More

    ನೀಚನಿಗೆ ಉಪಕಾರ ಮಾಡದಿರಿ: ಆ ಕ್ಷಣ ಅಂಕಣ..

    ನೀಚನಿಗೆ ಉಪಕಾರ ಮಾಡದಿರಿ: ಆ ಕ್ಷಣ ಅಂಕಣ..ಮೇಲ್ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ 19 ವರ್ಷದ ಬಬಿತಾ ನಗರದ ಮಹಿಳಾ ಕಾಲೇಜೊಂದರಲ್ಲಿ ಬಿಎ ಕಲಿಯುತ್ತಿದ್ದಳು. ದೂರದೂರಲ್ಲಿ ಮಾತಾಪಿತರಿದ್ದ ಕಾರಣ ಆಕೆ ಕಾಲೇಜಿನ ಹಾಸ್ಟೆಲ್​ಗೆ ಸೇರಿದ್ದಳು. ಒಂದು ದಿನ ಆಕೆ ಗೆಳತಿಯರೊಂದಿಗೆ ಸಿನಿಮಾ ನೋಡಲು ಹೋದಾಗ ಅವಳ ಪಕ್ಕದಲ್ಲಿ ವಿಕ್ರಂ ಎನ್ನುವ ಯುವಕ ಕುಳಿತ. ಸಿನಿಮಾದ ಇಂಟರ್​ವೆಲ್​ನಲ್ಲಿ ಆತ ಬಬಿತಾಳೊಂದಿಗೆ ಪರಿಚಯ ಮಾಡಿಕೊಂಡ. ತನ್ನ ತಂದೆ ದೊಡ್ಡ ಬಟ್ಟೆ ಅಂಗಡಿಯ ಮಾಲೀಕರಾಗಿದ್ದು ತಾನು ಅವರ ಮೂರು ಮಕ್ಕಳಲ್ಲಿ ಒಬ್ಬನಾಗಿರುವುದಾಗಿ ಹೇಳಿದ ವಿಕ್ರಂ ತಾನು ಪಿಯುಸಿ ಓದಿದ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿ ತಂದೆಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿರುವುದಾಗಿ ತಿಳಿಸಿದ. ವಿಕ್ರಂ ನೋಡಲು ಸುಂದರನಾಗಿದ್ದ ಕಾರಣ ಬಬಿತಾ ಅವನತ್ತ ಆಕರ್ಷಿತಳಾಗಿ ಅವನ ಸ್ನೇಹವನ್ನು ಸ್ವೀಕರಿಸಿದಳು. ಮಾರನೆಯ ದಿನದಿಂದಲೇ ವಿಕ್ರಂ ಬಬಿತಾಳ ಕಾಲೇಜಿಗೆ ಬಂದು ಹೋಗುತ್ತಾ ಆಕೆಯೊಡನೆ ಸಮಯ ಕಳೆಯತೊಡಗಿದ.

    ಕಾಲಕ್ರಮೇಣ ವಿಕ್ರಂ ಮತ್ತು ಬಬಿತಾ ಲಗ್ನವಾಗಲು ತೀರ್ವನಿಸಿದರು. ಒಂದು ವೀಕೆಂಡ್ ಇಬ್ಬರೂ ಪಿಕ್ನಿಕ್​ಗೆಂದು ವಿಕ್ರಂನ ಬೈಕಿನಲ್ಲಿ ನಗರದ ಹೊರವಲಯದ ರಿಸಾರ್ಟ್​ಗೆ ಹೋದರು. ಅಲ್ಲಿ ರೂಮೊಂದನ್ನು ಬಾಡಿಗೆಗೆ ಪಡೆದು ರಜಾದಿನಗಳನ್ನು ಪತಿ-ಪತ್ನಿಯರಂತೆಯೇ ಕಳೆದರು. ಇದಾದ ಕೆಲವು ವಾರಗಳ ಬಳಿಕ ಬಬಿತಾಳ ಅಂತಿಮ ವರ್ಷದ ಪರೀಕ್ಷೆಗಳು ಬಂದವು. ಆಗ ಬಬಿತಾ ವಿಕ್ರಂನೊಡನೆ ಮದುವೆಯ ಪ್ರಸ್ತಾಪವನ್ನಿಟ್ಟಳು. ಆತ ತನ್ನ ಅಣ್ಣನ ಲಗ್ನವಾದ ನಂತರ ಅವಳನ್ನು ಲಗ್ನವಾಗುವೆನೆಂದ. ಪರೀಕ್ಷೆಗಳು ಮುಗಿದು ಬಬಿತಾಳ ಹಾಸ್ಟೆಲ್ ಮುಚ್ಚಿದಾಗ ಆಕೆ ಅನಿವಾರ್ಯವಾಗಿ ತನ್ನ ಊರಿಗೆ ವಾಪಸಾದಳು. ಇಬ್ಬರೂ ಫೋನ್ ಮೂಲಕ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದರು.

