ಕರುಣಾನಿಧಿ ಆರೋಗ್ಯ ಗಂಭೀರ

ಚೆನ್ನೈ: ವಯೋಸಹಜ ಕಾಯಿಲೆ ಜತೆಗೆ ಸೋಂಕು ಹಾಗೂ ಜ್ವರದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಡಿಎಂಕೆ ಅಧ್ಯಕ್ಷ, ಮಾಜಿ ಸಿಎಂ ಎಂ.ಕರುಣಾನಿಧಿ (94) ಅವರನ್ನು ನಗರದ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಕರುಣಾನಿಧಿ ನಿವಾಸಕ್ಕೆ ಅನೇಕ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಏತನ್ಮಧ್ಯೆ, ತಂದೆಯವರ ಆರೋಗ್ಯ ಸುಧಾರಿಸಿದೆ ಎಂದು ಕರುಣಾನಿಧಿ ಪುತ್ರ, ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಎಂಡಿಎಂಕೆ, ಬಿಜೆಪಿ, ಸಿಪಿಐ ಸೇರಿ ವಿವಿಧ ಪಕ್ಷಗಳ ಮುಖಂಡರು, ಸಿನಿಮಾ ಕ್ಷೇತ್ರದ ಗಣ್ಯರು, ಡಿಎಂಕೆ ಕಾರ್ಯಕರ್ತರು ಕರುಣಾನಿಧಿ ಮನೆ ಇರುವ ಗೋಪಾಲಪುರಂನಲ್ಲಿ ಜಮಾಯಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ. ಕರುಣಾನಿಧಿ ಪುತ್ರ ಎಂ.ಕೆ.ಅಳಗಿರಿ ಮತ್ತು ಅವರ ಮಗ ದೊರೈ ದಯಾನಿಧಿ ಜತೆ ಆಗಮಿಸಿದ್ದಾರೆ. ಕರುಣಾನಿಧಿ ಕುಟುಂಬದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ದೂರವಾಣಿ ಕರೆ ಮಾಡಿ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಹಿರಿಯ ನಾಯಕನ ಆರೋಗ್ಯ ವಿಚಾರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎಡಪಕ್ಷಗಳ ಮುಖಂಡರಾದ ಸೀತಾರಾಂ ಯೆಚೂರಿ, ಡಿ.ರಾಜಾ ಕೂಡ ಕರುಣಾನಿಧಿ ಅವರು ಬೇಗ ಗುಣಮುಖರಾಗಲೆಂದು ಹಾರೈಸಿದ್ದಾರೆ. ತಮಿಳುನಾಡು ಸಿಎಂ ಕೆ.ಪಳನಿಸಾಮಿ, ಡಿಸಿಎಂ ಒ.ಪನ್ನೀರಸೆಲ್ವಂ ಮತ್ತು ಮೂವರು ಸಚಿವರು ಕರುಣಾನಿಧಿ ಅವರ ಮನೆಗೆ ಗುರುವಾರ ರಾತ್ರಿಯೆ ಭೇಟಿ ನೀಡಿದ್ದರು.

ಡಿಎಂಕೆ ಅಧ್ಯಕ್ಷರಾಗಿ 50 ವರ್ಷ

ಎಂ.ಕರುಣಾನಿಧಿ ಅವರು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ನೇತೃತ್ವವಹಿಸಿಕೊಂಡು ಅರ್ಧ ಶತಮಾನ ಪೂರೈಸಿದ್ದಾರೆ. 1969ರಲ್ಲಿ ಆಗಿನ ಸಿಎಂ ಸಿ.ಎನ್.ಅಣ್ಣಾದೊರೈ ಜತೆಗೂಡಿ ಕರುಣಾನಿಧಿ ಡಿಎಂಕೆ ಸ್ಥಾಪಿಸಿದರು. ಅನಾರೋಗ್ಯದ ಕಾರಣ ಕರುಣಾನಿಧಿ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ, ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.