ಸುಬ್ರಹ್ಮಣ್ಯ ದೇವಳದ ಷರತ್ತು ಒಪ್ಪಲಾಗದು: ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ

ಉಡುಪಿ: ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದ ನಡುವಿನ ವೈಮನಸ್ಸನ್ನು ಪರಿಹರಿಸಲು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ನಡೆಸಿದ ಸಂಧಾನ ಪ್ರಕ್ರಿಯೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಮಠ ಮತ್ತು ನರಸಿಂಹ ಗುಡಿ ಸ್ಥಳಾಂತರ, ಮಠದ ಹೆಸರು ಬದಲಾವಣೆ ಮೊದಲಾದ ಷರತ್ತುಗಳನ್ನು ಮುಂದಿಟ್ಟಿರುವುದು ಮಠದ ಭಕ್ತರಿಗೆ ದಿಗ್ಭ್ರಮೆ ಹುಟ್ಟಿಸಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಂಪುಟ ನರಸಿಂಹ ದೇವರನ್ನು ಪ್ರಸ್ತುತ ಇರುವ ಜಾಗದಿಂದ ಸ್ಥಳಾಂತರಿಸಬೇಕು. ಅಲ್ಲಿ ನಾವು ಗಣಪತಿಯನ್ನು ಪ್ರತಿಷ್ಠಾಪಿಸುತ್ತೇವೆ. ಮಠ ನ್ಯಾಯಾಲಯದಲ್ಲಿ ದಾಖಲಿಸಿರುವ ಎಲ್ಲ ದಾವೆಗಳನ್ನು ಕೂಡಲೇ ಹಿಂಪಡೆಯಬೇಕು. ಸುಬ್ರಹ್ಮಣ್ಯ ಮಠದ ಹೆಸರನ್ನು ಬದಲಿಸಿ ನರಸಿಂಹ ಮಠವೆಂದು ಮರುನಾಮಕರಣ ಮಾಡಬೇಕು. ಮಠವನ್ನು ರಥಬೀದಿಯಿಂದ ಬೇರೆ ಕಡೆಗೆ ವರ್ಗಾಯಿಸಬೇಕು. ಮಠದಲ್ಲಿ ಆಶ್ಲೇಷಾ ಬಲಿ, ಸರ್ಪ ಸಂಸ್ಕಾರ ಇತ್ಯಾದಿ ಧಾರ್ಮಿಕ ಕಾರ್ಯ ನಡೆಯಬಾರದು ಮೊದಲಾದ ಪ್ರಮುಖ ಷರತ್ತುಗಳನ್ನು ದೇವಸ್ಥಾನ ಆಡಳಿತ ಮಂಡಳಿ ಸಲ್ಲಿಸಿದೆ ಎಂಬ ಮಾಹಿತಿ ಲಭಿಸಿದೆ.

ವಾಸ್ತವದಲ್ಲಿ 800 ವರ್ಷಗಳ ಹಿಂದೆ ಮಧ್ವಾಚಾರ್ಯರು ಸುಬ್ರಹ್ಮಣ್ಯಕ್ಕೆ ಬಂದಾಗ, ಅಲ್ಲಿ ಸುಬ್ರಹ್ಮಣ್ಯ ದೇವರಿಗೆ ಪೂಜಾದಿ ವಿನಿಯೋಗಗಳು ಕ್ರಮಬದ್ಧವಾಗಿ ಆಗದಿದ್ದ ಸಂದರ್ಭ ಸ್ಥಳೀಯ ಅರಸರ ಪ್ರಾರ್ಥನೆಯಂತೆ, ಸುಬ್ರಹ್ಮಣ್ಯ ದೇವರ ಪೂಜಾದಿ ವಿನಿಯೋಗಗಳನ್ನು ನಿರ್ಣಯ ಮಾಡಿ, ದೇವಸ್ಥಾನದಲ್ಲಿ ದೇವರ ಪೂಜೆಗೆ ಎರಡು ಮನೆತನದ ಗೃಹಸ್ಥರನ್ನು ನಿಯೋಜಿಸಿದ್ದರು. ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯನ್ನು ವಿಷ್ಣುತೀರ್ಥರಿಗೆ ವಹಿಸಿಕೊಟ್ಟಿದ್ದರು. ಇತ್ತೀಚಿನವರೆಗೂ ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ಮಠ ನಿರ್ವಹಿಸಿಕೊಂಡು ಬಂದಿದೆ. ಆದರೆ ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿ ಪೂರ್ವಗ್ರಹ ಮನಸ್ಥಿತಿ ಹೊಂದಿದೆ. ಮಠಗಳನ್ನು ಊರಿನ ಹೆಸರಿನಿಂದಲೇ ಉಲ್ಲೇಖಿಸಲಾಗುತ್ತದೆ ವಿನಾ ದೇವರ ಹೆಸರಿನಿಂದ ಅಲ್ಲ ಎಂದು ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ನಿರ್ಣಯದಲ್ಲಿ ತಿಳಿಸಿದೆ.

ಸಭೆಯಲ್ಲಿ ಮಹಾಮಂಡಲ ಅಧ್ಯಕ್ಷ ಅರವಿಂದ ಆಚಾರ್ಯ, ಕಾರ್ಯದರ್ಶಿ ರವಿಪ್ರಕಾಶ್ ಭಟ್, ಪ್ರಮುಖರಾದ ಯು.ವಾದಿರಾಜ ಆಚಾರ್ಯ, ಎ.ಪಿ. ಕೊಡಂಚ, ಬಾಲಾಜಿ ರಾಘವೇಂದ್ರ ಆಚಾರ್ಯ, ಜಯಶ್ರೀ ಭಟ್, ವಿಜಯಾ ಆರ್. ಭಟ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *