ಬಿ.ಮಾರಣ್ಣ, ಕ್ಷೇತ್ರಾಧಿಕಾರಿ ಶಂಭುಲಿಂಗೇಗೌಡ, ಸವಿನಯ್, ಮಂಜುನಾಥ್ ಇತರರಿದ್ದರು.

ಹಸಿರೀಕರಣದ ಅಂಗವಾಗಿ ರೈತರು ಮಾರುಕಟ್ಟೆ ಆವರಣದಲ್ಲಿ ವಿವಿಧ ಜಾತಿಯ 250 ಸಸಿಗಳನ್ನು ನೆಟ್ಟರು.