    ಎರಡು ತಿಂಗಳ ನಂತರ ಬಬಿತಾಗೆ ಮುಟ್ಟು ನಿಂತಿತು. ಆಕೆ ತಾನು ಗರ್ಭಿಣಿಯಾಗಿದ್ದೇನೋ ಇಲ್ಲವೋ ಎಂದು ತಿಳಿಯಲು ಸ್ವಯಂ ಪರೀಕ್ಷೆ ಮಾಡಿಕೊಂಡಳು. ಗರ್ಭಿಣಿಯಾಗಿರುವುದು ಗೊತ್ತಾದಾಗ ಗಾಬರಿಯಾಗಿ ವಿಕ್ರಂ ಜತೆಗಿನ ಸಂಬಂಧವನ್ನು ತನ್ನ ಮಾತಾಪಿತರಿಗೆ ಹೇಳಿದಳು. ಅವರು ಬಬಿತಾಳ ಲಗ್ನವನ್ನು ವಿಕ್ರಂನೊಡನೆಯೇ ಮಾಡುವುದಾಗಿ ನಿರ್ಧರಿಸಿ ವಿಕ್ರಂನ ಮನೆಯವರೊಡನೆ ಮಾತುಕತೆಗೆ ಬಂದರು. ವಿಕ್ರಂನ ಕುಟುಂಬದವರು ಈ ಸಂಬಂಧಕ್ಕೆ ಒಪ್ಪದೆ ಬಬಿತಾಳ ಚಾರಿತ್ರ್ಯದ ಮೇಲೆಯೇ ಆರೋಪ ಮಾಡಿದರು.

    ಮುಂದೇನೂ ಮಾಡಲು ತೋಚದ ಬಬಿತಾಳ ಮಾತಾಪಿತರು ಅವಳಿಗೆ ಗರ್ಭಪಾತ ಮಾಡಿಸಲು ನಿರ್ಧರಿಸಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಗರ್ಭಿಣಿ ಹೇಗಾದಳೆಂಬ ವಿವರಗಳನ್ನು ವೈದ್ಯರು ಕೇಳಿದಾಗ ಬಬಿತಾ ನಡೆದ ವಿಷಯವನ್ನು ತಿಳಿಸಿದಳು. ಅವರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸೂಚಿಸಿದರು. ಅದರಂತೆಯೇ ಬಬಿತಾ ತಂದೆಯೊಡನೆ ಪೊಲೀಸ್ ಠಾಣೆಗೆ ಹೋದಳು. ವಿಕ್ರಂ ತನ್ನ ಇಚ್ಛೆಗೆ ವಿರುದ್ಧವಾಗಿ ರೇಪ್ ಮಾಡಿದ್ದಾಗಿ ದೂರನ್ನು ನೀಡಿದಳು. ಅತ್ಯಾಚಾರದ ಪ್ರಕರಣ ದಾಖಲಾಯಿತು. ಮುಂದಿನ ತನಿಖೆಯಲ್ಲಿ ಪೊಲೀಸರು ವಿಕ್ರಂನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದರು.

