ಲಜ್ಜೆ ಬಿಟ್ಟು ದೇವರೆದುರು ಶರಣಾಗಿ: ಪಲಿಮಾರು ಶ್ರೀ

ಉಡುಪಿ: ಭಗವಂತನ ಸಂಪರ್ಕದಿಂದ ಜಡಶರೀರ ಚೈತನ್ಯ ಪಡೆಯುತ್ತದೆ. ಚೈತನ್ಯ ಪ್ರಭುಗಳು ಕೃಷ್ಣ ನಾಮ ಸ್ಮರಣೆಯಿಂದ ಸಮಾಜಕ್ಕೆ ಚೈತನ್ಯ ತುಂಬಿದ್ದಾರೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಇಸ್ಕಾನ್ ಬೆಂಗಳೂರು ಮತ್ತು ಮಠದ ಆಶ್ರಯದಲ್ಲಿ ಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಚೈತನ್ಯ ಜಯಂತ್ಯುಉದ್ಘಾಟಿಸಿ ಅವರು ಮಾತನಾಡಿದರು

ಲಜ್ಜೆ ಬಿಟ್ಟು ದೇವರ ಮುಂದೆ ಶರಣಾಗಬೇಕು. ಸಂಕೀರ್ತನೆ, ನರ್ತನ ಸೇವೆ ಮಾಡಬೇಕು. ಭಗವಂತನ ಮುಂದೆ ಪರಾಜಯ ಜಗತ್ತಿನಲ್ಲಿ ದಿಗ್ವಿಜಯಕ್ಕೆ ಕಾರಣ ಎಂಬುದನ್ನು ಸಾರಿದ್ದಾರೆ ಎಂದರು. ಇಸ್ಕಾನ್ ಸಂಸ್ಥೆ ಭಗವಂತನ ನಾಮವೆಂಬ ಆಯುಧ ಹೊತ್ತ ಸೇನೆ ಎಂದು ಶ್ರೀಗಳು ಶ್ಲಾಘಿಸಿದರು.

ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ ಹಿಂಚಿಗೇರಿ ಮಾತನಾಡಿ, ಆಧುನಿಕ ಯುಗದಲ್ಲಿ ಮನುಷ್ಯ ವೇಗದ ಜೀವನ ಸಾಗಿಸುತ್ತಿದ್ದು ಆತ್ಮೋದ್ಧಾರದ ಚಿಂತೆ ಹೊಂದಿಲ್ಲ. ದೇಹಕ್ಕೆ ಅನ್ನದ ಅವಶ್ಯಕತೆ ಇರುವಂತೆ ಆತ್ಮದ ಹಸಿವು ನೀಗಿಸಲು ಜಪಗಳ ಅಗತ್ಯವಿದೆ ಎಂದರು.

ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ ದಾಸ್ ಅಧ್ಯಕ್ಷತೆ ವಹಿಸಿ, ಚೈತನ್ಯ ಮಹಾಪ್ರಭುಗಳು ಮಧ್ವಾಚಾರ್ಯರ ಪರಂಪರೆಯಲ್ಲಿ ದೀಕ್ಷೆಯನ್ನು ತೆಗೆದುಕೊಂಡಿದ್ದು ಪಲಿಮಾರು ಮಠದ ವಿದ್ಯಾಮಾನ್ಯ ತೀರ್ಥರ ಆದೇಶದಂತೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ತಮ್ಮ ಪಂಚಮ ಪರ್ಯಾಯದಲ್ಲಿ ಉಡುಪಿಯಲ್ಲಿ ಚೈತನ್ಯ ಮಹಾಪ್ರಭುಗಳ ಜಯಂತಿಯನ್ನು ಮೊದಲ ಬಾರಿ ಆಚರಿಸಿದರು. ಪಲಿಮಾರು ಪರ್ಯಾಯದಲ್ಲೂ ಮುಂದುವರಿದಿದೆ ಎಂದರು.

ಸಿಬಿಐ ಮಾಜಿ ನಿರ್ದೇಶಕ ಡಾ. ಡಿ.ಆರ್. ಕಾರ್ತಿಕೇಯನ್, ಇಸ್ಕಾನ್ ಬೆಂಗಳೂರು ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ್, ಚೆನ್ನೈ ಇಸ್ಕಾನ್ ಅಧ್ಯಕ್ಷ ಸ್ತೋಕಕೃಷ್ಣ ಸ್ವಾಮಿ, ಪಲಿಮಾರು ಮಠದ ವೇದವ್ಯಾಸ ತಂತ್ರಿ, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಉಪಸ್ಥಿತರಿದ್ದರು