More

    ಉನ್ನತ ಗುರಿಸಾಧನೆಯವರೆಗೂ ವಿರಮಿಸಬಾರದು…

    ಉನ್ನತ ಗುರಿಸಾಧನೆಯವರೆಗೂ ವಿರಮಿಸಬಾರದು...

    ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗಿಂತ ಅತ್ಯಂತ ಬುದ್ಧಿವಂತ ಜೀವಿ ಎಂದರೆ ಮನುಷ್ಯ. ತನ್ನ ಜೀವಿತಾವಧಿಯಲ್ಲಿ ಹೆಸರು ಉಳಿಸುವಂಥ ಕಾರ್ಯ ಮಾಡಲೇಬೇಕು ಎಂದು ಹಠತೊಟ್ಟರೆ ಅದನ್ನು ಸಾಧಿಸುವವರೆಗೂ ವಿರಮಿಸಬಾರದು. ಸಾಮಾನ್ಯವಾಗಿ ಶಿಕ್ಷಣ, ನಟನೆ, ಉದ್ಯೋಗ, ಚಿತ್ರಕಲೆ, ಕ್ರೀಡೆ, ವಿಜ್ಞಾನ, ಸಂಶೋಧನೆ, ಸಾಹಸ, ಸಾಹಿತ್ಯ, ರಾಜಕೀಯ ಯಾವುದೇ ಕ್ಷೇತ್ರದಲ್ಲಾದರೂ ಉನ್ನತ ಸ್ಥಾನ ಪಡೆಯುತ್ತೇನೆಂಬ ಗುರಿ ಹೊಂದಬೇಕು. ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶೇಷ ಸಾಮರ್ಥ್ಯವಿರುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಬಳಕೆ ಮಾಡಿಕೊಂಡಲ್ಲಿ ಮಾತ್ರ ಯಶಸ್ಸು ದೊರೆಯುತ್ತದೆ. ಬುದ್ಧಿವಂತ ಜೀವಿಯಾದ ಮನುಷ್ಯನಿಗೆ ಯಾವುದೇ ಕೆಲಸ ಅಸಾಧ್ಯವಲ್ಲ. ಪೂರ್ವನಿರ್ಧರಿತವಾಗಿ ಗುರಿ ಇಟ್ಟುಕೊಂಡು ಶ್ರಮಿಸಿದಲ್ಲಿ ಅದನ್ನು ಸುಲಭವಾಗಿ ತಲುಪಬಹುದು. ಆದರೆ, ಗುರಿ ತಲುಪುವತ್ತ ಸಾಗುವ ನಮ್ಮ ಮಾರ್ಗ ಎಂದಿಗೂ ಯೋಜನಾಬದ್ಧವಾಗಿರಬೇಕು. ಯೋಜನೆ ಇಲ್ಲದೆ ಮಾಡುವ ಕೆಲಸವು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

    ಮನುಷ್ಯ ಮೂಲತಃ ಸಂಘಜೀವಿ. ತನ್ನದೇ ರಕ್ತಸಂಬಂಧಿಗಳನ್ನು ಒಳಗೊಂಡ ಅಪ್ಪ-ಅಮ್ಮ, ಅಜ್ಜಿ-ತಾತ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ- ದೊಡ್ಡಮ್ಮ, ಮಗ-ಮಗಳು, ಭಾವ, ನಾದಿನಿ, ಸೊಸೆ ಹೀಗೆ ಕುಟುಂಬವನ್ನು ಕಟ್ಟಿಕೊಂಡು ಸಹಜೀವನ ಸಾಗಿಸುತ್ತಾನೆ. ಸಮಾಜದಲ್ಲಿ ಕುಟುಂಬದ ಒಬ್ಬ ಸದಸ್ಯನ ಜೀವನವನ್ನು ಸಾಮಾಜಿಕ, ಔದ್ಯೋಗಿಕ, ಆರ್ಥಿಕವಾಗಿ ಸದೃಢಗೊಳಿಸಲು ಎಲ್ಲರ ಸಹಕಾರವೂ ಇರುತ್ತದೆ. ಹೀಗಾಗಿ, ನಮ್ಮ ಕನಸು ಏನೇ ಇದ್ದರೂ ಅದನ್ನು ಕುಟುಂಬ ಸದಸ್ಯರೊಡನೆ ಮುಕ್ತವಾಗಿ ಹಂಚಿಕೊಳ್ಳಬೇಕು. ಆಗ ಕುಟುಂಬದ ಸಹಕಾರವೂ ದೊರೆಯುತ್ತದೆ. ಮತ್ತೊಂದೆಡೆ ನಮ್ಮ ಕುಟುಂಬದಷ್ಟೇ ಮುಖ್ಯವಾಗಿ ಸ್ನೇಹಿತರ ಕೂಟವೂ ಮುಖ್ಯವಾಗಿರುತ್ತದೆ. ಅನೇಕರಿಗೆ ಕುಟುಂಬವೇ ಇರುವುದಿಲ್ಲ. ಇದ್ದರೂ ಕೆಲವು ಬಾರಿ ಸಹಕಾರ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ನೆರವಾಗುವುದೇ ಸ್ನೇಹಿತರು. ನಮ್ಮ ಸ್ನೇಹಿತರೊಂದಿಗೂ ನಮ್ಮ ಕನಸು ಅಥವಾ ಗುರಿಯ ಬಗ್ಗೆ ಹಂಚಿಕೊಂಡಲ್ಲಿ ಖಂಡಿತವಾಗಿಯೂ ಸಹಕಾರ ಸಿಕ್ಕೇ ಸಿಗುತ್ತದೆ. ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಹೊಂದುವುದು ಕೂಡ ಉತ್ತಮ ಹವ್ಯಾಸವಾಗಿದೆ.

