ಮಳವಳ್ಳಿ: ತಾಲೂಕು ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಸುಂಕ ವಸೂಲಿ ಮಾಡಲು ಮುಂದಾಗಿರುವ ಹೆದ್ದಾರಿ ಪ್ರಾಧಿಕಾರದ ಕ್ರಮ ಸರಿಯಲ್ಲ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಟೋಲ್ ಬಳಿ ಪ್ರತಿಭಟನೆ ನಡೆಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಸಂಘಟನೆ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಮಾತನಾಡಿ, ಬೆಂಗಳೂರು-ಮಳವಳ್ಳಿ- ಕೊಳ್ಳೇಗಾಲ ಚಾಮರಾಜನಗರ ಮೂಲಕ ದಿಂಡಿಗಲ್ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ಮಾಣವನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. ಅಲ್ಲದೆ ರಸ್ತೆಯ ಪಕ್ಕದಲ್ಲಿರುವ ಕೆರೆಕಟ್ಟೆ, ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಅಲ್ಲದೆ ತಾಲೂಕು ವ್ಯಾಪ್ತಿಯಲ್ಲಿ ಟೋಲ್ ತೆರೆದಿದ್ದರೂ ಚಾಮರಾಜನಗರ ಜಿಲ್ಲೆಯ ಸತ್ತೇಗಾಲ ಟೋಲ್ ಎಂಬ ಫಲಕ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.
ಗಡಿಯಲ್ಲಿ ಟೋಲ್ ಇರುವುದರಿಂದ ತಾಲೂಕಿನ ವಾಹನ ಸವಾರರಿಗೆ ಉಚಿತವಾಗಿ ಅವಕಾಶ ಕಲ್ಪಿಸಬೇಕು. ಟೋಲ್ ಓಪನ್ ಮಾಡುವ ಮುನ್ನ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಗೂ ಸಂಘ- ಸಂಸ್ಥೆಗಳ ಅಭಿಪ್ರಾಯ ಕೇಳದೆ ವಸೂಲಿ ಕೇಂದ್ರ ತೆರೆದಿರುವುದು ನಾಗರಿಕ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೆ ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳನ್ನು ಸರಿಪಡಿಸುವುದರ ಜತೆಗೆ ಎಚ್ಚರಿಕೆ ಫಲಕ ಹಾಕಬೇಕು. ಅಲ್ಲಿಯವರೆಗೆ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಹುಲ್ ಕುಮಾರ್ ಗುಪ್ತಾ, ಸರ್ಕಾರದ ಆದೇಶದಂತೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ನಿಮ್ಮ ಅಹವಾಲನ್ನು ಲಿಖಿತವಾಗಿ ನೀಡಿದರೆ ಸರಿಪಡಿಸಲು ಕ್ರಮ ವಹಿಸಲಾಗುವುದೆಂದು ತಿಳಿಸಿದರು. ಆದರೆ ಅಧಿಕಾರಿಯ ಮಾತನ್ನು ತಿರಸ್ಕರಿಸಿದ ಪ್ರತಿಭಟನಾಕಾರರು, ಸಮಸ್ಯೆ ಬಗೆಹರಿಸಿದ ನಂತರ ಟೋಲ್ ಸಂಗ್ರಹ ಮಾಡುವಂತೆ ಪಟ್ಟು ಹಿಡಿದು ಕುಳಿತರು. ಅಂತಿಮವಾಗಿ ಹೋರಾಟಗಾರರ ಒತ್ತಡಕ್ಕೆ ಮಣಿದು ಮೇಲಧಿಕಾರಿಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ತಾತ್ಕಾಲಿಕವಾಗಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ತೆರಳಿದರು.
