ಬಡ್ತಿ ಮೀಸಲಾತಿ ಕಾಯ್ದೆ ಜಾರಿ ಬೇಡ

ಕಾರವಾರ: ಬಡ್ತಿ ಮೀಸಲಾತಿ ಕಾಯ್ದೆ 2018 ಅನ್ನು ಜಾರಿ ಮಾಡದಂತೆ ಆಗ್ರಹಿಸಿ ಅಹಿಂಸಾ ನೌಕರರ ಸಂಘಟನೆಯ ಪದಾಧಿಕಾರಿಗಳು ನಗರ ಜಿಲ್ಲಾಧಿಕಾರಿ ಕಚೇರಿಯ ಎದುರು ಗುರುವಾರ ಧರಣಿ ನಡೆಸಿದರು.
ಅಲ್ಪಸಂಖ್ಯಾತ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಹಾಲಿ, ನಿವೃತ್ತ ನೌಕರರು, ಅರೆ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಶಾಖೆಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಸರ್ಕಾರದ ವಿರುದ್ಧ ನೌಕರರು ಘೊಷಣೆ ಕೂಗಿದರು. ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಪತ್ರವನ್ನು ಎಡಿಸಿ ಸುರೇಶ ಇಟ್ನಾಳ ಅವರ ಮೂಲಕ ಸಲ್ಲಿಸಿ, ಕಾಯ್ದೆ ಜಾರಿಗೆ ಮುಂದಾದಲ್ಲಿ ಅಸಹಕಾರ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿಯನ್ನು ರದ್ದು ಮಾಡಿಲ್ಲ. ಆದರೆ, ವೇಗೋತ್ಕರ್ಷ ಜೇಷ್ಠತೆ ನೀಡಲು ಬರುವುದಿಲ್ಲವೆಂದು ಸೂಚಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿ 20 ತಿಂಗಳಾದರೂ ಸರ್ಕಾರ ಆದೇಶ ಜಾರಿ ಮಾಡಿಲ್ಲ. ಆದರೆ, ಸರ್ಕಾರದಲ್ಲಿರುವ ಶೇ. 18 ರಷ್ಟು ನೌಕರರ ಹಿತ ಕಾಯುವುದಕ್ಕೋಸ್ಕರ ಬಡ್ತಿ ಮೀಸಲಾತಿ ಕಾಯ್ದೆ ಜಾರಿ ಮಾಡಿ, ಶೇ. 82 ರಷ್ಟು ನೌಕರರಿಗೆ ಅನ್ಯಾಯ ಮಾಡಲು ಹೊರಟಿದೆ. ಈ ವಿಷಯ ಇನ್ನೂ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ಸರ್ಕಾರ ಸಮಾಜ ಕಲ್ಯಾಣ ಸಚಿವರ ಮಾತು ಕೇಳಿ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಮಾಡಲು ಹೊರಟರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜೈಲಿಗೆ ಹೋಗುವ ಪರಿಸ್ಥಿತಿ ನಿರ್ವಣವಾಗಬಹುದು. 10 ಲಕ್ಷ ಹಾಲಿ ಹಾಗೂ ನಿವೃತ್ತ ನೌಕರರ ಅಸಹಕಾರ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಮಹೇಶ ನಾಯ್ಕ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ನಾಯ್ಕ, ಪ್ರಮುಖರಾದ ವಿ.ಎಂ.ಭಟ್ ಇದ್ದರು.