    ಸೋಲಿಗೆ ನಿರಾಶೆ ಮದ್ದಲ್ಲ: ಪ್ರತಿಯೊಬ್ಬರಿಗೂ ದೇವರು ವಿಶೇಷ ಶಕ್ತಿ-ಸಾಮರ್ಥ್ಯ ಕೊಟ್ಟಿದ್ದಾನೆ. ಅದನ್ನು ಉತ್ತಮ ಕಾರ್ಯಗಳಿಗೆ ಅಗತ್ಯವಾಗಿ ಬಳಸಬೇಕು. ನಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ಬಿಟ್ಟು ಬೇರೊಂದು ಕ್ಷೇತ್ರದಲ್ಲಿ ಉತ್ತುಂಗಕ್ಕೆ ತಲುಪುತ್ತೇವೆ ಎನ್ನುವುದು ಅತಿಯಾಸೆ ಆಗುತ್ತದೆ. ಹೀಗಾಗಿ, ಮೊದಲು ವಿಭಿನ್ನ ಕ್ಷೇತ್ರದಲ್ಲಿ ಸೋಲು ಸಹಜವಾಗಿ ಸಂಭವಿಸುತ್ತದೆ. ಸೋಲಾಯಿತೆಂದು ನಿರಾಶೆಯಾಗಿ ಕುಳಿತುಕೊಂಡಲ್ಲಿ, ಅದು ಯಶಸ್ಸಿಗೆ ದಾರಿಯಾಗುವುದಿಲ್ಲ. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಪರಿವರ್ತಿಸಿಕೊಂಡು ನಿರಂತರ ಶ್ರಮ, ಕಠಿಣ ಅಭ್ಯಾಸದ ಮೂಲಕ ನಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯಾಗಿ ಸಿದ್ಧರಾಗಬೇಕು. ನಮ್ಮ ಪೂರ್ವಾಭ್ಯಾಸವೇ ನಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಅರ್ಧದಷ್ಟು ಯಶಸ್ಸನ್ನು ತಂದುಕೊಡುತ್ತದೆ. ನಂತರ ಸೋಲೆಂಬ ನಿರಾಶೆ ನಮ್ಮನ್ನು ಕಾಡದೆ ದೂರವಾಗುತ್ತದೆ.