    ಏತನ್ಮಧ್ಯೆ ಬಬಿತಾಗೆ ಗರ್ಭಪಾತವಾಯಿತು. ಆರು ತಿಂಗಳ ನಂತರ ರೇಪ್ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಬಬಿತಾ ವಿಕ್ರಂನ ವಿರುದ್ಧ ಸಾಕ್ಷ್ಯ ನೀಡಿದಳು. ವಿಚಾರಣೆ ಮುಗಿದ ನಂತರ ವಿಕ್ರಂನನ್ನು ತಪ್ಪಿತಸ್ಥನೆಂದು ನ್ಯಾಯಾಧೀಶರು ತೀರ್ವನಿಸಿದರು. ಆನಂತರ ಅವರು ವಿಕ್ರಂನನ್ನು ಉದ್ದೇಶಿಸಿ, ‘ನಿನ್ನ ಅಪರಾಧ ಸಾಬೀತಾಗಿದ್ದು ನಿನಗೆ ಕಡಿಮೆಯೆಂದರೆ ಹತ್ತು ವರ್ಷಗಳ ಕಾರಾಗೃಹ ವಾಸವನ್ನು ವಿಧಿಸಲೇಬೇಕಾಗಿರುತ್ತದೆ. ನೀನು ಏನು ಹೇಳುವೆ?’ ಎಂದು ಪ್ರಶ್ನಿಸಿದರು. ಆತ ತನಗೆ ಬಬಿತಾಳ ಮೇಲೆ ನಿಜವಾದ ಪ್ರೀತಿಯಿದ್ದು ಅವಳನ್ನು ಲಗ್ನವಾಗಲು ಇಚ್ಛಿಸಿದ್ದೆನೆಂದು ಹೇಳಿದ. ತನ್ನ ತಂದೆತಾಯಂದಿರು ಒಪ್ಪದಿದ್ದಾಗ ತಾನು ಅವಳನ್ನು ಬಿಡಬೇಕಾಯಿತು ಎಂದ. ಆಗ ನ್ಯಾಯಾಧೀಶರು, ‘ಒಂದು ವೇಳೆ ನೀನು ಅವಳನ್ನು ಲಗ್ನವಾಗುವುದಾರೆ ನಿನ್ನ ಶಿಕ್ಷೆಯನ್ನು ಕಡಿಮೆ ಮಾಡುವೆ’ ಎಂದರು. ಇದಕ್ಕೆ ಕೂಡಲೇ ಒಪ್ಪಿದ ವಿಕ್ರಂ ತನ್ನನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ಕೂಡಲೇ ಬಬಿತಾಳನ್ನು ಲಗ್ನವಾಗುವುದಾಗಿ ತಿಳಿಸಿದ. ಈ ಬಗ್ಗೆ ಫಿರ್ಯಾದಿ ಮತ್ತು ಆರೋಪಿತನ ಕುಟುಂಬಗಳು ಸಮಾಲೋಚಿಸಿ ಮುಂದಿನ ದಿನಾಂಕದಲ್ಲಿ ನ್ಯಾಯಾಲಯಕ್ಕೆ ತಿಳಿಸಬೇಕೆಂದು ಆದೇಶಿಸಿದ ನ್ಯಾಯಾಧೀಶರು ತೀರ್ಪನ್ನು ಮುಂದೂಡಿದರು.

    ಮುಂದಿನ ದಿನಾಂಕದಂದು ವಿಕ್ರಂನ ವಕೀಲರು ಲಗ್ನಕ್ಕಾಗಿ ಎರಡೂ ಕುಟುಂಬಗಳು ಒಪ್ಪಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಯು ಫಿರ್ಯಾದಿಯನ್ನು ರಿಜಿಸ್ಟರ್ಡ್ ಲಗ್ನವಾಗಿ ಸಂಬಂಧಿಸಿದ ದಾಖಲೆಯನ್ನು ತನ್ನ ಮುಂದೆ ಹಾಜರು ಮಾಡಿದ ನಂತರ ಪ್ರಕರಣದ ತೀರ್ಪನ್ನು ನೀಡುವುದಾಗಿ ನ್ಯಾಯಾಧೀಶರು ತಿಳಿಸಿ ಬಬಿತಾಳನ್ನು ಲಗ್ನವಾಗಲು ವಿಕ್ರಂಗೆ ಜಾಮೀನು ನೀಡಿದರು. ಅದರಂತೆ ವಿಕ್ರಂ ಕೆಲದಿನಗಳ ನಂತರ ಬಬಿತಾಳನ್ನು ಲಗ್ನವಾದ. ಈ ದಾಖಲೆಯನ್ನು ತೋರಿಸಿದ ನಂತರ ನ್ಯಾಯಾಧೀಶರು ಆರೋಪಿಯು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದ ಸಮಯವನ್ನೇ ಆತನ ಶಿಕ್ಷೆಯೆಂದು ಪರಿಗಣಿಸಿ ವಿಕ್ರಂನನ್ನು ಬಿಡುಗಡೆ ಮಾಡಿದರು.

