ಬೇಲೂರು: ತಾಲೂಕಿನ ಅರೇಹಳ್ಳಿ-ಬಿಕ್ಕೋಡು ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸುತ್ತಿರುವುದರಿಂದ ದೀಪಾವಳಿ ಹಬ್ಬದ ದಿನ ಆ ಗ್ರಾಮಗಳಲ್ಲಿ ಪಟಾಕಿ ಸಿಡಿಸದೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ವಲಯ ಅರಣ್ಯಾಧಿಕಾರಿ ಯತೀಶ್ ಮನವಿ ಮಾಡಿದ್ದಾರೆ.
ತಾಲೂಕಿನ ಅರೇಹಳ್ಳಿ-ಬಿಕ್ಕೋಡು ಹೋಬಳಿಯ ಎಲ್ಲ ಗ್ರಾಮಗಳು ಮತ್ತು ಚೀಕನಹಳ್ಳಿ, ಹುನುಗನಹಳ್ಳಿ, ನಾಗೇನಹಳ್ಳಿ, ಕೋಗೋಡು, ಕುಪ್ಪಗೋಡು ಸೇರಿದಂತೆ ಇತರ ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸುವ ಚಲನವಲನಗಳ ಪ್ರದೇಶವಾಗಿವೆ. ಅಲ್ಲದೆ ಈ ಗ್ರಾಮಗಳಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಿದರೆ ಕಾಡಾನೆಗಳು ಪಟಾಕಿ ಶಬ್ದಕ್ಕೆ ಆತಂಕಗೊಂಡು ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ, ಆಸ್ತಿಹಾನಿ ಹಾಗೂ ಪ್ರಾಣ ಹಾನಿಯಾಗುವ ಸಂಭವವಿರುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಆದ್ದರಿಂದ ನವೆಂಬರ್ 2ರವರೆಗೆ ಪಟಾಕಿ ಸಿಡಿಸದಂತೆ ಗ್ರಾಮಗಳ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ತಿಳಿಸಿದ್ದಾರೆ.