ಬೆಂಗಳೂರು: ‘ದೇಶ ವಿಭಜನೆಗೆ ಎಡೆಮಾಡಿಕೊಡುವ ಆಂದೋಲನದಲ್ಲಿ ಪಾಲ್ಗೊಳ್ಳು ವವರು ದೇಶದ್ರೋಹಿಗಳಿಗೆ ಸಮ’ ಎಂಬ ಗಾಂಧೀಜಿ ಮಾತನ್ನು ರಾಜ್ಯಪಾಲ ವಿ.ಆರ್. ವಾಲಾ ನೆನಪಿಸಿದ್ದಾರೆ.
ಪುರಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಮತದಾರ ದಿನ ಸಮಾರಂಭದಲ್ಲಿ ಮಾತನಾಡಿದರು. ಆಂದೋಲನಗಳು ಯಾವಾಗಲೂ ದೇಶವನ್ನು ಸದೃಢಗೊಳಿಸುವ ಗುರಿ ಹೊಂದಿರಬೇಕು. ಆದರೆ ಕೆಲವರು ದೇಶವಿರೋಧಿ ಆಂದೋಲನಗಳನ್ನು ನಡೆಸು ತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗುತ್ತಿದೆ. ಜಾತಿ, ಧರ್ಮ, ಮತ, ಪಕ್ಷ, ವ್ಯಕ್ತಿಯನ್ನು ಬೆಂಬಲಿಸಲು ಆ ಬಗೆಯ ಆಂದೋಲನಗಳನ್ನು ಬೆಂಬಲಿಸಬಾರದು ಎಂದರು.
ಮತದಾರರ ಜಾಗೃತಿಗೆ ಹಲವು ಕ್ರಮ: ವಿಶ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವವಿರುವ ದೇಶ ನಮ್ಮದು. ಇಲ್ಲಿನ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ಮತದಾನ ಜಾತಿ ಮೂಡಿಸಲು ಕೇಂದ್ರ ಚುನಾವಣಾ ಆಯೋಗ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಾಲಾ- ಕಾಲೇಜುಗಳಲ್ಲಿ ಮತದಾನ ಕುರಿತ ಮಹತ್ವದ ಜಾಗೃತಿ, ಮತದಾನ ದಿನಗಳಂದು ಅಂಗವಿಕಲ ಮತದಾರರಿಗೆ ವಾಹನ ಸೌಲಭ್ಯ, ಸಖಿ ಪಿಂಕ್ ಮತಗಟ್ಟೆ, ಬುಡಕಟ್ಟು ಸ್ಥಳದಲ್ಲಿ ಮತಕೇಂದ್ರ ಆರಂಭಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ತಿಳಿಸಿದರು.
ಮೊದಲ ಬಾರಿ ಮತದಾನ ಮಾಡಲಿರುವ ಅಂಧರು, ಬುಡಕಟ್ಟು ವರ್ಗದ ಯುವಕರು, ಯುವತಿಯರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಬಿ.ಪ್ಯಾಕ್ಗೆ ಉತ್ತಮ ಎನ್ಜಿಒ ಪ್ರಶಸ್ತಿ
ಎಲೆಕ್ಷನ್ ಹಬ್ಬ ಶೀರ್ಷಿಕೆಯಲ್ಲಿ ಬಿ.ಪ್ಯಾಕ್ ಸಂಸ್ಥೆ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಕಾಲೇಜುಗಳು, ವಿವಿಧ ಕಂಪನಿಗಳಲ್ಲಿ ಜಾಗೃತಿ ಶಿಬಿರ, ಬೈಸಿಕಲ್ ಜಾಥಾ, ಬೈಕ್ ರ‍್ಯಾಲಿ ಹಾಗೂ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸಿತ್ತು. ಹಾಗಾಗಿ 2019-20 ಸಾಲಿನ ಚುನಾವಣೆ ಜಾಗೃತಿ ಮೂಡಿಸಿದ ರಾಜ್ಯದ ಉತ್ತಮ ಸರ್ಕಾರೇತರ ಸಂಸ್ಥೆ (ಎನ್ಜಿಒ) ಎಂಬ ಪ್ರಶಸ್ತಿಯನ್ನು ಅದಕ್ಕೆ ಪ್ರದಾನ ಮಾಡಲಾಯಿತು. ರಾಜ್ಯಪಾಲ ವಾಜುಬಾಯಿ ವಾಲಾ ಅವರಿಂದ ಬಿ.ಪ್ಯಾಕ್ ಸಂಸ್ಥೆ ಸಿಇಒ ರೇವತಿ ಅಶೋಕ್ ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯದಲ್ಲಿ ಪ್ರತಿ 1 ಸಾವಿರ ಪುರುಷರಿಗೆ 989 ಮಹಿಳೆಯರಿದ್ದಾರೆ. ಲಿಂಗಾನುಪಾತದಲ್ಲಿ ಮೊದಲಿನಿಂದಲೂ ವ್ಯತ್ಯಾಸವಿದೆ. ಆದರೆ 2014ರಲ್ಲಿ ಶೇ.57 ಇದ್ದ ಮಹಿಳೆಯರ ಮತದಾನ ಪ್ರಮಾಣ 2019ರಲ್ಲಿ ಶೇ.69ಕ್ಕೆ ಏರಿಕೆಯಾಗಿದೆ. ಮತದಾನದಲ್ಲಿ ಮಹಳೆಯರ ಪಾಲ್ಗೊಳ್ಳುವಿಕೆ ದೇಶದ ಅಭಿವೃದ್ಧಿಗೆ ಸೂಚಕ.
| ಸಂಜೀವ್ ಕುಮಾರ್, ರಾಜ್ಯ ಮುಖ್ಯಚುನಾವಣಾಧಿಕಾರಿ