ಚಳ್ಳೆಕೆರೆ: ಶಿಕ್ಷಣ ಖಾತೆ ಸಿಗುವ ನಿರೀಕ್ಷೆ ನನಗಿರಲಿಲ್ಲ. ಖಾತೆ ಕುರಿತು ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಈ ಸಂಬಂಧ ಒಮ್ಮೆ ಸಿದ್ದರಾಮಯ್ಯ ಅವರ ಬಳಿ ಸರ್, ಇವನಿಗೆ ಸ್ವಲ್ಪ ಕಷ್ಟ ಇರುವ ಶಿಕ್ಷಣ ಇಲಾಖೆ ಕೊಡಿ. ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು ಎಂದು ಮಧು ಬಂಗಾರಪ್ಪ ಹೇಳಿದರು.
ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಟ್ರಸ್ಟ್ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ, ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಕ್ಷಣ ಕೊಟ್ಟರೇ ನಿಭಾಯಿಸುತ್ತೇನೆ ಸರ್ ಎಂದು ಸಿದ್ದರಾಮಯ್ಯ ಅವರಲ್ಲಿ ಹೇಳಿಕೊಂಡೇ. ಬಳಿಕ ಅದೇ ಖಾತೆಯನ್ನು ನನ್ನ ಹೆಗಲಿಗೆ ವಹಿಸಿದರು ಎಂದರು.
ಇಲಾಖೆಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆಗಳಿವೆ. ಸರ್ಕಾರಿ ಶಾಲೆಗಳು ಸಾಕಷ್ಟು ಸುಧಾರಣೆ ಆಗಬೇಕಿದೆ. ಇದಕ್ಕೆ ಸಿಎಸ್‌ಆರ್ ಫಂಡ್ ಬಳಕೆ ಮಾಡಿಕೊಳ್ಳಲು ಚಿಂತನೆ ಮಾಡಲಾಗಿದೆ. ಇಲಾಖೆ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಲು ಆರ್ಥಿಕ ಇಲಾಖೆ ಸಹಕಾರ ಸಿಗುತ್ತಿಲ್ಲ. ಅಧಿಕಾರದ ನೂರು ದಿನಗಳಲ್ಲಿ ಪ್ರತಿ ದಿನ ಮೂರು ಗಂಟೆಗಳ ಕಾಲ ಇಲಾಖೆ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಪಾಠ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.