ನಮಗೆ ಮೈತ್ರಿ ಸಹವಾಸ ಬೇಡವೇ ಬೇಡ, ಪಕ್ಷದ ವರಿಷ್ಠರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ: ಶಾಸಕ ಗೌರಿಶಂಕರ್​

ತುಮಕೂರು: ಸಿಎಂ ಎಚ್​.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಪಕ್ಷದಿಂದ ಹೊರಹಾಕಿದರೂ ಪರವಾಗಿಲ್ಲ. ನಮಗೆ ಈ ಮೈತ್ರಿ ಸಹವಾಸ ಬೇಡವೇ ಬೇಡ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತುಮಕೂರಿನಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು ಮೈತ್ರಿ ಮಾಡಿಕೊಳ್ಳದೆ ಹೋಗಿದ್ದರೆ ಮಾಜಿ ಪ್ರಧಾನಿ ದೇವೇಗೌಡರು ಎರಡು ಲಕ್ಷ ಮತಗಳ ಅಂತರದಿಂದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದರು. ನಾನು ಹೇಳುವುದು ನಮಗೆ ಮೈತ್ರಿ ಬೇಡವೇ ಬೇಡ. ಇದರಿಂದಲೇ ನಮಗೆ ಹಿನ್ನಡೆಯಾಗಿದೆ ಎಂದರು.

ಅಲ್ಲಿ ಆಪರೇಷನ್ ಎಂದು ಒಬ್ಬರು ಬಾಂಬೆಗೆ ಹೋದರು. ದೆಹಲಿಗೆ ಹೋದರು. ಸರ್ಕಾರ ಬಿದ್ದು ಹೋಯಿತು. ಪ್ರತಿ ದಿನ ಇದೇ ಆಗಿದ್ದು, ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಇದೇ ಸೋಲಿಗೆ ಕಾರಣ ಎಂದು ಶಾಸಕ ಗೌರಿಶಂಕರ್ ಬೇಸರ ವ್ಯಕ್ತಪಡಿಸಿದರು.

ಸಿಎಂ ಎಚ್​ಡಿಕೆ ಮಾಧ್ಯಗಳೊಂದಿಗೆ ಮಾತನಾಡದಂತೆ ಜೆಡಿಎಸ್​ನ ಮುಖಂಡರಿಗೆ ತಾಕೀತು ಮಾಡಿದ್ದು ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳುವುದು, ಹೇಳಿಕೆಗಳನ್ನು ನೀಡುವುದು ಮಾಡಬಾರದು ಎಂದಿದ್ದರು. ಆದರೂ ಗೌರಿಶಂಕರ್​ ಇಂತಹ ಹೇಳಿಕೆ ನೀಡಿರುವುದು ರಾಜ್ಯ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ತೋರಿಸುತ್ತಿದೆ. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *