ದೇವೇಂದ್ರಪ್ಪನವರನ್ನು ಗಾಳಕ್ಕೆ ಬಿದ್ದ ಮೀನಿಗೆ, ಉಗ್ರಪ್ಪನವರನ್ನು ಪೂಜಾರಿಗೆ ಹೋಲಿಸಿ, ತಮ್ಮನ್ನು ತಾವು ಕೆಂಪೇಗೌಡರಿಗೆ ಹೋಲಿಸಿಕೊಂಡ ಡಿಕೆಶಿ

ಬಳ್ಳಾರಿ: ಬಿಜೆಪಿ ಲೋಕಸಭಾ ಅಭ್ಯರ್ಥಿ ದೇವೇಂದ್ರಪ್ಪ ಅವರು ಕಳೆದ ಚುನಾವಣೆಯಲ್ಲಿ ನನ್ನ ಬಳಿ ಟಿಕೆಟ್​ ಕೇಳಿದ್ದರು. ನಾನು ಅವರ ಓದು ಕೇಳಿ ನಿರಾಕರಿಸಿದ್ದೆ. ಈಗ ಶ್ರೀರಾಮುಲು ಅವರ ಗಾಳಕ್ಕೆ ಬಿದ್ದಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ದೇವೇಂದ್ರಪ್ಪ ಅವರನ್ನು ಗಾಳಕ್ಕೆ ಬಿದ್ದ ಮೀನಿಗೆ ಹೋಲಿಸಿದರು.

ಸಂಡೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್​, ಕಾಂಗ್ರೆಸ್​ ಜಂಟಿ ಸಮಾವೇಶದಲ್ಲಿ ಮಾತನಾಡಿ, ಶ್ರೀರಾಮುಲು ಅವರಿಗೆ ನಮ್ಮ ಪಕ್ಷದವರೇ ಬೇಕಿತ್ತಾ ಎಂದು ಛೇಡಿಸಿದರು. ದೇವೆಂದ್ರಪ್ಪನವರಿಗೆ ಪಾರ್ಲಿಮೆಂಟ್​ನಲ್ಲಿ ಮಾತಾಡೋಕೆ ಆಗುತ್ತಾ? ಇದಕ್ಕೆಲ್ಲ ರಾಮುಲು, ಯಡಿಯೂರಪ್ಪನೇ ಉತ್ತರಿಸಬೇಕು ಎಂದು ಟೀಕಿಸಿದರು.

ದೇವೇಂದ್ರಪ್ಪ ಅಭ್ಯರ್ಥಿ ಆಗುತ್ತಿದ್ದಂತೆ ಅಬಕಾರಿ ಅಧಿಕಾರಿಗಳಿಗೆ ಹಣ ನೀಡುವಂತೆ ಕರೆ ಬರುತ್ತಿದೆಯಂತೆ. ಆದರೆ ಬಳ್ಳಾರಿಯಲ್ಲಿ ಮತ್ತೊಮ್ಮೆ ವಸೂಲಿ ರಾಜಕಾರಣ ಮಾಡಲು ಬಿಡುವುದಿಲ್ಲ. ಇಲ್ಲಿನ ಪರಿಸರ ನಂಗೆ ತುಂಬ ಇಷ್ಟ. ಬಳ್ಳಾರಿ ರಿಸರ್ವೇಶನ್​ ಜನರಲ್​ ಆಗಿದ್ದರೆ ನಾನು ಇಲ್ಲಿಂದಲೇ ಸ್ಪರ್ಧಿಸುತ್ತೇನೆ. ಮುಂದೆ ಒಮ್ಮೆ ಬದಲಾವಣೆಯಾದರೆ, ನನಗೂ ಆಯಸ್ಸು ಇದ್ದರೆ ಖಂಡಿತ ಇಲ್ಲಿಂದಲೇ ನಿಲ್ಲುತ್ತೇನ. ನೀವೆಲ್ಲ ನನ್ನನ್ನು ಗೆಲ್ಲಿಸಬೇಕು ಎಂದರು.

ತಮ್ಮನ್ನು ಕೆಂಪೇಗೌಡರಿಗೆ ಹೋಲಿಸಿಕೊಂಡ ಡಿಕೆಶಿ

ಸಮಾವೇಶದಲ್ಲಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ಮಾಡಿದ ಡಿ.ಕೆ.ಶಿವಕುಮಾರ್​ ತಮ್ಮನ್ನು ಕೆಂಪೇಗೌಡರಿಗೆ ಹೋಲಿಸಿಕೊಂಡರು. ಕನಕಪುರ ಗೌಡ್ರು ಕಲ್ಲು ಒಡೆದುಕೊಂಡು ಇರೋದು ಬಿಟ್ಟು ಬಳ್ಳಾರಿಗೆ ಯಾಕೆ ಬಂದಿದ್ದಾರೆ? ಏನು ಸಂಬಂಧ ಎಂದು ಶ್ರೀರಾಮುಲು ಉಪಚುನಾವಣೆ ವೇಳೆ ಹೇಳಿದ್ದರು. ನೆನಪಿರಲಿ ಕೃಷ್ಣದೇವರಾಯನ ಕಾಲದಲ್ಲಿ ಕೆಂಪೇಗೌಡರು ಒಬ್ಬ ಸಾಮಂತ ರಾಜರಾಗಿದ್ದರು. ಅವರು ಹಂಪಿಗೆ ಬಂದು ಕುಸ್ತಿ ಆಡಿ ಗೆದ್ದು, ಕೃಷ್ಣದೇವರಾಯರಿಂದ ಕಂಠಿ ಹಾರ ಪಡೆದಿದ್ದರು. ಹಾಗೇ ನಾನೂ ಬಳ್ಳಾರಿಗೆ ಬಂದಿದ್ದೆ. ಕೋಟೆ ಮಲ್ಲೇಶ್ವರನಿಗೆ ಹೋಗಿ ಚುನಾವಣಾ ಯುದ್ಧ ಗೆಲ್ಲಿಸುವಂತೆ ಬೇಡಿಕೊಂಡಿದ್ದೆ. ಅದೇ ರೀತಿ ಗೆದ್ದೆ ಕೂಡ. ಉಗ್ರಪ್ಪನ ಗೆಲುವು ನನಗೆ ನೀವು ಕೊಟ್ಟ ಕಂಠಿಹಾರ ಎಂದು ಹೇಳಿದರು.

ಹೆಣ ಹೊರೋನೂ ನಾನೇ, ಪಲ್ಲಕ್ಕಿ ಹೊರೋನೂ ನಾನೇ

ಅತೃಪ್ತ ಶಾಸಕ ನಾಗೇಂದ್ರ ಅವರಿಗೆ ಟಾಂಗ್​ ನೀಡಿದ ಡಿ.ಕೆ.ಶಿವಕುಮಾರ್​, ಕಾಂಗ್ರೆಸ್​ನಲ್ಲಿ ಪಲ್ಲಕ್ಕಿ ಹೊರೋನೂ ನಾಏ, ಹೆಣ ಹೊರೋನೂ ನಾನೇ. ಹಾಗೇ ನಾಗೇಂದ್ರ, ನಿಮ್ಮ ಕಷ್ಟಕ್ಕೆ ಆಗೋನು, ಸುಖಕ್ಕೆ ಆಗೋನೂ ನಾನೇ. ಬಳ್ಳಾರಿಯ ಇಬ್ಬರಿಗೆ ಸಚಿವ ಸ್ಥಾನ ನೀಡಿದ್ದೇವೆ. ರೊಟೇಷನ್​ನಲ್ಲಿ ಮತ್ತೆ ಸಿಗುತ್ತಿತ್ತು. ಇರಲಿ ನಾಗೇಂದ್ರ ನಮ್ಮವರೇ. ಫೋನ್​ ಮಾಡಿ ಮಾತನಾಡಿದ್ದೇನೆ. ಸಂಜೆ ಅವರ ಮನೆಗೇ ಹೋಗಿ ಭೇಟಿ ಮಾಡುತ್ತೇನೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಉಗ್ರಪ್ಪ ಪೂಜಾರಿಯಂತೆ

ಭಕ್ತರ ಮನಸಿನ ಬೇಡಿಕೆಯನ್ನು ದೇವರಿಗೆ ತಲುಪಿಸಲು ದೇವಸ್ಥಾನಗಳಲ್ಲಿ ಪೂಜಾರಿಗಳು ಇರುತ್ತಾರೆ. ನಾವು ಹೋದಾಗ ಅವರೇ ನಮ್ಮ ಪರವಾಗಿ ಪೂಜೆಗಳನ್ನು ಮಾಡಿ, ಬೇಡಿಕೆಗಳನ್ನು ದೇವರಿಗೆ ತಿಳಿಸುತ್ತಾರೆ. ಹಾಗೇ ಉಗ್ರಪ್ಪನವರು ಇಲ್ಲಿನವರ ಬೇಡಿಕೆಗಳ ಬಗ್ಗೆ ಪಾರ್ಲಿಮೆಂಟ್​ನಲ್ಲಿ ಧ್ವನಿ ಎತ್ತುತ್ತಾರೆ. ಬಳ್ಳಾರಿಯೆಂಬ ಗುಡಿಗೆ ಉಗ್ರಪ್ಪನವರು ಪೂಜಾರಿ ಎಂದು ಹೇಳಿದರು. ಹಾಗೇ ಏಪ್ರಿಲ್​ 2ರಂದು ನಾಮಪತ್ರ ಸಲ್ಲಿಸುವಂತೆ ಅವರಿಗೆ ಸೂಚಿಸಿದರು.

One Reply to “ದೇವೇಂದ್ರಪ್ಪನವರನ್ನು ಗಾಳಕ್ಕೆ ಬಿದ್ದ ಮೀನಿಗೆ, ಉಗ್ರಪ್ಪನವರನ್ನು ಪೂಜಾರಿಗೆ ಹೋಲಿಸಿ, ತಮ್ಮನ್ನು ತಾವು ಕೆಂಪೇಗೌಡರಿಗೆ ಹೋಲಿಸಿಕೊಂಡ ಡಿಕೆಶಿ”

  1. Corrupt Congress leaders led by number one rogue and corrupt politician from Ramnagar us bound to bite the dustbin this time. These so called leaders are striving day and night to fulfil Gandhiji wish if seeing Congress mukth India.

Comments are closed.