    ಜೈಲಿನಿಂದ ಬಿಡುಗಡೆಯಾದ ನಂತರ ವಿಕ್ರಂ ತನ್ನ ತಂದೆಯ ಸೂಚನೆಯಂತೆ ಬೇರೆ ಮನೆ ಮಾಡಿ ಬಬಿತಾಳೊಡನೆ ಸಂಸಾರ ಮಾಡತೊಡಗಿದ. ಬಬಿತಾಗೆ ಮನೆಕೆಲಸ ಬಾರದ ಕಾರಣ ಅವಳ ತಾಯಿ ಸುನಂದಾ ಮಗಳ ಸಹಾಯಕ್ಕಾಗಿ ಅಳಿಯನ ಮನೆಗೆ ಹೋಗಿ ಅವರೊಡನೆ ವಾಸಿಸತೊಡಗಿದಳು. ಇದು ವಿಕ್ರಂನಿಗೆ ಸರಿಬರಲಿಲ್ಲ. ಪ್ರತಿದಿನವೂ ಅತ್ತೆ- ಅಳಿಯನ ಮಧ್ಯೆ ಜಗಳಗಳಾಗುತ್ತಿದ್ದವು. ಬಬಿತಾಗೆ ಇದು ಇಷ್ಟವಾಗದಿದ್ದಾಗ ಗಂಡ- ಹೆಂಡಿರ ನಡುವೆ ವಿರಸವುಂಟಾಯಿತು.

    ಸುನಂದಾ ತನ್ನ ಮನೆಗೆ ವಾಪಸಾದ ನಂತರ ಇನ್ನೊಂದು ಸಮಸ್ಯೆ ಎದುರಾಯಿತು. ಬಬಿತಾ ಅಡುಗೆ ಕೆಲಸವನ್ನು ಕಲಿತಿರದಿದ್ದ ಕಾರಣ ಪ್ರತಿದಿನವೂ ಹೊರಗಿನಿಂದ ಊಟ ತಿಂಡಿ ತರಿಸಬೇಕಾಗಿತ್ತು. ವಿಕ್ರಂ ತನ್ನ ತಂದೆ ಪ್ರತಿತಿಂಗಳೂ ಕೊಡುತ್ತಿದ್ದ ಹಣದ ಮೇಲೆಯೇ ಅವಲಂಬಿತನಾಗಿದ್ದರಿಂದ ಆಹಾರದ ಮೇಲಿನ ಖರ್ಚು ಅವನಿಗೆ ಹೊರೆಯಾಗತೊಡಗಿತು. ಇದರಿಂದ ಆತ ಬಬಿತಾಳ ಮೇಲೆ ಇನ್ನಷ್ಟು ಸಿಟ್ಟಾಗಿ ಅವಳಿಂದ ದೂರವಾಗಬೇಕೆಂದು ಬಯಸಿದ. ಒಂದು ದಿನ ವಿಕ್ರಂ ಬಬಿತಾಳನ್ನುದ್ದೇಶಿಸಿ, ‘ನಾವಿಬ್ಬರೂ ಇನ್ನು ಮುಂದಾದರೂ ಅನ್ಯೋನ್ಯವಾಗಿ ಬಾಳೋಣ. ಒಂದು ವಾರದ ಕಾಲ ಇಬ್ಬರೂ ಒಂದು ಸುಂದರ ಪ್ರವಾಸಿ ತಾಣಕ್ಕೆ ಹೋಗಿ ಅಲ್ಲಿ ನಮ್ಮ ಮನಸ್ಸುಗಳನ್ನು ಹಗುರ ಮಾಡಿಕೊಂಡು ಬರೋಣ’ ಎಂದ. ಬಬಿತಾ ಒಪ್ಪಿದಳು. ಮರುವಾರವೇ ಇಬ್ಬರೂ ಪ್ರವಾಸಿ ತಾಣವೊಂದಕ್ಕೆ ಮೋಟರ್ ಸೈಕಲ್​ನಲ್ಲಿ ಹೊರಟರು.

