ಪಾಂಡವಪುರ: ದಬ್ಬಾಳಿಕೆ ಮತ್ತು ಒತ್ತಾಯ ಪೂರ್ವಕವಾಗಿ ಜನರ ಬಳಿ ಸಾಲದ ಹಣ ವಸೂಲಿ ಮಾಡಬಾರದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೈಕ್ರೋ ಫೈನಾನ್ಸ್ ಕಂಪನಿಯ ಅಧಿಕಾರಿಗಳಿಗೆ ಖಡಕ್ಕಾಗಿ ತಾಕೀತು ಮಾಡಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ದುರ್ವರ್ತನೆ, ಸಾಲಕ್ಕೆ ಹೆದರಿ ಗುಳೆ ಹೋಗುತ್ತಿರುವ ಪ್ರಕರಣಗಳು, ರೈತರ ಆತ್ಮಹತ್ಯೆ ಇತ್ಯಾದಿ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ಮೈಕ್ರೋ ಫೈನಾನ್ಸ್ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿ ಮಾತನಾಡಿದರು.
ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಜನರ ಜತೆ ಅಮಾನವೀಯವಾಗಿ ವರ್ತಿಸುವುದು ಸರಿಯಲ್ಲ. ಕಷ್ಟ ಕಾಲದಲ್ಲಿ ಜನರು ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದುಕೊಂಡಿರುತ್ತಾರೆ. ಸಾಲ ಪಡೆದು ಕೊಂಡವರಲ್ಲಿ ಶೇ.98ರಷ್ಟು ಜನ ಸಕಾಲದಲ್ಲಿ ಸಾಲ ಮರು ಪಾವತಿಸುತ್ತಿದ್ದಾರೆ. ಉಳಿಕೆ ಶೇ.2 ರಷ್ಟು ಜನರು ಅನಿವಾರ್ಯ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಪಾವತಿಸುವುದಿಲ್ಲ. ಇಂತವರಿಗೆ ಕಾಲಾವಕಾಶ ಕೊಡಬೇಕು. ಅದನ್ನು ಬಿಟ್ಟು ಅವರೊಂದಿಗೆ ವಾಗ್ವಾದಕ್ಕೆ ಇಳಿದು ಒತ್ತಡ, ಬೆದರಿಕೆ ಹಾಕಿ ದಬ್ಬಾಳಿಕೆಯಿಂದ ಹಣ ವಸೂಲಾತಿಗೆ ಇಳಿದರೆ ನಾವು ಸುಮ್ಮನಿರುವುದಿಲ್ಲ ಎಂದು ಗುಡುಗಿದರು.
ಮೈಕ್ರೋ ಫೈನಾನ್ಸ್‌ಗಳಲ್ಲಿ ಜನರಿಗೆ ಯಾವ ನಿಯಮಾನುಸಾರ, ಯಾವ ಆಧಾರ ಮತ್ತು ದಾಖಲಾತಿ ಮೇಲೆ ಸಾಲ ಕೊಡಲಾಗುತ್ತಿದೆ. ಎಷ್ಟು ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿದೆ. ಸಾಲ ಪಾವತಿ ಮತ್ತು ವಸೂಲಾತಿ ವಿಚಾರದಲ್ಲಿ ಆರ್‌ಬಿಐ ನಿಯಮ ಪಾಲನೆ ಆಗುತ್ತಿದೀಯಾ? ಸಾಲದ ಕಂತು ವಿಂಗಡಣೆಗೆ ಅನುಸರಿಸುತ್ತಿರುವ ಮಾರ್ಗಸೂಚಿಗಳೇನು? ತಾಲೂಕಿನಲ್ಲಿ ಎಷ್ಟು ಮೈಕ್ರೋ ಫೈನಾನ್ಸ್‌ಗಳಿವೆ. ವರ್ಷದಿಂದ ವರ್ಷಕ್ಕೆ ಸಾಲ ಪಡೆಯುವವರ ಸಂಖ್ಯೆ ಶೇಕಡವಾರು ಎಷ್ಟು ಹೆಚ್ಚಾಗಿದೆ ಎಂದು ಪ್ರಶ್ನಿಸಿದರು.
ಸಾಲ ಕೊಟ್ಟು ವಸೂಲಾತಿ ನೆಪದಲ್ಲಿ ಜನರಿಗೆ ಹಿಂಸೆ ಕೊಡುವುದನ್ನು ನಾವು ಸಹಿಸಲ್ಲ. ಫೈನಾನ್ಸ್ ಸಿಬ್ಬಂದಿ ವರ್ತನೆ ಸರಿಯಾಗಿ ಇದ್ದಿದ್ದರೆ ಈ ರೀತಿ ಸಭೆ ಕರೆಯಬೇಕಾದ ಅವಶ್ಯಕತೆ ಇರಲಿಲ್ಲ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಜನರ ಜತೆ ದುಂಡಾವರ್ತನೆಗೆ ಇಳಿದು ಅಗೌರವವಾಗಿ ನಡೆದುಕೊಂಡಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದು, ನಾನು ಗಮನಿಸಿದ್ದೇನೆ. ಫೈನಾನ್ಸ್ ಕಂಪನಿಗಳ ಅಧಿಕಾರಿಗಳು ತಕ್ಷಣ ಸಿಬ್ಬಂದಿ ಸಭೆ ಕರೆದು ವರ್ತನೆ ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಬೇಕು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಜನರಿಗೆ ಅರಿವು ಮೂಡಿಸಬೇಕು: ಫೈನಾನ್ಸ್ ಕಂಪನಿಗಳ ಅಧಿಕಾರಿಗಳು ಜನರಿಗೆ ಹಣದ ಅವಶ್ಯಕತೆ ಇದ್ದೀಯಾ ಮತ್ತು ಮರುಪಾವತಿಸುವ ಸಾಮರ್ಥ್ಯ ಇತ್ಯಾದಿಗಳನ್ನು ಪರಿಶೀಲಿಸಿ ಅವಶ್ಯಕತೆಗೆ ತಕ್ಕಂತೆ ಸಾಲ ಕೊಡಬೇಕು. ಸಾಲ ಪಡೆದವರು ಬಳಿ ವಸೂಲಾತಿ ಮಾಡುವಾಗ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಾಲ ಕೊಡುವ ಮುನ್ನ ಜನರಿಗೆ ಸಾಲದ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ಅರಿವು ಮೂಡಿಸುವ ಕೆಲಸವನ್ನು ಬ್ಯಾಂಕ್ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.
ರೈತ ಸಂಘ ಈ ಹಿಂದೆ ಸಾಲ ವಸೂಲಾತಿ ಮತ್ತು ಜಪ್ತಿಗೆ ಆಗಮಿಸುವ ಬ್ಯಾಂಕ್ ಅಧಿಕಾರಿಗಳಿಗೆ ಗ್ರಾಮದ ಒಳಗೆ ಪ್ರವೇಶಿವಿಲ್ಲ ಎಂಬ ನಾಮಫಲಕಗಳನ್ನು ಗ್ರಾಮದ ಹೆಬ್ಬಾಗಲಿನಲ್ಲಿ ನೆಟ್ಟು ಬ್ಯಾಂಕ್ ಅಧಿಕಾರಿಗಳನ್ನು ತಡೆಯಲಾಗುತ್ತಿತ್ತು. ಮೈಕ್ರೋ ಫೈನಾನ್ಸ್‌ಗಳ ಹಾವಳಿ ಇದೇ ರೀತಿ ಮುಂದುವರಿದರೆ ರೈತ ಸಂಘ ಅದೇ ರೀತಿ ಚಳವಳಿ ಕೈಗೆತ್ತಿಕೊಂಡು ಮೈಕ್ರೋ ಫೈನಾನ್ಸ್ ಕಂಪನಿಯ ಯಾವೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಗ್ರಾಮ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಎಸ್.ಸಂತೋಷ್, ಶಿರಸ್ತೇದಾರ್ ಮೋಹನ್, ಪುರಸಭೆ ಸದಸ್ಯ ಶಿವಕುಮಾರ್, ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್ ಇತರರು ಇದ್ದರು.