ತಮ್ಮನ್ನು ಶಾಸಕರನ್ನಾಗಿಸಿದ ಜನತೆಗೆ ತಿಳಿಸದೆ ರಾಜೀನಾಮೆ ನೀಡಿದವರನ್ನು ನಂಬಬೇಡಿ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮಾಜಿ ಶಾಸಕ ಉಮೇಶ್​ ಜಾಧವ್​ರನ್ನು ಶಾಸಕರನ್ನಾಗಿ ಮಾಡಿದ್ದು ಇಲ್ಲಿಯ ಜನತೆ. ಆದರೆ ಇಲ್ಲಿಯ ಜನತೆಯನ್ನು ಒಂದು ಮಾತು ಕೇಳದೆ ಜಾಧವ್​ ರಾಜೀನಾಮೆ ನೀಡಿದ್ದಾರೆ. ಮುಂಬೈ ಹೋಗಿ ಕಮಲಕ್ಕೆ ಹಿಡಿದುಕೊಂಡು ಬಂದರು. ಇಂತವರನ್ನು ನಂಬಬಾರದು ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.

ಚಿಂಚೋಳಿ ತಾಲೂಕಿನ ರಠಕಲನಲ್ಲಿ ನಡೆದ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದರು. ಉಮೇಶ್​ ಜಾಧವ್​ ಮುಂಬೈನಲ್ಲಿ ಬಿಜೆಪಿಯವರೊಂದಿಗೆ ಚರ್ಚಿಸಿ ಕಮಲದೊಂದಿಗೆ ಇಲ್ಲಿಗೆ ಬರುವಾಗಲೇ ಅದು ಬಾಡಿ ಹೋಗಿದೆ. ಹೀಗಾಗಿ ಬಾಡಿ ಹೋದ ಕಮಲಕ್ಕೆ ಮತ ಹಾಕದೆ ಸದಾ ಜತೆಗಿರುವ ಹಸ್ತಕ್ಕೆ ಮತ ನೀಡುವಂತೆ ಮನವಿ ಮಾಡಿದರು.

ಸಮಾವೇಶದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ​ಯಡಿಯೂರಪ್ಪ ಸಿಎಂ ಆಗಲು ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ. ಹಾಗೂ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷ ಒಡ್ಡಿ ತಮ್ಮ ಪಕ್ಷಕ್ಕೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ನೀವು ಬರೀ ಈಶ್ವರ, ನಾನು ಪರಮೇಶ್ವರ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ನಿಂದನೆ ಮಾಡುತ್ತಿರುವ ಈಶ್ವರಪ್ಪ ವಿರುದ್ಧ ಡಾ. ಜಿ. ಪರಮೇಶ್ವರ್​ ಆಕ್ರೋಶ ವ್ಯಕ್ತಪಡಿಸಿದರು. ಈಶ್ವರಪ್ಪನವರ ಮೆದುಳಿಗೂ ನಾಲಿಗೆಗೂ ಕನೆಕ್ಷನ್ ತಪ್ಪಿದೆ ಎಂದು ಸಿದ್ದರಾಮಯ್ಯ ಅವರು ಬಹಳ ಸಲ ಹೇಳಿದ್ದಾರೆ. ನೀವು ಟೀಕೆ ಮಾಡಿ. ಆದರೆ ವೈಯಕ್ತಿಕ ನಿಂದನೆ ಬೇಡ ಎಂದು ಎಚ್ಚರಿಸಿದರು.

ನೀವು ಬರೀ ಈಶ್ವರ, ಆದರೆ ನಾನು ಪರಮೇಶ್ವರ ಆಗಿದ್ದೇನೆ. ಈಶ್ವರಪ್ಪನವರೇ ಈಶ್ವರ ಯಾವತ್ತೂ ಪರಮೇಶ್ವರ ಆಗಲೇ ಇಲ್ಲ ಎಂದರು.

Leave a Reply

Your email address will not be published. Required fields are marked *