    250 ಕಿ.ಮೀ ದೂರವಿದ್ದ ಆ ಊರಿಗೆ ಹೋಗುವ ಹಾದಿಯಲ್ಲಿ ಬೆಟ್ಟಗುಡ್ಡಗಳನ್ನು ಕಂಡ ವಿಕ್ರಂ, ‘ಇಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಆನಂತರ ಮುಂದೆ ಸಾಗೋಣ’ ಎಂದು ಹೇಳಿ ವಾಹನವನ್ನು ನಿಲ್ಲಿಸಿದ. ಇಬ್ಬರೂ ನಡೆದುಕೊಂಡು ಬೆಟ್ಟಗಳನ್ನು ಹತ್ತಿರ ಹೋದಾಗ ಅಲ್ಲಿ ಒಂದು ಗುಹೆ ಕಂಡಿತು. ಕೂಡಲೇ ವಿಕ್ರಂ, ‘ಇಲ್ಲಿ ಯಾರೂ ಜನರಿಲ್ಲ. ನಾವು ಈ ಗುಹೆಯಲ್ಲಿ ಸೆಕ್ಸ್ ಮಾಡೋಣ, ಬಹಳ ಥ್ರಿಲ್ಲಿಂಗ್ ಆಗಿರುತ್ತದೆ’ ಎಂದು ಬಬಿತಾಳ ಮನವೊಲಿಸಿ ಗುಹೆಯಲ್ಲಿ ಅವಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ. ನಂತರ ಆತ ಏಕಾಏಕಿ ಬಬಿತಾ ಧರಿಸಿದ್ದ ವೇಲ್ ಅನ್ನು ತೆಗೆದುಕೊಂಡು ಅದನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ. ಅವಳ ಶವವನ್ನು ಗುಹೆಯ ಮೂಲೆಯೊಂದಕ್ಕೆ ತಳ್ಳಿದ. ಬಬಿತಾಳ ಪರ್ಸನ್ನು ತೆಗೆದುಕೊಂಡು ಅದರಲ್ಲಿದ್ದ ಅವಳ ಮೊಬೈಲ್ ಹೊರತೆಗೆದ. ಅದರ ಸಿಮ್ ತೆಗೆದು ಪುಡಿಪುಡಿ ಮಾಡಿ ಬೇರೆಡೆ ಎಸೆದ. ಆನಂತರ ಏನೂ ಆಗದಂತೆ ತನ್ನ ಮನೆಯತ್ತ ಪ್ರಯಾಣ ಬೆಳೆಸಿದ. ಮಾರ್ಗಮಧ್ಯದಲ್ಲಿ ಕಂಡ ಒಂದು ಸರೋವರದಲ್ಲಿ ಬಬಿತಾಳ ಮೊಬೈಲ್ ಮತ್ತು ಅವಳ ಪರ್ಸನ್ನೆಸೆದ.

    ಮನೆಗೆ ವಾಪಸಾದ ಕೂಡಲೇ ವಿಕ್ರಂ ಬಬಿತಾಳ ತಂದೆಗೆ ಫೋನ್ ಮಾಡಿ, ‘ಅಂದು ಮುಂಜಾನೆ ಬಬಿತಾ ಬ್ಯೂಟಿ ಪಾರ್ಲರಿಗೆ ಹೋಗುವುದಾಗಿ ಹೇಳಿದವಳು ಇನ್ನೂ ಮನೆಗೆ ವಾಪಸಾಗಿಲ್ಲ. ಅವಳ ಫೋನ್ ಸ್ವಿಚ್ ಆಫ್ ಎಂದು ಬರುತ್ತಿದೆ, ನಿಮ್ಮ ಮನೆಗೇನಾದರೂ ಬಂದಳೇ’ ಎಂದು ವಿಚಾರಿಸಿದ. ಅವರು ಬರಲಿಲ್ಲವೆಂದರು. ಮಾರನೆಯ ಬೆಳಿಗ್ಗೆಯೇ ವಿಕ್ರಂ ತನ್ನ ಮನೆಯ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಪತ್ನಿ ಕಾಣೆಯಾಗಿದ್ದಳೆಂದು ದೂರು ಕೊಟ್ಟ. ಕಾಣೆಯಾದ ಪ್ರಕರಣ ದಾಖಲು ಮಾಡಿದ ಪೊಲೀಸರು ಬಬಿತಾಳ ಫೋನ್ ಲೋಕೇಷನ್ ಸರ್ಚ್ ಮಾಡಿದಾಗ ಹಿಂದಿನ ದಿನ ಅದು 120 ಕಿ.ಮೀ ದೂರದಲ್ಲಿದ್ದ ಟವರ್ ಲೊಕೇಷನ್ ತೋರಿಸಿತು. ಅಲ್ಲಿಗೆ ಹೋಗಿ ಹುಡುಕಿದರೆ ಅದೊಂದು ಅರಣ್ಯಪ್ರದೇಶವಾಗಿತ್ತು.