    ಒಳಿತನ್ನೇ ಅನುಕರಿಸಿ: ಹುಟ್ಟಿನಿಂದಲೇ ಯಾವುದೇ ವಿದ್ಯೆ, ಗುಣಗಳನ್ನು ಕಲಿತುಕೊಂಡು ಬಂದಿರುವುದಿಲ್ಲ. ಮಗುವಾಗಿ, ಬಾಲಕ-ಬಾಲಕಿಯಾಗಿ, ವಿದ್ಯಾರ್ಥಿಯಾಗಿ, ಯುವಕ-ಯುವತಿ ಆಗಿ ಸಮಾಜದ ಒಂದು ಅವಿಭಾಜ್ಯ ಅಂಗವಾಗಿ ಬೆಳೆಯುತ್ತ ಹೋಗುತ್ತೇವೆ. ಈ ವೇಳೆ ಕುಟುಂಬ ಸದಸ್ಯರು, ಸ್ನೇಹಿತರು, ಶಿಕ್ಷಕರು, ಸಿನಿಮಾ, ನಟ-ನಟಿಯರು, ಕಲಾವಿದರು, ರಾಜಕೀಯ ವ್ಯಕ್ತಿ, ಸಮಾಜಸೇವಕ, ನೃತ್ಯಪಟು, ಸಂಗೀತಗಾರ, ಕ್ರೀಡಾಪಟು, ಸಾಹಿತಿಗಳು ಅಥವಾ ಯಾವುದೇ ಕ್ಷೇತ್ರದ ಪ್ರೀತಿಪಾತ್ರರು ನಮ್ಮ ಮೇಲೆ ಪ್ರಭಾವ ಬೀರಿರುತ್ತಾರೆ. ಅವರನ್ನು ಅನುಕರಣೆ ಮಾಡುತ್ತ ನಮ್ಮ ನಡವಳಿಕೆಗಳನ್ನು ರೂಪಿಸಿಕೊಳ್ಳುತ್ತೇವೆ. ಆದ್ದರಿಂದ ನಾವು ಅನುಕರಣೆ ಮಾಡುವ ವ್ಯಕ್ತಿ ಸಮಾಜದಲ್ಲಿ ಎಂದಿಗೂ ನೈತಿಕವಾಗಿ ಎತ್ತರದ ಸ್ಥಾನದಲ್ಲಿದ್ದು, ಗೌರವಯುತ ವ್ಯಕ್ತಿತ್ವ ಹೊಂದಿರಬೇಕು. ಮುಖ್ಯವಾಗಿ ನಮ್ಮ ಮಾದರಿ ವ್ಯಕ್ತಿಯಲ್ಲಿಯೂ ಕೆಲವು ಕೆಟ್ಟ ಗುಣಗಳಿಬಹುದು. ಆದರೆ, ನಾವು ಮಾತ್ರ ಅವರಲ್ಲಿನ ಒಳ್ಳೆಯ ಅಂಶಗಳನ್ನು ಮಾತ್ರ ಅನುಕರಣೆ ಮಾಡುವ ಮೂಲಕ ಸಮಾಜದಲ್ಲಿ ನಾವು ಕೂಡ ಗೌರವಯುತ ಜೀವನ ಸಾಗಿಸಲು ಅಣಿಗೊಳ್ಳಬೇಕು.

    ಹಣವೇ ಯಶಸ್ಸಿನ ಮಾನದಂಡವಲ್ಲ: ಮನುಷ್ಯನಾಗಿ ಹುಟ್ಟಿದ ಮೇಲೆ ಗುರಿ ಇರಬೇಕು, ಗುರಿ ಸಾಧನೆ ಎಂದರೆ ಕೇವಲ ಹಣ ಸಂಪಾದಿಸುವುದು, ಅಗತ್ಯ ವಸ್ತುಗಳನ್ನು ಕೊಳ್ಳುವುದು ಎಂದಲ್ಲ. ನಾವು ಮಾಡುವ ಕೆಲಸ ಹೆತ್ತವರಿಗೆ, ನಾಡಿಗೆ ಕೀರ್ತಿ ತರುವಂತಿರಬೇಕು. ಇತರರಿಗೆ ಉಪಯೋಗವಾಗುವಂತಿರಬೇಕು.

