ಆ.14ಕ್ಕೆ ಡಿಎಂಕೆ ತುರ್ತು ಕಾರ್ಯಕಾರಿ ಸಮಿತಿ ಸಭೆ; ಪಕ್ಷದ ರಾಜ್ಯಾಧ್ಯಕ್ಷರಾಗುವರೇ ಸ್ಟಾಲಿನ್​ ?

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ (ದ್ರಾವಿಡ ಮುನ್ನೇಟ್ರ ಕಳಗಂ) ಅಧ್ಯಕ್ಷರಾಗಿದ್ದ ಕರುಣಾನಿಧಿ ಅವರು ನಿಧನರಾದ ಬೆನ್ನಿಗೇ ಆಗಸ್ಟ್​ 14ರಂದು ಪಕ್ಷದ ತುರ್ತು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ.

ಸಮಿತಿ ಸಭೆಯು ಚೆನ್ನೈನ ಅಣ್ಣಾ ಅರಿವಲಯಮ್​ನಲ್ಲಿರುವ ಡಿಎಂಕೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಸಭೆ ನಡೆಯುವ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅನ್ಬಳಗನ್​ ಅವರು ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಕ್ಷದ ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರೂ ಸಭೆ ಹಾಜರಾಗಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಕರುಣಾನಿಧಿ ಅವರ ನಿಧನದ ನಂತರ ನಡೆಯುತ್ತಿರುವ ಮೊದಲ ಕಾರ್ಯಕಾರಿ ಸಮಿತಿ ಸಭೆ ಇದಾಗಿದ್ದು, ಪಕ್ಷಕ್ಕೆ ಸಂಬಂಧಿಸಿದ ಮಹತ್ವದ ನೀತಿ, ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕರುಣಾನಿಧಿ ಅವರ ಪುತ್ರ, ಸದ್ಯ ಡಿಎಂಕೆಯ ಕಾರ್ಯಾಧ್ಯಕ್ಷರಾಗಿರುವ ಎಂ.ಕೆ. ಸ್ಟಾಲಿನ್​ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಊಹಾಪೋಹ ಮತ್ತು ನಿರೀಕ್ಷೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.