ಕ್ಷಯರೋಗ ಭಯ ಬೇಡ

ಮಡಿಕೇರಿ: ಕ್ಷಯರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮೀಪ್ರಿಯಾ ಹೇಳಿದರು.

ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಕೇರಳದ ವೈನಾಡು ಜಿಲ್ಲೆಯನ್ನು ಕ್ಷಯರೋಗ ಮುಕ್ತವೆಂದು ಘೋಷಿಸಿದ್ದು, ಅಂತೆಯೆ ಕೊಡಗು ಜಿಲ್ಲೆಯಲ್ಲೂ ಕ್ಷಯರೋಗ ಪ್ರಕರಣಗಳು ಇಲ್ಲದಂತೆ ಮಾಡಬೇಕಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಔಷಧ ಪಡೆಯಬೇಕು. ಸುತ್ತಲಿನ ಪರಿಸರ ಹಾಗೂ ಮನೆಯಲ್ಲಿ ಗಾಳಿ-ಬೆಳಕು ಇರಬೇಕು. ಇದರಿಂದ ಕ್ಷಯರೋಗ ಬರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.

ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರಕಾಮತ್ ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ತೋರಿಸಬೇಕು. ಕ್ಷಯರೋಗವನ್ನು ಸಂಪೂರ್ಣ ಗುಣ ಮಾಡಲು ಮಾತ್ರೆ ಇದ್ದು, ವೈದ್ಯರ ಸಲಹೆಯಂತೆ ತಪ್ಪದೇ ಕಾಲಕಾಲಕ್ಕೆ ಮಾತ್ರೆ ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ.ಶಿವಕುಮಾರ್ ಮಾತನಾಡಿ, ಕ್ಷಯರೋಗಿಗಳಿಗೆ ಮಾಸಿಕ 500 ರೂ. ಸಹಾಯ ಧನ ನೀಡಲಾಗುತ್ತಿದೆ. ರಾಷ್ಟ್ರದಲ್ಲಿ 6 ಸಾವಿರ ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ. ಪ್ರತಿದಿನ 600 ಜನರು ಸಾವಿಗೀಡಾಗುತ್ತಿದ್ದಾರೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಾಗಿದ್ದು, ಮುನ್ನೆಚ್ಚರಿಕೆ ವಹಿಸುವುದು ಅಗತ್ಯವೆಂದು ಸಲಹೆ ನೀಡಿದರು.

ನಗರದ ಬಾಲಮಂದಿರದಿಂದ ಹೊರಟ ಜಾಥಾ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಸ್ಪತ್ರೆಯ ಸಭಾಂಗಣದವರೆಗೆ ನಡೆಯಿತು.
ಮತದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಆನಂದ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ, ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕುಲಕರ್ಣಿ ಇತರರಿದ್ದರು.