ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್​ ಮೈತ್ರಿ ಘೋಷಣೆ: ಕಾಂಗ್ರೆಸ್​ಗೆ 9 ಕ್ಷೇತ್ರ

ಚೆನ್ನೈ: ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ, ಎಐಎಡಿಎಂಕೆ ಮತ್ತು ಪಿಎಂಕೆ ಮೈತ್ರಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್​ ಮತ್ತು ಡಿಎಂಕೆ ಪಕ್ಷಗಳು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಮೈತ್ರಿ ಘೋಷಿಸಿವೆ.

ಚೆನ್ನೈನಲ್ಲಿ ಇಂದು ಸಭೆ ನಡೆಸಿದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್​ ಮತ್ತು ತಮಿಳುನಾಡು ಕಾಂಗ್ರೆಸ್​ ಉಸ್ತುವಾರಿ ಮುಕುಲ್​ ವಾಸ್ನಿಕ್​ ನೇತೃತ್ವದ ಕಾಂಗ್ರೆಸ್​ ನಿಯೋಗ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ತಮಿಳುನಾಡಿನಲ್ಲಿ 39 ಸೀಟುಗಳ ಪೈಕಿ ಕಾಂಗ್ರೆಸ್​ಗೆ 9 ಮತ್ತು ಪುದುಚೆರಿಯ ಒಂದು ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕಾಂಗ್ರೆಸ್​ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದರ ಕುರಿತು ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ಇತರ ಮೈತ್ರಿ ಪಕ್ಷಗಳಿಗೆ ಎಷ್ಟು ಕ್ಷೇತ್ರ ನೀಡಬೇಕು ಎಂದು ತೀರ್ಮಾನ ತೆಗೆದುಕೊಲ್ಳಾಗುವುದು. ಆದಷ್ಟು ಶೀಘ್ರ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗುವುದು ಎಂದು ಡಿಎಂಕೆ ಪ್ರಧಾನಕಾರ್ಯದರ್ಶಿ ಸ್ಟಾಲಿನ್​ ತಿಳಿಸಿದ್ದಾರೆ.

2014ರ ವಿಧಾನಸಭೆ ಚುನಾವಣೆಯಲ್ಲಿ 39 ಸೀಟುಗಳ ಪೈಕಿ ಎಐಎಡಿಎಂಕೆ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಒಂದು ಮತ್ತು ಪಿಎಂಕೆ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಚುನಾವಣೆಗೂ ಮುನ್ನ ಮೈತ್ರಿ ಮುರಿದುಕೊಂಡಿದ್ದ ಡಿಎಂಕೆ ಮತ್ತು ಕಾಂಗ್ರೆಸ್​ ಶೂನ್ಯ ಸಂಪಾದನೆ ಮಾಡಿದ್ದವು. (ಏಜೆನ್ಸೀಸ್​)