More

  ಸಂಪಾದಕೀಯ: ಕಡೆಗಣನೆ ಬೇಡ

  ಕನ್ನಡ ನೆಲ-ಜಲ, ಭಾಷೆ ಹಾಗೂ ಕನ್ನಡಿಗರ ಹಿತರಕ್ಷಣೆಗೆ ಜಾರಿಯಾಗಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದ ಹೊರತಾಗಿಯೂ ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ಉದ್ಯೋಗದ ಹೊರತಾಗಿ ಇತರೆಡೆಗಳಲ್ಲಿ ಉದ್ಯೋಗ ಗಿಟ್ಟಿಸುವುದು ಸವಾಲಾಗಿಯೇ ಪರಿಣಮಿಸಿದೆ. ಅದರಲ್ಲೂ ಖಾಸಗಿ ಉದ್ಯಮಗಳಲ್ಲಿ ಉದ್ಯೋಗಗಳು ಪರರಾಜ್ಯದವರ ಪಾಲಾಗುತ್ತಿರುವ ಪರಿಸ್ಥಿತಿ ಇಂದಿಗೂ ಸುಧಾರಣೆಯಾಗದಿರುವುದು ವಿಪರ್ಯಾಸವೂ ಹೌದು. ಸ್ಥಳೀಯರಿಗೆ ಕೆಲಸ ನೀಡಬೇಕಾದ ಅಗತ್ಯವನ್ನು ಹಲವು ಕೋರ್ಟ್ ತೀರ್ಪಗಳು ಉಲ್ಲೇಖಿಸುತ್ತಲೇ ಬಂದಿವೆ.

  ಅಂತೆಯೇ, ಬೆಂಗಳೂರು ವಿಮಾಣ ನಿಲ್ದಾಣದ ಬಳಿ ತನ್ನ ವಹಿವಾಟು ವಿಸ್ತರಣೆಗೆ ರಾಜ್ಯ ಸರ್ಕಾರದಿಂದ ಭೂಮಿ ಪಡೆದು ಕನ್ನಡಿಗರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುತ್ತಿದ್ದ ಬ್ಯಾಂಕೊಂದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಾತ್ರವಲ್ಲ, ಇದೇ ಕಾರಣಕ್ಕೆ ಭೂಮಿ ಹಿಂಪಡೆದಿದ್ದ ಕ್ರಮದಲ್ಲಿ ಯಥಾಸ್ಥಿತಿಗೆ ಆದೇಶಿಸಿದೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡದ ಉದ್ಧಟತನವನ್ನು ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆ. ಇಷ್ಟಕ್ಕೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಲ್ಲಿ ಹೇಳಲಾಗಿರುವಂತೆ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವುದಕ್ಕಾಗಿ ಗೊತ್ತುಪಡಿಸಿದ ರಾಜ್ಯದ ಕೈಗಾರಿಕಾ ನೀತಿಯನ್ನು ಪಾಲಿಸುವುದಕ್ಕೆ ಬದ್ಧವಾದ ಯಾವುದೇ ಉದ್ಯಮವು ತನ್ನ ಬಾಧ್ಯತೆಯನ್ನು ಪೂರೈಸಲು ವಿಫಲವಾದಲ್ಲಿ ತನ್ನ ಸೌಲಭ್ಯಗಳನ್ನು ಕಳೆದುಕೊಳ್ಳಲಿದೆ.

  ಮುಖ್ಯವಾಗಿ ರಿಯಾಯಿತಿ, ತೆರಿಗೆ ವಿನಾಯ್ತಿ, ತೆರಿಗೆ ಮುಂದೂಡಿಕೆ ಅಥವಾ ಯಾವುದೇ ರೀತಿಯ ಸಹಾಯಾನುದಾನವನ್ನು ಕಳೆದುಕೊಳ್ಳಲಿದೆ. ಪಡೆದಿರುವ ಸಹಾಯವನ್ನು ವಸೂಲು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. ಈ ಬಗ್ಗೆ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಗಳು ಈ ನಿಬಂಧನೆಗಳ ಪಾಲನೆಯನ್ನು ಖಾತರಿಪಡಿಸಿಕೊಳ್ಳಬೇಕೆಂದು ಕೂಡ ಹೇಳಿವೆ. ಇಷ್ಟೇ ಅಲ್ಲ, ಆಯಾ ಸಂಸ್ಥೆಗಳು ಅಪ್ರೆಂಟೀಸ್​ಶಿಪ್ ಅಥವಾ ಉದ್ಯೋಗ ತರಬೇತಿ ನೀಡುವಲ್ಲೂ ಕನ್ನಡಿಗರಿಗೆ ಆದ್ಯತೆಯನ್ನು ನೀಡಬೇಕೆಂದು ಸ್ಪಷ್ಟಪಡಿಸಲಾಗಿದೆ. ಕನ್ನಡಿಗರ ಉದ್ಯೋಗಕ್ಕಾಗಿಯೇ ಉದ್ಯೋಗ ಪೋರ್ಟಲ್ ರಚಿಸುವ ಹೊಣೆಗಾರಿಕೆಯನ್ನು ಇದೇ ಅಧಿನಿಯಮದಲ್ಲಿ ನಿಗದಿಪಡಿಸಲಾಗಿದೆ.

  ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಇನ್ನೂ ಕಾರ್ಯೋನ್ಮುಖವಾದಂತಿಲ್ಲ. ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲದೆ, ಸಾರ್ವಜನಿಕ ಉದ್ದಿಮೆಗಳು, ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಕರ್ನಾಟಕದಲ್ಲಿನ ನೇಮಕಾತಿ ಸಂಸ್ಥೆಗಳಿಗಾಗಿ ಉದ್ಯೋಗ ಪೋರ್ಟಲ್ ಸ್ಥಾಪಿಸಬೇಕಿದೆ. ಉದ್ಯೋಗಕ್ಕಾಗಿ ಕನ್ನಡ ಜ್ಞಾನದಸಹಿತ ಭರ್ತಿ ಮಾಡಬೇಕಾದ ಸ್ಥಾನಗಳು ಹಾಗೂ ಉದ್ಯೋಗದ ಮಾಹಿತಿಯನ್ನು ಪೋರ್ಟಲ್​ನಲ್ಲಿ ನೀಡಬೇಕು ಎಂದು ಹೇಳಿದೆ. ಈ ವ್ಯವಸ್ಥೆ ಜಾರಿಯಾದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿದ ಹಾಗೂ ಉದ್ಯೋಗ ನೀಡದೇ ವಂಚಿಸುತ್ತಿರುವ ಸಂಸ್ಥೆಗಳ ಬಣ್ಣ ಬಯಲಾಗಲಿದೆ. ಇದೇ ಅಧಿನಿಯಮದಲ್ಲಿ ಹೇಳಲಾದಂತೆ ಅಂಥ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಾಗಲಿದೆ. ಆದರೆ, ಬದುಕು ನೀಡುವ ಉದ್ಯೋಗದ ವಿಚಾರವು ನಾಮಫಲಕದ ಭರಾಟೆಯಲ್ಲಿ ಕಳೆದು ಹೋಗಿದೆ. ಹೈಕೋರ್ಟ್ ವ್ಯಾಖ್ಯಾನದ ಬಳಿಕವಾದರೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನುವಷ್ಟೇ ಕನ್ನಡಿಗರಿಗೆ ಉದ್ಯೋಗವೂ ಮುಖ್ಯ ಎಂಬುದನ್ನು ಕನ್ನಡ ನೆಲದಲ್ಲಿ ನೆಲೆ ಕಾಣುತ್ತಿರುವ ಕಂಪನಿಗಳಿಗೆ ಮನದಟ್ಟು ಮಾಡಬೇಕಿದೆ.

  ಆಂಧ್ರ ಚುನಾವಣೆ: ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ…?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts