More

    ಉಕ್ರೇನಿಯನ್ ವಿಮಾನ ದುರಂತ ಪ್ರಕರಣ: ಪತ್ನಿಯ ಮಾತು ಕೇಳಿದ್ದರೆ ಬಹುಶಃ ಪೈಲಟ್​ ಬದುಕುಳಿಯುತ್ತಿದ್ದರೇನೋ…

    ಟೆಹರಾನ್​: ಇರಾನ್​ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿಯ ಸಂದರ್ಭದಲ್ಲಿ ವಿಮಾನ ಹಾರಾಟ ನಡೆಸದಂತೆ ನಾನು ಮೊದಲೇ ಹೇಳಿದ್ದೆ ಎಂದು ಉಕ್ರೇನಿಯನ್​ ವಿಮಾನ ಪತನದಲ್ಲಿ ಸಾವಿಗೀಡಾದ ಪೈಲಟ್ ಪತ್ನಿ ತಿಳಿಸಿದ್ದಾರೆ.​

    ನಾನು ವಿಮಾನ ಹಾರಾಟ ನಡೆಸದಂತೆ ಕೇಳಿಕೊಂಡೆ. ಆದರೆ ಹೋಗಲೇಬೇಕಾಗಿದೆ. ಒಂದು ವೇಳೆ ನಾನೇನಾದರೂ ಇಲ್ಲವಾದರೆ, ಯಾರೂ ಕೂಡ ಇರಲಾರರು. ಚಿಂತಿಸಬೇಡ ವೇಳಾಪಟ್ಟಿಯ ಪ್ರಕಾರ ನಾನು ಹೋಗಲೇಬೇಕಾಗಿದೆ ಎಂದು ಹೇಳಿದರು ಎಂದು ಮೃತ ಪೈಲಟ್​ ವೊಲೊಡೈಮೈರ್,​ ಪತ್ನಿ ಕ್ಯಾತರಿನಾ ಗ್ಯಾಪೊನೆಂಕೊ ಮಾಧ್ಯಮಗಳಿಗೆ ತಿಳಿಸಿದರು.

    11 ಸಾವಿರ ಗಂಟೆಗಳ ವಿಮಾನ ಹಾರಾಟ ಅನುಭವ ಹೊಂದಿರುವ ಪೈಲಟ್ ವೊಲೊಡೈಮೈರ್​ ಜನವರಿ 7ರಂದು ಉಕ್ರೇನ್​ನಿಂದ ಇರಾನ್​ಗೆ ಮರಳಿ ಮತ್ತೆ ಜನವರಿ 8 ಉಕ್ರೇನ್​ಗೆ ಮರಳುವಾಗ ವಿಮಾನ ದುರಂತ ಸಂಭವಿಸಿದೆ. ಇರಾನ್​-ಅಮೆರಿಕ ನಡುವಿನ ವಿಷಮ ಸ್ಥಿತಿಯಲ್ಲೂ ವಿಮಾನ ಹಾರಾಟ ನಡೆಸಲು ಅನುಮತಿ ಏಕೆ ಕೊಟ್ಟರು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಗ್ಯಾಪೊನೆಂಕೊ ಬೇಸರ ವ್ಯಕ್ತಪಡಿಸಿದ್ದಾರೆ.

    ದುಃಖಕರ ಸಂಗತಿಯೆಂದರೆ ಪೈಲಟ್​ ವೊಲೊಡೈಮೈರ್​ಗೆ ಎರಡು ವರ್ಷದ ಮಗು ಕೂಡ ಇದೆ. ಮಗು ಮತ್ತು ಪತ್ನಿಯನ್ನು ಬಿಟ್ಟು ದುರಂತ ಸಾವಿಗೀಡಾಗಿದ್ದಾರೆ.

    ಏನಿದು ಘಟನೆ?
    ಬೋಯಿಂಗ್ 737 ಸರಣಿಯ ಉಕ್ರೇನಿಯನ್​ ವಿಮಾನ ಬುಧವಾರ ಬೆಳಗ್ಗೆ ಇರಾನ್​ನ ತೆಹ್ರಾನ್​ ಇಮಾಮ್​ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್​ನ ಕೈವ್‌ ಬೋರಿಸ್‌ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಏರ್​ಪೋರ್ಟ್​ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 176 ಮಂದಿ ದಾರುಣಾವಾಗಿ ಸಾವಿಗೀಡಾಗಿದ್ದರು.

    ಪ್ರಾರಂಭದಲ್ಲಿ ತಾಂತ್ರಿಕ ದೋಷದಿಂದಾಗಿದೆ ಎಂದು ಉಕ್ರೇನ್​ ಮತ್ತು ಇರಾನ್​ ಅಧಿಕಾರಿಗಳು ವಾದಿಸಿದ್ದರು. ಆದರೆ, ಪತನದ ಸ್ಥಳದಲ್ಲಿ ದೊರೆತ ಕ್ಷಿಪಣಿ ಅವಶೇಷದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿತು. ಅಲ್ಲದೆ, ವಿಮಾನ ಟೇಕಾಫ್​ ಆಗುವ ಮುನ್ನವೇ ಯುಎಸ್​ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್​ ರಾಕೆಟ್​ ದಾಳಿ ನಡೆಸಿದ್ದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

    ಇದರೊಂದಿಗೆ ಅನೇಕ ಗುಪ್ತಚರ ವರದಿಗಳು ಕೂಡ ತಾಂತ್ರಿಕ ದೋಷವೆಂಬುದು ಕೇವಲ ವಿವರಣೆಯಷ್ಟೇ, ಪತನಕ್ಕೆ ಕಾರಣ ರಾಕೆಟ್​ ದಾಳಿ ಎಂದು ಹೇಳಿದ್ದವು. ಇದರ ಬೆನ್ನಲ್ಲೇ ಉಕ್ರೇನ್​ ಕೂಡ ವಿಮಾನದ ಮೇಲೆ ಯಾರೋ ದಾಳಿ ಮಾಡಿದ್ದಾರೆ ಎಂದು ಒಪ್ಪಿಕೊಂಡಿತ್ತು. ಅಲ್ಲದೆ, ತನಿಖೆಗೆ ಆದೇಶಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಕೂಡ ಇರಾನ್​ ಮೇಲೆ ನೇರ ಆರೋಪ ಮಾಡಿ, ತನಿಖೆಗೆ ಕೈಜೋಡಿಸುವುದಾಗಿ ತಿಳಿಸಿತ್ತು. ಆದರೆ, ಆರಂಭದಿಂದ ಇರಾನ್​ ಮಾತ್ರ ಯಾವುದನ್ನು ಒಪ್ಪಿಕೊಳ್ಳದೇ ತಿರಸ್ಕರಿಸಿತ್ತಾ ಬಂದಿತ್ತು. ಇದೀಗ ವಿಮಾನ ಪತನಕ್ಕೆ ತನ್ನ ಸೇನಾ ದಾಳಿಯೇ ಕಾರಣ ಎಂದು ಒಪ್ಪಿಕೊಂಡಿದೆ.​

    ವಿಮಾನದಲ್ಲಿದ್ದ ಒಟ್ಟು 176 ಜನರಲ್ಲಿ ವಿವಿಧ ದೇಶದ 167 ಪ್ರಯಾಣಿಕರು ಹಾಗೂ 9 ಸಿಬ್ಬಂದಿ ಇದ್ದರು. ಎಲ್ಲರೂ ಮೃತರಾಗಿದ್ದು, ವಿಮಾನದಲ್ಲಿ 82 ಇರಾನಿಯನ್ಸ್​, 63 ಕೆನಡಿಯನ್ಸ್​ ಹಾಗೂ 11 ಉಕ್ರೇನಿಯನ್ಸ್​ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts