ಹೊಳೆನರಸೀಪುರ : ಹೊಳೆನರಸೀಪುರ ಪುರಸಭೆಯ ಮಾಸಿಕ ಸಭೆ ಬುಧವಾರ ಅಧ್ಯಕ್ಷ ಕೆ.ಶ್ರೀಧರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪಟ್ಟಣದಲ್ಲಿ ಬೀದಿ ದೀಪ ನಿರ್ವಹಣೆ ಅಸಮರ್ಪಕವಾಗಿದ್ದು, ಈ ಬಾರಿ ಟೆಂಡರ್ ನೀಡದೆ ಪುರಸಭೆಯಿಂದಲೇ ನಿರ್ವಹಿಸೋಣ ಎಂದು ಸದಸ್ಯೆ ಜಿ.ಕೆ.ಸುಧಾನಳಿನಿ ಸಲಹೆ ನೀಡಿದರು. ನಾನು ಅಧ್ಯಕ್ಷೆ ಆಗಿದ್ದಾಗ ನಾನೇ ಬೀದಿ ದೀಪ ಖರೀದಿಸಿ ಹಾಕಿಸಿದ್ದೆ. ಅವುಗಳು ನಾಲೈದು ವರ್ಷ ಬಾಳಿಕೆ ಬಂದವು. ಈಗಲೂ ನಾವೇ ನಿರ್ವಹಿಸೋಣ. ಟೆಂಡರ್ ನೀಡುವುದು ಬೇಡ ಎಂದು ಸಲಹೆ ನೀಡಿದರು.

ಶಾಸಕ ಎಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿ, ನಿರ್ವಹಣೆ ಸರಿ ಇಲ್ಲದಿದ್ದರೆ ಅವರಿಗೆ ಟೆಂಡರ್ ನೀಡಬೇಡಿ. ಪುರಸಭೆಯಿಂದ ನಿರ್ವಹಿಸುವುದಾದರೆ ನೀವೇ ನಿರ್ವಹಿಸಿ ಎಂದು ಸಲಹೆ ನೀಡಿದರು.
ಕಾನೂನು ಬಿಟ್ಟು ಏನೂ ಮಾಡಬೇಡಿ. ಕಂದಾಯ, ಮಳಿಗೆಗಳ ಬಾಡಿಗೆಯನ್ನು ಕಟ್ಟು ನಿಟ್ಟಾಗಿ ವಸೂಲಿ ಮಾಡಿ. ಸೇತುವೆ ಮುಖ್ಯ ರಸ್ತೆ ಫ್ಲೈ ಓವರ್‌ಗಳ ಮೇಲೆ ಬೆಳೆದಿರುವ ಗಿಡ,ಗಂಟಿಗಳನ್ನು ತೆಗೆದು ಸ್ವಚ್ಛಮಾಡಿ. ಪಟ್ಟಣದ 5 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಯನ್ನು ಸೈಟ್ ಗಳನ್ನಾಗಿ ಪರಿವರ್ತಿಸಬೇಡಿ. ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳನ್ನು ತೆಗೆದುಕೊಂಡಿರುವವರಿಗೆ ಬೇಗ ಖಾತೆ, ಇ-ಸ್ವತ್ತು ಮಾಡಿಕೊಡಿ ಎಂದರು.
ಕಾಂಗ್ರೆಸ್ ಸದಸ್ಯ ಭೈರಶಟ್ಟಿ ಮಾತನಾಡಿ, ಪಟ್ಟಣದ ಕಾಳಿಕಾಂಬ ದೇವಾಲಯ ಬೀದಿಯಲ್ಲಿ ಕೆಲವರು ಚರಂಡಿಗೆ ಒಳಚರಂಡಿ ಪೈಪ್‌ಗಳ ಸಂಪರ್ಕ ನೀಡಿದ್ದಾರೆ ಹಾಗೂ ಕಾಳಿಕಾಂಬ ದೇವಾಲಯ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದೆ ಎಂದು ಗಮನ ಸೆಳೆದಾಗ, ರೇವಣ್ಣ, ಚರಂಡಿಗೆ ನೀಡಿರುವ ಸಂಪರ್ಕ ತೆಗೆಸಿ ಒಳಚರಂಡಿಗೆ ನೀಡಿ. ಕಾಳಿಕಾಂಬ ದೇವಾಲಯ ರಸ್ತೆ ಡಾಂಬರೀಕರಣಕ್ಕೆ ಈಗ ಹಣಕಾಸಿನ ಕೊರತೆ ಇದೆ. ಗುಂಡಿಗಳನ್ನು ಮುಚ್ಚಿಸಿಕೊಡಿ ಎಂದು ತಿಳಿಸಿದರು.
ಮುಖ್ಯಾಧಿಕಾರಿ ನಾಗೇಂದ್ರಕುಮಾರ್ ಮಾತನಾಡಿ, ತಾಲೂಕು ಪತ್ರಕರ್ತರ ಸಂಘದದಿಂದ ಸಂಘಕ್ಕೆ ಒಂದು ನಿವೇಶನ ನೀಡಿ ಎಂದು ಅರ್ಜಿ ನೀಡಿದ್ದಾರೆ ಎಂದಾಗ ಪತ್ರಕರ್ತರ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಷ್ಟು ನಿವೇಶನ ನೀಡಲು ಇಂದಿನ ನಡವಳಿಯಲ್ಲಿ ಸೇರಿಸಿ ಅನುಮೋದಿಸಿ ಎಂದು ರೇವಣ್ಣ ತಿಳಿಸಿದರು.
ಅಧ್ಯಕ್ಷ ಕೆ.ಶ್ರೀಧರ್ ಮಾತನಾಡಿ, ನನ್ನ ಹಾಗೂ ನಮ್ಮ ಸದಸ್ಯರ ಮೇಲೆ ಶಾಸಕರು ನಂಬಿಕೆ ಇಟ್ಟಿದ್ದಾರೆ. ಅವರ ನಂಬಿಕೆಯನ್ನು ಹುಸಿ ಮಾಡದೆ ನಾವೆಲ್ಲರು ಉತ್ತಮ ಆಡಳಿತ ನೀಡಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರ ಘನತೆಯನ್ನು ಹೆಚ್ಚಿಸೋಣ ಎಂದರು.
ಪುರಸಭೆಯ ಸದಸ್ಯರು ಪುರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪುರಸಭೆಯ ರಮೇಶ್ ವಿಷಯಗಳನ್ನು ಮಂಡಿಸಿದರು.