    ನಿರಂತರ ಶ್ರಮವಿಲ್ಲದೆ ಫಲಿತಾಂಶದ ಬಗ್ಗೆ ಅತಿಯಾದ ನಿರೀಕ್ಷೆ ಬೇಡ. ಅತಿಯಾಸೆ ಹಾಗೂ ಅತಿಯಾದ ನಿರೀಕ್ಷೆ ಒತ್ತಡ ಹೆಚ್ಚಿಸುತ್ತದೆ. ಇದರ ಒಳಾರ್ಥ ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಅಥವಾ ಇರುವುದರಲ್ಲಿಯೇ ತೃಪ್ತಿ ಹೊಂದಬೇಕು ಎಂಬುದಾಗಿದೆ. ಆಧುನಿಕತೆಯ ಜೀವನಶೈಲಿಯಿಂದ ಮನುಷ್ಯ ಬಹುತೇಕ ಯಾಂತ್ರಿಕ ಬದುಕಿಗೆ ಅವಲಂಬಿತನಾಗಿರುವುದರಿಂದ ಜೀವನ ನಿರ್ವಹಣೆಯಲ್ಲಿ ಬೇಡಿಕೆ ಹೆಚ್ಚಿದ್ದು, ತೃಪ್ತಿ ಇಲ್ಲದಂತಾಗಿದೆ. ದುಡಿಯುವ ವರ್ಗ ಮಾತ್ರವಲ್ಲ, ಮಕ್ಕಳಿಂದ ಹಿರಿಯರವರೆಗೂ ಪ್ರತಿಯೊಬ್ಬರೂ ಒಂದಿಲ್ಲೊಂದು ಒತ್ತಡದಲ್ಲಿ ಜೀವನ ನಡೆಸುತ್ತಿದ್ದಾರೆ.

    ನಮ್ಮ ತಪ್ಪಿಗೆ ನಾವೇ ಹೊಣೆ: ಜೀವನದಲ್ಲಿ ನಾವು ಎದುರಿಸುವ ಎಲ್ಲ ಸಮಸ್ಯೆಗಳಿಗೂ ನಾವೇ ಹೊಣೆಯಾಗಿರುತ್ತೇವೆ. ಅದಕ್ಕಾಗಿ ಮತ್ತೊಬ್ಬರನ್ನು ಹೊಣೆ ಮಾಡಬೇಡಿ. ನೀವು ಸಿಲುಕಿರುವ ಸಮಸ್ಯೆಗೆ ಕಾರಣ ಅರಿತು, ಅದರಿಂದ ಹೊರಬರುವ ಪ್ರಯತ್ನ ಮಾಡಿ. ಅದನ್ನು ಜೀವನದ ಪಾಠ ಎಂದು ತಿಳಿಯಿರಿ. ಪ್ರತಿಯೊಂದು ವಸ್ತುವಿಚಾರವನ್ನು ಸಕಾರಾತ್ಮಕವಾಗಿ ನೋಡುವುದನ್ನು ರೂಢಿಸಿಕೊಳ್ಳಿ. ನಮ್ಮ ಅಲೋಚನೆ ಹೇಗಿರುತ್ತದೋ, ದೃಷ್ಟಿಯೂ ಅದೇ ರೀತಿ ಇರುತ್ತದೆ. ಹಾಗಾಗಿ ಒಳ್ಳೆಯ ರೀತಿಯಲ್ಲಿ ಯೋಚಿಸಿದರೆ ನೋಡುವ ನೋಟವೂ ಒಳ್ಳೆಯದನ್ನೇ ಬಿಂಬಿಸುತ್ತದೆ.

    ಇರುವ ಕ್ಷೇತ್ರದಲ್ಲಿಯೇ ಸಾಧಿಸಿ: ಉನ್ನತ ಹುದ್ದೆಗಳೇ ಬೇಕು ಎಂದು ಆಸೆ ಪಡುವುದು ತಪ್ಪಲ್ಲ. ಆದರೆ, ಆ ಹುದ್ದೆಗಳು ಎಲ್ಲರಿಗೂ ಸಿಗಲು ಸಾಧ್ಯವಿಲ್ಲ. ಹೀಗಾಗಿ, ಜೀವನದಲ್ಲಿ ಉನ್ನತ ಹುದ್ದೆ, ಉನ್ನತ ಸ್ಥಾನ ಸಿಗಲಿಲ್ಲವೆಂದು ಕೊರಗುತ್ತ ಕುಳಿತುಕೊಳ್ಳದೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಪರಿಣತಿ ಸಾಧಿಸಿ ಮುಂದುವರಿಯಬೇಕು. ಈ ಮೂಲಕ ಪ್ರತಿಯೊಬ್ಬ ಯುವಕರು ತಾವಿರುವ ಕ್ಷೇತ್ರದಲ್ಲಿ ಸಮರ್ಪಕವಾಗಿ ದುಡಿಯಬೇಕು. ಮನುಷ್ಯನ ಬದುಕು ಅಸಾಧಾರಣವಾಗಿರಬೇಕು. ಬದುಕು ಮೀರಿ ಸಾಧನೆ ಮಾತನಾಡಬೇಕು. ದೇಶನಿರ್ವಣ ಪ್ರಕ್ರಿಯೆಯಲ್ಲಿ ಯುವಕರು ಅಡಿಪಾಯ ಆಗಬೇಕು. ಯುವಸಮೂಹ ಶಕ್ತಿಶಾಲಿಯಾಗಿ ಬೆಳೆದರೆ ಮಾತ್ರ ಬಲಿಷ್ಠ ದೇಶ ನಿರ್ವಣವಾಗಲಿದೆ. ಪ್ರತಿಯೊಬ್ಬರು ದೇಶಕ್ಕೆ ತಮ್ಮಿಂದಾದ ಕೊಡುಗೆ ನೀಡಬೇಕು. ಶಿಸ್ತುಬದ್ಧ ಜೀವನ, ದುಡಿಮೆ, ದೇಶಸೇವೆ ಮನೋಭಾವ ರೂಢಿಸಿಕೊಂಡರೆ ಜೀವನ ನೆಮ್ಮದಿಯಾಗಿರುತ್ತದೆ. ಜತೆಗೆ ದೇಶದ ಭವಿಷ್ಯವೂ ಉತ್ತಮವಾಗಿರುತ್ತದೆ. ಸೀಮಿತ ಯೋಚನೆ, ಸಂಕುಚಿತತೆ, ಸ್ವಾರ್ಥದ ಬೇಲಿಯಿಂದ ಹೊರಬರಬೇಕು.