    ಅಷ್ಟರಲ್ಲಿ ವಿಕ್ರಂನ ನಡವಳಿಕೆಯ ಬಗ್ಗೆ ಅನುಮಾನಗೊಂಡ ಪೊಲೀಸರು ಅವನ ಫೋನನ್ನೂ ಲೊಕೇಷನ್ ಸರ್ಚಿಗೆ ಹಾಕಿದರು. ಬಬಿತಾ ಕಾಣೆಯಾದ ದಿನದಂದು ಅದು ಬಬಿತಾಳ ಫೋನಿದ್ದ ಟವರಿನಲ್ಲಿಯೇ ಇದ್ದದ್ದು ತಿಳಿಯಿತು. ಆಗ ಪೊಲೀಸರು ವಿಕ್ರಂನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದರು. ವಿಕ್ರಂ ತಪ್ಪೊಪ್ಪಿಕೊಂಡು ಅಪರಾಧ ನಡೆದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದ. ಅಷ್ಟರಲ್ಲಾಗಲೇ ಬಬಿತಾಳ ಅರ್ಧದೇಹವನ್ನು ಕಾಡುಪ್ರಾಣಿಗಳು ತಿಂದಿದ್ದವು. ಬಬಿತಾ ಧರಿಸಿದ್ದ ಬಟ್ಟೆ, ಮಾಂಗಲ್ಯ, ಬಳೆಗಳು, ಮತ್ತು ಗಡಿಯಾರವನ್ನು ಅವಳ ತಾಯಿ ಗುರುತಿಸಿದರು. ಆನಂತರ ಡಿ.ಎನ್.ಎ ಪರೀಕ್ಷೆಯ ಮೂಲಕ ಮೃತಳು ಬಬಿತಾ ಎಂದು ಸಾಬೀತು ಮಾಡಲಾಯಿತು. ವಿಕ್ರಂನ ಹೇಳಿಕೆಯ ಮೇರೆಗೆ ಸರೋವರದಿಂದ ಬಬಿತಾಳ ಪರ್ಸ್ ಮತ್ತು ಮೊಬೈಲ್ ಫೋನನ್ನು ಹೊರತೆಗೆಯಲಾಯಿತು. ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇಲೆಯೇ ವಿಕ್ರಂನ ವಿರುದ್ಧ ಕೊಲೆ ಆರೋಪ ಹೊರಿಸಲಾಯಿತು. ನ್ಯಾಯಾಲಯವು ಅವನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ‘ವೃಥಾ ವೃಷ್ಟಿಃ ಸಮುದ್ರಸ್ಯ ವೃಥಾ ತೃಪ್ತಸ್ಯ ಭೋಜನಂ, ವೃಥಾ ದಾನಂ ಸಮೃದ್ಧಸ್ಯ, ನೀಚಸ್ಯೋಪಕೃತಿವೃಥಾ’- ‘ಸಮುದ್ರದಲ್ಲಿ ಮಳೆಯಾದರೆ ವ್ಯರ್ಥ, ಹೊಟ್ಟೆ ತುಂಬಿ ತೃಪ್ತನಾದವನಿಗೆ ಊಟ ಹಾಕುವುದು ವ್ಯರ್ಥ, ಸಮೃದ್ಧನಿಗೆ ದಾನ ಕೊಡುವುದು ವ್ಯರ್ಥ ಹಾಗೂ ನೀಚನಿಗೆ ಉಪಕಾರ ಮಾಡುವುದು ವ್ಯರ್ಥ’ ಎಂದು ಒಂದು ಸುಭಾಷಿತ ಹೇಳುತ್ತದೆ. ರೇಪ್ ಕೇಸಿನಲ್ಲಿಯೇ ನೀಚ ವಿಕ್ರಂಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ನೀಡಿದ್ದರೆ ಬಬಿತಾಳ ಪ್ರಾಣ ಉಳಿಯುತ್ತಿತ್ತೇನೋ!

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ: ಈಗಾಗಲೇ 3,773 ಮಂದಿ ಮತ ಚಲಾವಣೆ

    ಮತ್ತೆ ಬಂದ ‘ಹುಲಿಯಾ’; 50ಕ್ಕೂ ಹೆಚ್ಚು ಸೆಲೆಬ್ರಿಟಿಗಳ ಸಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts