ಹಾನಗಲ್ಲ: ತಾಲೂಕಿನಲ್ಲಿ ಚಾಲನೆಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದಂತೆ ಶಾಸಕ ಶ್ರೀನಿವಾಸ ಮಾನೆ ಅವರು ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ಜಿಪಂ, ಕರ್ನಾಟಕ ನೀರಾವರಿ ನಿಗಮ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಪುರಸಭೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಸ್ಥಗಿತಗೊಂಡಿರುವ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಪುನರಾರಂಭಿಸಲು ಈಗಾಗಲೇ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ. ತಾಲೂಕಿನಲ್ಲಿ ಯಾವ ಯಾವ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು ಎನ್ನುವ ಮಾಹಿತಿ ಪಡೆದು ಕೂಡಲೇ ಪುನರಾರಂಭಿಸಿ ಎಂದು ಸೂಚಿಸಿದರು.
ನಿಗದಿತ ಕಾಲಾವಧಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಕಾಮಗಾರಿಗಳ ಸ್ಥಳಕ್ಕೆ ನಿಯಮಿತವಾಗಿ ಭೇಟಿ ನೀಡಿ, ಗುಣಮಟ್ಟದ ಮೇಲೆ ನಿಗಾ ವಹಿಸಬೇಕು. ಕೆಲವೆಡೆ ಗುತ್ತಿಗೆದಾರರಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಬಗೆಗೆ ದೂರುಗಳಿವೆ. ಕೂಡಲೇ ಗುತ್ತಿಗೆದಾರರಿಗೆ ನಿರ್ಲಕ್ಷ್ಯ ತೋರದಂತೆ ಸೂಚಿಸಬೇಕು. ಅನುದಾನ ಬಿಡುಗಡೆ ವಿಳಂಬ ಸೇರಿದಂತೆ ಯಾವುದೇ ಅಡೆತಡೆ ಎದುರಾದರೂ ಕೂಡಲೇ ಗಮನಕ್ಕೆ ತನ್ನಿ ಎಂದು ಮಾನೆ ಸೂಚಿಸಿದರು.
ಪುರಸಭೆ ವ್ಯಾಪ್ತಿಯಲ್ಲಿನ ನಗರೋತ್ಥಾನ ಕಾಮಗಾರಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳ ಕುರಿತು ಇಂಜಿನಿಯರ್ ನಾಗರಾಜ ಮಿರ್ಜಿ ಅವರಿಂದ ಮಾಹಿತಿ ಪಡೆದರು. ಮನೆ, ಮನೆಗೆ ಗಂಗೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಸಿ.ಎಸ್. ನೆಗಳೂರ ಅವರಿಗೆ ಶಾಸಕ ಮಾನೆ ಸೂಚನೆ ನೀಡಿದರು.
ಜಿಪಂ ಎಇಇ ದೇವರಾಜ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಇಇ ಪ್ರಹ್ಲಾದ್ ಶೆಟ್ಟಿ, ಇಂಜಿನಿಯರ್ ಜಾವೀದ್ ಮುಲ್ಲಾ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.