    ಆರೋಗ್ಯವೇ ಸಂಪತ್ತು: ಆರೋಗ್ಯ ಎಲ್ಲರಿಗೂ ಮುಖ್ಯ. ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ಇರಬೇಕು. ಯುವಕರಾಗಿ ದ್ದಲೇ ಹೆಚ್ಚು ಕಾಳಜಿ ವಹಿಸಿದರೆ ಒಳ್ಳೆಯದು. ಜಗತ್ತನ್ನೇ ಕಾಡಿದ ಕೋವಿಡ್​ಗೆ ಯುವಕರೇ ಹೆಚ್ಚು ಬಲಿಯಾದ ನೋವಿನ ಸಂಗತಿ ಎಲ್ಲರಿಗೂ ತಿಳಿದಿದೆ. ಮೊದಲು ಹೃದಯದ ಸಮಸ್ಯೆ 42 ಪ್ಲಸ್ ವಯಸ್ಸಿನವರಿಗೆ ಮಾತ್ರ ಬರುತ್ತಿತ್ತು. ಆದರೀಗ 32 ವಯಸ್ಸು ಮೀರಿದವರಿಗೆ ಕಾಡುತ್ತಿದೆ. ಜೀವನಶೈಲಿ ಬದಲಾಗಿರುವುದು ಇದಕ್ಕೆ ಪ್ರಮುಖ ಕಾರಣ. ಕೌಟುಂಬಿಕ ಜಂಜಾಟ, ಕೆಲಸದ ಅತಿಯಾದ ಒತ್ತಡ, ಆಹಾರಶೈಲಿ, ಶಿಸ್ತು ಇಲ್ಲದ ಜೀವನಶೈಲಿಯಿಂದ ರಕ್ತದೊತ್ತಡ, ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಎದುರಿಸಲು ಯುವಸಮೂಹ ಸಿದ್ಧರಾಗಬೇಕು. ಕೇವಲ ದೈಹಿಕವಾಗಿ ಶಕ್ತಿವಂತರಾದರೆ ಸಾಲದು. ಮಾನಸಿಕವಾಗಿಯೂ ಸಮರ್ಥವಾಗಿದ್ದರೆ ಬಲಿಷ್ಠ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು. ಪ್ರತಿನಿತ್ಯದ ದಿನಚರಿಯಲ್ಲಿ ಟೆನ್ನಿಸ್, ಜಿಮ್ ಮತ್ತು ಯೋಗ, ಕೆಲವೊಮ್ಮೆ ವಾಕಿಂಗ್, ಜಿಮ್ ಮತ್ತು ಯೋಗ ಅಳವಡಿಸಿಕೊಳ್ಳಬೇಕು. ಈ ಮೂಲಕ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ಎಲ್ಲ ಕ್ಷೇತ್ರದಲ್ಲಿನ ಪೈಪೋಟಿ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.

    (ಲೇಖಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts